17 ದಿನದಲ್ಲಿ 600 ಟನ್‌ ಮಾವು ಮಾರಾಟ

KannadaprabhaNewsNetwork |  
Published : Jun 22, 2026, 04:00 AM IST
Mango

ಸಾರಾಂಶ

ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ನಡೆಯುತ್ತಿರುವ ಮಾವು- ಹಲಸು ಮೇಳಕ್ಕೆ ಜನತೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಕೇವಲ 17 ದಿನದಲ್ಲಿ 500ರಿಂದ 600 ಟನ್‌ಗೂ ಅಧಿಕ ಮಾವು ಮಾರಾಟವಾಗಿದ್ದು ಬರೋಬ್ಬರಿ ₹6 ಕೋಟಿಗೂ ಹೆಚ್ಚು ವಹಿವಾಟು ನಡೆದಿದೆ.

 ಬೆಂಗಳೂರು :  ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ನಡೆಯುತ್ತಿರುವ ಮಾವು- ಹಲಸು ಮೇಳಕ್ಕೆ ಜನತೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಕೇವಲ 17 ದಿನದಲ್ಲಿ 500ರಿಂದ 600 ಟನ್‌ಗೂ ಅಧಿಕ ಮಾವು ಮಾರಾಟವಾಗಿದ್ದು ಬರೋಬ್ಬರಿ ₹6 ಕೋಟಿಗೂ ಹೆಚ್ಚು ವಹಿವಾಟು ನಡೆದಿದೆ.

ಕಾರ್ಬೈಡ್‌ ಮುಕ್ತ ಮಾವಿನ ಹಣ್ಣುಗಳನ್ನು ಗ್ರಾಹಕರಿಗೆ ಒದಗಿಸುವುದು, ದಳ್ಳಾಳಿಗಳ ಹಾವಳಿ ತಡೆ ಹಾಗೂ ರೈತರಿಗೆ ನೇರ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರಾಟ ನಿಗಮ ಪ್ರತಿ ವರ್ಷದಂತೆ ಈ ಬಾರಿಯೂ ಆಯೋಜಿಸಿದ್ದ ಮಾವು ಮೇಳಕ್ಕೆ ಗ್ರಾಹಕರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ವಾರಾಂತ್ಯದಲ್ಲಿ ಉತ್ತಮ ವ್ಯಾಪಾರ ಆಗುತ್ತಿದೆ. ಉಳಿದ ದಿನಗಳಲ್ಲಿ ನಿರೀಕ್ಷಿಸಿದಷ್ಟು ವಹಿವಾಟು ನಡೆಯದಿದ್ದರೂ, ನಷ್ಟವೇನು ಆಗುತ್ತಿಲ್ಲ ಎನ್ನುತ್ತಾರೆ ಮಾವು ಬೆಳೆಗಾರ ರೈತರು.

ಮಿಯಾಜಾಕಿ ತಳಿಯ 1 ಹಣ್ಣಿಗೆ ₹2 ಸಾವಿರ

ಮೇಳದಲ್ಲಿ ಮಲ್ಲಿಕಾ, ಆಲ್ಫಾನ್ಸ್‌, ದಶೇರಿ, ಸಕ್ಕರೆಗುತ್ತಿ, ಇಮಾಮ್‌ಪಸಂದ್‌, ಮಲಗೋವ ಹಣ್ಣುಗಳಿಗೆ ಹೆಚ್ಚಿನ ಬೇಡಿಕೆ ಇದೆ. ರಸಪುರಿ, ಕೇಸರ್‌, ನೀಲಾಂ, ಸೇಂಧೂರ, ಕಾಲಾಪಾಡ್‌, ಕೇಸರ್‌, ತೋತಾಪುರಿ ನಿರೀಕ್ಷಿಸಿದಷ್ಟು ಕೊಳ್ಳುವವರಿಲ್ಲ. ಆರಂಭದಲ್ಲಿ ಮಿಯಾಜಾಕಿ ತಳಿಯ ಬಗ್ಗೆ ಕೆಲ ಗ್ರಾಹಕರು ಕುತೂಹಲದಿಂದ ಖರೀದಿಗೆ ಮುಂದಾಗಿದ್ದರು. ಮಿಯಾಜಾಕಿ ತಳಿಯ 1 ಹಣ್ಣಿಗೆ ₹2 ಸಾವಿರ ಮತ್ತು ರೆಡ್‌ಐವರಿ ತಳಿಯ 1 ಹಣ್ಣಿಗೆ ₹500 ರಂತೆ ಮಾರಾಟ ಮಾಡಲಾಗಿತ್ತು. ಬಳಿಕ ಈ ತಳಿಯ ಬಗ್ಗೆ ಯಾರು ಆಸಕ್ತಿ ವಹಿಸಲಿಲ್ಲ ಎನ್ನಲಾಗಿದೆ.

ಮೇಳದಲ್ಲಿ ಮಾವು ಬೆಳೆಗಾರರಿಗೆಂದು ಉಚಿತವಾಗಿ 150 ಮಳಿಗೆಗಳನ್ನು ಕೊಡಲಾಗಿತ್ತು. ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು ಸೇರಿದಂತೆ ಕೆಲ ಜಿಲ್ಲೆಗಳಿಂದ ರೈತರು ಮಾವು ಮಾರಾಟಕ್ಕೆ ಬಂದಿದ್ದಾರೆ. ಮೂರು ವಾರಗಳಲ್ಲಿ 500ರಿಂದ 600 ಟನ್‌ ವಿವಿಧ ತಳಿಯ ಮಾವು ಮಾರಾಟವಾಗಿದ್ದು, 5ರಿಂದ 6 ಕೋಟಿ ರು.ಗಳಷ್ಟು ವಹಿವಾಟು ನಡೆದಿರಬಹುದು ಎಂದು ಅಂದಾಜಿಸಲಾಗಿದೆ.

ಜೂ.30ಕ್ಕೆ ಮೇಳ ಮುಕ್ತಾಯವಾಗಲಿದೆ. ಇನ್ನು ಒಂದುವಾರ ಮೇಳ ಇರಲಿದ್ದು ಗ್ರಾಹಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ವೇದಮೂರ್ತಿ ಅವರು ಕೋರಿದರು.

₹10 ಕೋಟಿ ವಹಿವಾಟು ನಿರೀಕ್ಷೆ

ಮೇಳ ಮುಗಿಯುವುದರೊಳಗೆ 10 ಕೋಟಿ ರು.ವಹಿವಾಟು ನಡೆಯಬಹುದು ಎಂಬ ನಿರೀಕ್ಷೆಯಿದೆ. ಸಾವಿರ ಟನ್‌ ಮಾವು ಮಾರಾಟ ಆಗಲಿದೆ ಎಂದು ಅಂದಾಜಿಸಲಾಗಿದೆ. ಈಗಷ್ಟೇ ತೋತಾಪುರಿ ಮಾರುಕಟ್ಟೆಗೆ ಬರಲು ಆರಂಭಿಸಿದ್ದು, ರೈತರಿಗೆ ನಿರೀಕ್ಷಿತ ಮಟ್ಟದಲ್ಲಿ ಬೆಲೆ ಸಿಗುತ್ತಿಲ್ಲ. ಆದ್ದರಿಂದ ಬೆಂಬಲ ಬೆಲೆ ನೀಡುವಂತೆ ಮನವಿ ಮಾಡಲಾಗಿದೆ ಎಂದು ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ವೇದಮೂರ್ತಿ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ರಾಜ್ಯ ಸಚಿವರಿಂದ ಬರ ಪರಿಸ್ಥಿತಿ ಅವಲೋಕನ
ಮಕ್ಕಳ ಸಹಾಯವಾಣಿ ಸಿಬ್ಬಂದಿಗಿಲ್ಲ 10 ತಿಂಗಳಿಂದ ವೇತನ