ಕನ್ನಡಪ್ರಭ ವಾರ್ತೆ ಬೆಂಗಳೂರು:
ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಸೋಮವಾರ ಆಯೋಜಿಸಿದ್ದ ‘ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ವಾಲ್ಮೀಕಿ ಪ್ರಶಸ್ತಿ ಪ್ರದಾನ ಸಮಾರಂಭ’ದಲ್ಲಿ ಪಾಲ್ಗೊಂಡು ಮಾತನಾಡಿ ಎಸ್ಸಿ, ಎಸ್ಟಿ ಸಮುದಾಯಗಳ ಅಭಿವೃದ್ಧಿಗೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಎಸ್ಸಿಪಿ, ಟಿಎಸ್‌ಪಿ ಯೋಜನೆ ಜಾರಿಗೆ ತಂದರು. ಯೋಜನೆಯಡಿ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್‌ನಲ್ಲಿ ಮೀಸಲಿರಿಸಿದ ಪೂರ್ಣ ಹಣವನ್ನು ಹಿಂದೆ ಸಮಾಜ ಕಲ್ಯಾಣ ಇಲಾಖೆಯಿಂದ ನೇರವಾಗಿ ಖರ್ಚು ಮಾಡಲಾಗುತ್ತಿತ್ತು. ಆದರೆ, ಈಗ ವಿವಿಧ ಇಲಾಖೆಗಳಿಗೆ ಹಂಚಿಕೆ ಮಾಡಲಾಗಿದೆ. ಆದರೆ, ಇದರಲ್ಲಿ 6000 ಕೋಟಿ ರು.ಗಳಷ್ಟು ಅನುದಾನ ವಿವಿಧ ಇಲಾಖೆಗಳಲ್ಲಿ ಖರ್ಚಾಗದೆ ಹಾಗೇ ಇದೆ. ಈ ವಿಚಾರವಾಗಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಒಂದು ಸಭೆ ಆಗಬೇಕು. 34 ಇಲಾಖೆಗಳ ಸಚಿವರೂ ಆ ಅನುದಾನವನ್ನು ಸಮರ್ಪಕವಾಗಿ ಖರ್ಚು ಮಾಡಲು ಕ್ರಮ ವಹಿಸಬೇಕು ಎಂದರು.
100 ಮಂದಿ ಬದಲು ಹಾಸ್ಟೆಲ್‌ನಲ್ಲಿ 150 ಮಂದಿ!:ಈ ಹಿಂದೆ ಇದ್ದ ಎಲ್ಲ ಸಚಿವರು ಒಳ್ಳೆ ಕೆಲಸ ಮಾಡಿಕೊಂಡು ಬಂದಿದ್ದಾರೆ. ನಾನು ಅದನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇನೆ. ಇವತ್ತು ಎಸ್ಸಿ, ಎಸ್ಟಿ ಸಮುದಾಯದ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಹಾಸ್ಟೆಲ್‌ಗಳಿಲ್ಲ. 100 ಜನರಿರಬೇಕಾದ ಹಾಸ್ಟೆಲ್‌ಗಳಲ್ಲಿ 150 ಜನ ಇದ್ದಾರೆ. ಇದನ್ನೆಲ್ಲ ಸರಿಪಡಿಸಲು ಹೆಚ್ಚುವರಿ ಹಾಸ್ಟೆಲ್‌ಗಳನ್ನು ಕಟ್ಟುವ ಕೆಲಸ ಆಗಬೇಕು. ಇದಕ್ಕಾಗಿ ಈ ವರ್ಷದಲ್ಲಿ 68 ಹೊಸ ವಸತಿ ಶಾಲೆಗಳನ್ನು ಮಾಡಲು ಕಾರ್ಯಕ್ರಮ ರೂಪಿಸಲಾಗಿದೆ. ಪ್ರತಿ ಹೋಬಳಿಗೊಂದು ವಸತಿ ಶಾಲೆ ಇರಬೇಕು ಅಂತ ಸೂಚನೆ ಕೊಟ್ಟಿದ್ದೇನೆ ಎಂದರು.
ಸೂರ್ಯ ಚಂದ್ರರು ಇರುವವರೆಗೂ ವಾಲ್ಮೀಕಿ ಅವರು ಬರೆದ ರಾಮಾಯಣ ಇರಲಿದೆ. ಎಲ್ಲ ಮಠ ಮತ್ತು ದೇವಸ್ಥಾನಗಳಲ್ಲೂ ಸುಂದರಕಾಂಡದ ಪಠಣ ಮಾಡುತ್ತಾರೆ. ಇದರ ಮುಖ್ಯ ಉದ್ದೇಶ ಮಳೆ, ಬೆಳೆ ಚೆನ್ನಾಗಿ ಆಗಬೇಕು ಅನ್ನುವುದು. ಹಾಗಾಗಿ ನಾನೂ ಪ್ರತಿವರ್ಷ ಪಠಣ ಮಾಡುತ್ತೇನೆ ಎಂದು ಇದೇ ವೇಳೆ ಸಚಿವ ಮುನಿಯಪ್ಪ ಹೇಳಿದರು.