ಬದುಕಿಗೆ ಆಸರೆಯಾಗಿರುವ ಆಟೋ ಸಾವಿರಾರು ಕಿಲೋಮೀಟರ್ ದೂರದ ಕಾಶ್ಮೀರದತ್ತ ನಾಲ್ವರು ಸ್ನೇಹಿತರ ಕನಸನ್ನು ಹೊತ್ತು ಸಾಗುತ್ತಿದೆ. ಊರಿನ ರಸ್ತೆಗಳಲ್ಲಿ ಸಲೀಸಾಗಿ ಓಡುತ್ತಿದ್ದ ಇದು, ಇಂದು ಹಿಮಾಚ್ಛಾದಿತ ಪರ್ವತಗಳ ನಡುವೆ ಕೊರೆಯುವ ಚಳಿಯನ್ನು ಎದುರಿಸುತ್ತಿದೆ. 15 ಸಾವಿರ ಅಡಿ ಎತ್ತರದಲ್ಲಿ ಗೇರ್ ಜಾಮ್ ಆಗಿ ನಿಂತರೂ, ಈ ಆಟೋ ಹೊತ್ತೊಯ್ದ ಕನಸಿನ ಪಯಣ ಮಾತ್ರ ನಿಂತಿಲ್ಲ!.

ವಜ್ರ ಗುಜರನ್ ಮಾಡೂರು

ಉಳ್ಳಾಲ : ಬದುಕಿಗೆ ಆಸರೆಯಾಗಿರುವ ಆಟೋ ಸಾವಿರಾರು ಕಿಲೋಮೀಟರ್ ದೂರದ ಕಾಶ್ಮೀರದತ್ತ ನಾಲ್ವರು ಸ್ನೇಹಿತರ ಕನಸನ್ನು ಹೊತ್ತು ಸಾಗುತ್ತಿದೆ. ಊರಿನ ರಸ್ತೆಗಳಲ್ಲಿ ಸಲೀಸಾಗಿ ಓಡುತ್ತಿದ್ದ ಇದು, ಇಂದು ಹಿಮಾಚ್ಛಾದಿತ ಪರ್ವತಗಳ ನಡುವೆ ಕೊರೆಯುವ ಚಳಿಯನ್ನು ಎದುರಿಸುತ್ತಿದೆ. 15 ಸಾವಿರ ಅಡಿ ಎತ್ತರದಲ್ಲಿ ಗೇರ್ ಜಾಮ್ ಆಗಿ ನಿಂತರೂ, ಈ ಆಟೋ ಹೊತ್ತೊಯ್ದ ಕನಸಿನ ಪಯಣ ಮಾತ್ರ ನಿಂತಿಲ್ಲ!.

ಈ ಸಾಹಸಕ್ಕೆ ಕೈಹಾಕಿರುವುದು ದ.ಕ. ಜಿಲ್ಲೆ ಉಳ್ಳಾಲ ತಾಲೂಕಿನ ದೇರಳಕಟ್ಟೆಯ ನಾಲ್ವರು ಯುವಕರು. ಸುಮಾರು ಆರೇ‍ಳು ವರ್ಷಗಳಿಂದ ಮನಸ್ಸಿನಲ್ಲಿದ್ದ ಕಾಶ್ಮೀರ ಪ್ರವಾಸದ ಕನಸಿಗೆ ಅ.10ರಂದು ಚಾಲನೆ ನೀಡಿದವರು ದೇರಳಕಟ್ಟೆಯ ಸಾದಿಕ್, ಹಜೀಮ್, ಹಸನ್ ಮತ್ತು ಹಫೀದ್. ಐಷಾರಾಮಿ ಕಾರುಗಳ ಬದಲಿಗೆ ಸಾಮಾನ್ಯ ಆಟೋರಿಕ್ಷಾವನ್ನೇ ಆಯ್ಕೆ ಮಾಡಿಕೊಂಡ ಈ ನಾಲ್ವರು ಸ್ನೇಹಿತರು, ತಮ್ಮ ಕನಸಿಗೆ ಅದನ್ನೇ ಸಾರಥಿಯನ್ನಾಗಿಸಿಕೊಂಡಿದ್ದಾರೆ.

