ಕನ್ನಡಪ್ರಭ ವಾರ್ತೆ ಮಡಿಕೇರಿ
ನಗರದ ಓಂಕಾರ ಸದನದಲ್ಲಿ ಆಯೋಜಿತ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 11 ಸಾಧಕರಿಗೆ ಸಮರ್ಥ ಕನ್ನಡಿಗ ಪ್ರಶಸ್ತಿ ವಿತರಿಸಿ ಮಾತನಾಡಿದ ರಾಜಲಕ್ಷ್ಮಿ ಗೋಪಾಲಕೃಷ್ಣ, ವಿವಿಧ ರಂಗದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸುವ ಕಾರ್ಯ ಶ್ಲಾಘನೀಯ. ಇಂಥ ಪ್ರಶಸ್ತಿ, ಸನ್ಮಾನಗಳು ಸಾಧಕರಿಗೆ ತಮ್ಮ ಕಾರ್ಯಕ್ಷೇತ್ರದಲ್ಲಿ ಮತ್ತಷ್ಟು ಸಾಧನೆಗೆ ಪ್ರೇರಣೆಯಾಗುತ್ತದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಹೆಚ್ ಟಿ ಮಾತನಾಡಿ, ಕರ್ನಾಟಕಕ್ಕೆ ರಾಜ್ಯದ ಸ್ಥಾನ ದೊರಕಿ 68 ವರ್ಷಗಳೇ ಕಳೆದರೂ ಕನ್ನಡ ಸಾಹಿತ್ಯ ಸಂಸ್ಕೃತಿಗಾಗಿನ ಹೋರಾಟಗಳು ಅಂತ್ಯ ಕಾಣುತ್ತಿಲ್ಲ, ಬದಲಿಗೆ ದಿನೇ ದಿನೇ ಪರಭಾಷೆಯ ಸವಾರಿ ಕನ್ನಡದ ಮೇಲೆ ಹೆಚ್ಚುತ್ತಲೇ ಇದೆ, ಬಾಲ್ಯದಲ್ಲಿಯೇ ಸಂಸ್ಕಾರದ ಜತೆಜತೆಗೇ ಮಕ್ಕಳಲ್ಲಿ ಕನ್ನಡ ಭಾಷೆ, ಸಾಹಿತ್ಯ ಪ್ರೇಮವನ್ನು ಕಲಿಸಿದರೆ ಕನ್ನಡ ಎಂದೆಂದಿಗೂ ಚಿರನೂತನವಾಗಿ ಉಳಿಯುತ್ತದೆ ಎಂದು ಅಭಿಪ್ರಾಯಪಟ್ಟರು.ಕೋವಿಡ್ ಲಾಕ್ ಡೌನ್ ಸಂದರ್ಭ ಮಕ್ಕಳಿಗೆ ಮೊಬೈಲ್ ಮೂಲಕ ಪಾಠ ಹೇಳಿದ್ದೇ ತಪ್ಪಾದಂತಿದೆ, ಲಸಿಕೆಯ ಅಡ್ಡಪರಿಣಾಮಗಳ ಜತೆಗೇ ಮಕ್ಕಳಲ್ಲಿ ಮೊಬೈಲ್ ಚಟದ ಅಡ್ಡಪರಿಣಾಮ ಸಾಕಷ್ಟು ಅಪಾಯವನ್ನು ತಂದೊಡ್ಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ಅನಿಲ್, ಹಿರಿಯರಿಗೆ ಗೌರವ ಕೊಡುವ ಸಂಸ್ಕೃತಿಯನ್ನೇ ಮಕ್ಕಳು ಮರೆಯುತ್ತಾ ಮೊಬೈಲ್ ಲೋಕದಲ್ಲಿ ವಿಹರಿಸುತ್ತಾ ತಮ್ಮದೇ ಪ್ರಪಂಚವನ್ನು ಸೖಷ್ಟಿಸಿಕೊಂಡು ಬಿಟ್ಟಿದ್ದಾರೆ. ಪೋಷಕರ ಮಾತೂ ಸಹಿಸಲಾಗದ ದುಸ್ಥಿತಿಗೆ ಅನೇಕ ಮಕ್ಕಳು ತಲುಪಿರುವುದು ನವ ತಂತ್ರಜ್ಞಾನದ ಕೊಡುಗೆಯಾಗಿದ್ದು ಇಂಥ ಸ್ಥಿತಿಯಿಂದ ಮಕ್ಕಳನ್ನು ಹೊರತಂದು ಸಾಹಿತ್ಯಾಭಿರುಚಿ ಮೂಡಿಸುವ ಪ್ರಯತ್ನ ಕೂಡಲೇ ಆಗಲೇಬೇಕಾದ ಅನಿವಾರ್ಯತೆಯಿದೆ ಎಂದರು. ನೂತನವಾಗಿ ಸರ್ಕಾರ ಉದ್ದೇಶಿಸಿರುವ ಆಂಗ್ಲಮಾಧ್ಯಮದ ಪಬ್ಲಿಕ್ ಶಾಲೆಗಳು ಗ್ರಾಮೀಣ ಪ್ರದೇಶಗಳಲ್ಲಿ ಕನ್ನಡದ ಮಕ್ಕಳನ್ನು ಇಂಗ್ಲೀಷ್ ವ್ಯಾಮೋಹಕ್ಕೆ ಸಿಲುಕಿಸುವ ಎಲ್ಲ ಸಾಧ್ಯತೆಯೂ ಇದ್ದು, ಹುಯ್ಯೋ ಹುಯ್ಯೋ ಮಳೆರಾಯ ಹಾಡಿನ ಬದಲಿಗೆ ರೇನ್ ರೇನ್ ಗೋ ಎವೇ ಎಂಬ ಇಂಗ್ಲೀಷ್ ಹಾಡು ಹಳ್ಳಿಯ ಮಕ್ಕಳಲ್ಲಿಯೂ ಕೇಳಿಬರುವ ಸಾಧ್ಯತೆ ನಿಚ್ಚಳವಾಗಿದೆ ಎಂದೂ ಅನಿಲ್ ಹೆಚ್ ಟಿ ಆತಂಕ ವ್ಯಕ್ತಪಡಿಸಿದರು.
ಮಡಿಕೇರಿ ಜೀವವಿಮಾ ನಿಗಮದ ಶಾಖಾಧಿಕಾರಿ ದೀಪಕ್ ಕುಮಾರ್ ಸುರ ಮಾತನಾಡಿ, ಕನ್ನಡ ಭಾಷೆಯನ್ನು ಕಲಿಯುವುದು ಸುಲಭವಾಗಿದ್ದು ಪರಭಾಷಿಕರೂ ಸುಲಭವಾಗಿ ಕನ್ನಡ ಕಲಿತು ಸಾಹಿತ್ಯ ಪ್ರೇಮಿಗಳಾಗಬೇಕೆಂದು ಕೋರಿದರು.
ಸಮರ್ಥ ಕನ್ನಡಿಗರು ಸಂಸ್ಥೆಯಿಂದ ವಾರ್ಷಿಕ ಸನ್ಮಾನಕ್ಕೆ ಭಾಜನರಾದವರು
ಸನ್ಮಾನವನ್ನು ಹಿರಿಯ ಲೇಖಕಿ ರಾಜಲಕ್ಷ್ಮಿ ಗೋಪಾಲಕೃಷ್ಣ ನೆರವೇರಿಸಿದರು. ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಎಚ್.ಟಿ, ಜಿಲ್ಲಾ ಎಲ್ ಐಸಿ ಯ ಶಾಖಾಧಿಕಾರಿ ದೀಪಕ್ ಕುಮಾರ್, ಸಮರ್ಥ ಕನ್ನಡಿಗ ಸಂಸ್ಥೆಯ ಸಂಸ್ಥಾಪಕ ಲಿಂಗೇಶ್ ಹುಣಸೂರು, ರಾಜ್ಯ ಪ್ರಧಾನ ಸಂಚಾಲಕ ಆನಂದ್ ದೆಗ್ಗನಹಳ್ಳಿ, ಜಯಕುಮಾರ್ ಹಾಜರಿದ್ದರು.