ಧರ್ಮ-ಅಧರ್ಮಗಳ ನಡುವೆ ಸಂಘರ್ಷಗಳಾದಾಗ ಕೊನೆಯಲ್ಲಿ ಧರ್ಮಕ್ಕೆ ಜಯವಾಗುತ್ತದೆ ಎಂಬುದನ್ನು ರಾಮಾಯಣದ ಮೂಲಕ ಜಗತ್ತಿಗೆ ತೋರಿಸಿ ಕೊಟ್ಟ ಮಹಿರ್ಷಿ ವಾಲ್ಮೀಕಿ.
ಧಾರವಾಡ:
ಆದಿಕವಿ ಶ್ರೀಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸೋಮವಾರ ಜಿಲ್ಲಾಡಳಿತ ಸೇರಿದಂತೆ ವಿವಿಧ ಶಾಲಾ-ಕಾಲೇಜು ಹಾಗೂ ಸಂಘ-ಸಂಸ್ಥೆಗಳಲ್ಲಿ ಆಚರಿಸಲಾಯಿತು.ಜಿಲ್ಲಾಧಿಕಾರಿ ಕಚೇರಿಯ ನೂತನ ಸಭಾಭವನದಲ್ಲಿ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ ಪುಷ್ಪಾರ್ಚನೆ ಮಾಡಿ, ಗೌರವ ಸಲ್ಲಿಸಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಗಂಗಾಧರ ದೊಡ್ಡಮನಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಎಸಿಪಿ ಪ್ರಶಾಂತ ಸಿದ್ದನಗೌಡರ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.
ಜೆಎಸ್ಸೆಸ್ ಸಂಸ್ಥೆ:ಧರ್ಮ-ಅಧರ್ಮಗಳ ನಡುವೆ ಸಂಘರ್ಷಗಳಾದಾಗ ಕೊನೆಯಲ್ಲಿ ಧರ್ಮಕ್ಕೆ ಜಯವಾಗುತ್ತದೆ ಎಂಬುದನ್ನು ರಾಮಾಯಣದ ಮೂಲಕ ಜಗತ್ತಿಗೆ ತೋರಿಸಿ ಕೊಟ್ಟ ಮಹಿರ್ಷಿ ವಾಲ್ಮೀಕಿ ಜಯಂತಿಯನ್ನು ಜೆಎಸ್ಸೆಸ್ ಸಂಸ್ಥೆಯಲ್ಲಿ ಆಚರಿಸಲಾಯಿತು. ಅವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿದ ಕಾರ್ಯದರ್ಶಿ ಡಾ. ಅಜಿತ ಪ್ರಸಾದ, ರಾಮಾಯಣವು ಕೇವಲ ಒಂದು ಕಥೆಯಲ್ಲ, ಅದು ಮಾನವ ಜೀವನಕ್ಕೆ ಮಾರ್ಗದರ್ಶನ ನೀಡುವ ಮಹಾನ್ ಗ್ರಂಥ ಎಂದರು. ಆಧುನಿಕ ಯುಗದಲ್ಲಿಯೂ ರಾಮಾಯಣದ ಸಂದೇಶಗಳು ಪ್ರಸ್ತುತ. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ನಾವು ಎಷ್ಟೇ ಮುಂದುವರಿದರೂ ನಮ್ಮ ಜೀವನದಲ್ಲಿ ನೈತಿಕ ಮೌಲ್ಯಗಳು ಮತ್ತು ಮಾನವೀಯತೆ ಅತ್ಯಗತ್ಯ ಎಂದು ಹೇಳಿದರು.
ಆರ್.ವಿ. ಚಿಟಗುಪ್ಪಿಯವರು ಮಾತನಾಡಿ, ಮಹರ್ಷಿ ವಾಲ್ಮೀಕಿಯವರು ತಮ್ಮ ಸಾಹಿತ್ಯದ ಮೂಲಕ ಭಾರತೀಯ ಸಮಾಜಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಅವರ ರಾಮಾಯಣವು ಅನೇಕ ಭಾಷೆಗಳಲ್ಲಿ ಅನುವಾದಗೊಂಡು, ತಲೆಮಾರುಗಳಿಂದ ಜನರಿಗೆ ಸ್ಫೂರ್ತಿ ನೀಡುತ್ತಿದೆ. ಅವರ ಕಾವ್ಯವು ಭಾರತೀಯ ಸಂಸ್ಕೃತಿ, ಕುಟುಂಬ ವ್ಯವಸ್ಥೆ ಮತ್ತು ನೈತಿಕ ಚಿಂತನೆಗಳ ಮೇಲೆ ಆಳವಾದ ಪ್ರಭಾವ ಬೀರಿದೆ ಎಂದರು. ಡಾ. ಸೂರಜ್ ಜೈನ್, ಮಹಾವೀರ ಉಪಾದ್ಯೆ, ವಿವೇಕ ಲಕ್ಷ್ಮೇಶ್ವರ ಇದ್ದರು.ಎಸ್ಡಿಎಂ ಕಾಲೇಜು:
ಇಲ್ಲಿಯ ಎಸ್ಡಿಎಂ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಜಯಂತಿಯಲ್ಲಿ ಪ್ರಾಂಶುಪಾಲರಾದ ಡಾ. ಐ. ಶ್ರೀಧರ ಮಾತನಾಡಿ, ಭಾರತೀಯ ಸಾಹಿತ್ಯ ಮತ್ತು ಸಂಸ್ಕೃತಿಗೆ ವಾಲ್ಮೀಕಿ ಅವರು ಅಗಾಧ ಕೊಡುಗೆ ನೀಡಿದ್ದಾರೆ ಎಂದರು. ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರೊ. ಎಸ್.ಎಸ್. ಕೆರೂರು, ಡೀನ್ ಡಾ. ಕೇಶವ ಜೋಶಿ, ಡಾ. ಎಸ್.ಬಿ. ಕುಲಕರ್ಣಿ, ಪ್ರೊ. ಜಯತೀರ್ಥ ವಡವಿ ಇದ್ದರು. ಜೆಎಸ್ಎಸ್ ಕೆ.ಎಚ್. ಕಬ್ಬೂರ್ ಕಾಲೇಜಿನಲ್ಲಿ ನಡೆದ ಜಯಂತಿಯಲ್ಲಿ ಪ್ರಾಚಾರ್ಯರಾದ ವೇದಾವತಿ ತಿವಾರಿ, ಜ್ಯೋತಿ ಕಟಗಿ, ಶಿವರಾಜ್ ಧಾನವಾಡ್ಕರ್ ಇದ್ದರು.ಮಹಾಂತ ಕಾಲೇಜು:
ಇಲ್ಲಿಯ ರಾಯಪುರದ ಮಹಾಂತ ಕಾಲೇಜಿನಲ್ಲಿ ವಿದ್ಯಾರ್ಥಿ ಒಕ್ಕೂಟ ಹಾಗೂ ಎನ್ಎಸ್ಎಸ್ ಘಟಕದ ಸಂಯುಕ್ತಾಶ್ರಯದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಶಿಕ್ಷಣ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಶೇಖರ್ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾದ ಪ್ರೊ. ಸಿ.ಕೆ. ಹುಬ್ಬಳ್ಳಿ, ಮಂಜುನಾಥ ಕುಲಾವಿ, ಪ್ರೊ.ಜಿ.ಸಿ. ಕಡ್ಡಿಪುಡಿ, ಡಾ. ಪ್ರದೀಪ್, ಡಾ. ಲತಾ ಶೆಟ್ಟೆಪ್ಪನವರ್ ಇದ್ದರು.