ಈ ಹಿಂದೆ ನಾಲ್ವರೂ ಆಟೋರಿಕ್ಷಾ ಚಾಲನೆ ಹಾಗೂ ಅದಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು. ಪ್ರಸ್ತುತ ಸಾದಿಕ್ ವೈಫೈ ಟೆಕ್ನಿಷಿಯನ್, ಹಜೀಮ್ ವೆಲ್ಡಿಂಗ್ ಕ್ಷೇತ್ರದಲ್ಲಿ, ಹಸನ್ ಆಟೋ ಚಾಲಕರಾಗಿ ಹಾಗೂ ಹಫೀದ್ ಕ್ರಾಫ್ಟ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ.ಈ ಹಿಂದೆ ಆಟೋರಿಕ್ಷಾದಲ್ಲೇ ಮಡಿಕೇರಿ, ಚಿಕ್ಕಮಗಳೂರು ಸೇರಿದಂತೆ ಹಲವು ಪ್ರದೇಶಗಳಿಗೆ ಪ್ರಯಾಣಿಸಿದ್ದರು. ಕಾಶ್ಮೀರದವರೆಗೂ ಇದೇ ರೀತಿಯಲ್ಲಿ ತೆರಳಬೇಕೆಂಬ ಆಸೆ ಹಲವು ಬಾರಿ ಮೂಡಿದ್ದರೂ, ವಿವಿಧ ಕಾರಣಗಳಿಂದ ಯೋಜನೆ ಮುಂದೂಡಿಕೆಯಾಗುತ್ತಿತ್ತು. ಸಾದಿಕ್ ಅವರ 2017ರ ಮಾದರಿಯ ಆಟೋರಿಕ್ಷಾವನ್ನು ಈ ಪ್ರಯಾಣಕ್ಕೆ ಸಿದ್ಧಪಡಿಸಲಾಗಿದೆ. ವಾಹನದ ತಾಂತ್ರಿಕ ಸ್ಥಿತಿ ಪರಿಶೀಲಿಸಿ, ದೀರ್ಘ ಪ್ರಯಾಣಕ್ಕೆ ಅಗತ್ಯ ಸಿದ್ಧತೆ ಮಾಡಿಕೊಂಡು ಯಾತ್ರೆ ಆರಂಭಿಸಿದ್ದಾರೆ.

1.5 ಲಕ್ಷ ರು. ಅಂದಾಜು ವೆಚ್ಚ:

ಪ್ರವಾಸಕ್ಕೆ ಸುಮಾರು 1.5 ಲಕ್ಷ ರು. ವೆಚ್ಚ ಅಂದಾಜು ಮಾಡಿಕೊಂಡು ಹೊರಟಿದ್ದ ಸ್ನೇಹಿತರಿಗೆ, ಈಗಾಗಲೇ ಒಂದು ಲಕ್ಷ ರು.ಗಿಂತ ಅಧಿಕ ಖರ್ಚಾಗಿದೆ. ಪ್ರಯಾಣ ಪೂರ್ಣಗೊಳ್ಳುವ ವೇಳೆಗೆ ಒಟ್ಟು ವೆಚ್ಚ ಎಷ್ಟಾಗಬಹುದು ಎಂಬುದನ್ನು ಕಾದು ನೋಡಬೇಕಿದೆ ಎಂದು ಹಫೀದ್ ತಿಳಿಸಿದ್ದಾರೆ.ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ, ಹರಿಯಾಣ ಹಾಗೂ ದೆಹಲಿ ಮಾರ್ಗವಾಗಿ ಕಾಶ್ಮೀರ ತಲುಪಿದ್ದಾರೆ. ಮಧ್ಯಪ್ರದೇಶದಲ್ಲಿ ಆಟೋರಿಕ್ಷಾಕ್ಕೆ ಎಲ್‌ಪಿಜಿ ದೊರೆತಿದ್ದು, ನಂತರ ಪೆಟ್ರೋಲ್ ಬಳಸಿ ಪ್ರಯಾಣ ಮುಂದುವರಿಸಿದ್ದಾರೆ.ಕಾಶ್ಮೀರದಲ್ಲಿ ನಾಲ್ಕು ದಿನಗಳ ಕಾಲ ತಂಗಿದ್ದ ಸ್ನೇಹಿತರು, ಲಡಾಖ್‌ನಲ್ಲಿ ಎರಡು ದಿನಗಳಿಂದ ಇದ್ದು ಅಲ್ಲಿಂದ ಮನಾಲಿಯತ್ತ ಪ್ರಯಾಣ ಬೆಳೆಸಿದ್ದಾರೆ. ಬಳಿಕ ರಾಜಸ್ಥಾನ ಮಾರ್ಗವಾಗಿ ಊರಿಗೆ ಮರಳುವ ಯೋಜನೆ ರೂಪಿಸಿದ್ದಾರೆ. ಆದರೆ ಹವಾಮಾನ ಮತ್ತು ವಾಹನದ ತಾಂತ್ರಿಕ ಸಮಸ್ಯೆಗಳಿಂದಾಗಿ ಪ್ರಯಾಣದ ಅವಧಿ ಹೆಚ್ಚಾಗುವ ಸಾಧ್ಯತೆಯಿದೆ. ಇನ್ನೂ ಕನಿಷ್ಠ 12 ದಿನಗಳು ಬೇಕಾಗಬಹುದು ಎಂದು ಅಂದಾಜಿಸಿದ್ದಾರೆ.

15 ಸಾವಿರ ಅಡಿ ಎತ್ತರದಲ್ಲಿ ಗೇರ್ ಜಾಮ್!

ಪ್ರವಾಸದ ವೇಳೆ ಎದುರಾದ ಅತಿ ದೊಡ್ಡ ಸವಾಲು ಆಟೋರಿಕ್ಷಾದ ಗೇರ್ ಜಾಮ್ ಸಮಸ್ಯೆ. ಲಡಾಖ್ ಪ್ರದೇಶದಲ್ಲಿ ಎತ್ತರದ ಪರ್ವತ ಮಾರ್ಗಗಳಲ್ಲಿ ಸಂಚರಿಸುವಾಗ ವಾಹನದ ಗೇರ್ ಜಾಮ್ ಆಗುವ ಸಮಸ್ಯೆ ಎದುರಾಗಿದೆ. ಸುಮಾರು 15 ಸಾವಿರ ಅಡಿ ಎತ್ತರದ ಪ್ರದೇಶದಲ್ಲಿ ವಾಹನದ ಗೇರ್ ಫ್ರೀಜ್ ಆಗಿದ್ದರಿಂದ ಮುಂದಕ್ಕೆ ಸಾಗಲು ತೊಂದರೆಯಾಗಿದೆ. ಈ ಸಮಸ್ಯೆಯಿಂದಾಗಿ ಒಂದು ದಿನದ ಪ್ರಯಾಣ ವ್ಯರ್ಥವಾಗಿದೆ.ಕೆಲವು ಪ್ರದೇಶಗಳಲ್ಲಿ ವಾಹನ ದುರಸ್ತಿ ಮಾಡಿಸಲು ಮೆಕ್ಯಾನಿಕ್‌ಗಳು ಸಿಗದಿರುವುದು ಮತ್ತಷ್ಟು ತೊಂದರೆ ಉಂಟುಮಾಡಿದೆ.

ಪ್ರಯಾಣದ ವೇಳೆ ತುರ್ತು ಪರಿಸ್ಥಿತಿಯನ್ನು ಎದುರಿಸಲು ಸುಮಾರು 20 ಲೀಟರ್ ಪೆಟ್ರೋಲ್ ಹೆಚ್ಚುವರಿಯಾಗಿ ಸಂಗ್ರಹಿಸಿಟ್ಟುಕೊಂಡಿದ್ದರು. ಆದರೂ, ಎತ್ತರದ ಪ್ರದೇಶಗಳಲ್ಲಿ ವಾಹನದ ತಾಂತ್ರಿಕ ಸಮಸ್ಯೆ ಎದುರಾದಾಗ ಸ್ಥಳೀಯವಾಗಿ ಅಗತ್ಯ ಸೌಲಭ್ಯಗಳು ಸಿಗದಿರುವುದು ಕಷ್ಟಕರವಾಗಿದೆ.

ಕಾಶ್ಮೀರದತ್ತ ಪ್ರಯಾಣಿಸುವಾಗ ಜಮ್ಮು ಪ್ರದೇಶದಲ್ಲಿ ರಾತ್ರಿ ತಂಗಲು ಕೊಠಡಿ ಸಿಗದೆ ಸ್ನೇಹಿತರು ಪರದಾಡುವಂತಾಯಿತು. ಅಂದು ಸುಮಾರು ಏಳು ಗಂಟೆಗಳ ಕಾಲ ಪ್ರಯಾಣಿಸಿ ತೀವ್ರ ಆಯಾಸಗೊಂಡಿದ್ದರೂ, ಮುಂದೆ ಸುಮಾರು 200 ಕಿ.ಮೀ. ಸಾಗಿದ ಬಳಿಕವಷ್ಟೇ ಕೊಠಡಿ ಸಿಗುವ ಪರಿಸ್ಥಿತಿ ಇತ್ತು. ಹೀಗಾಗಿ ಅನಿವಾರ್ಯವಾಗಿ ಪೆಟ್ರೋಲ್ ಪಂಪ್‌ನಲ್ಲೇ ರಾತ್ರಿ ಕಳೆಯಬೇಕಾಯಿತು.

ಸಾಮಾನ್ಯವಾಗಿ ಆರಂಭದ ದಿನಗಳಲ್ಲಿ ರಾತ್ರಿ 10 ಅಥವಾ 11 ಗಂಟೆಯವರೆಗೂ ಪ್ರಯಾಣಿಸಿ, ಬಳಿಕ ಹೋಟೆಲ್‌ಗಳಲ್ಲಿ ತಂಗುತ್ತಿದ್ದರು. ಆದರೆ ಈಗ ವಿಪರೀತ ಚಳಿ ಹಾಗೂ ಹವಾಮಾನ ವೈಪರೀತ್ಯದ ಕಾರಣ ಸಂಜೆ ಏಳು ಗಂಟೆಯೊಳಗೇ ಪ್ರಯಾಣ ನಿಲ್ಲಿಸಿ ಹೋಟೆಲ್‌ಗಳಲ್ಲಿ ತಂಗುವಂತಾಗಿದೆ.ದಂಡದ ಕಹಿ ಅನುಭವ: ಪ್ರವಾಸದ ಆರಂಭದಲ್ಲಿ ಮಹಾರಾಷ್ಟ್ರದಲ್ಲಿ ಪೊಲೀಸರು ಕೆಲವೊಂದು ವಿಚಾರಗಳಿಗೆ ಸಂಬಂಧಿಸಿದಂತೆ ತೊಂದರೆ ನೀಡಿದ್ದರು. ವಿವಿಧೆಡೆ ಸಂಚಾರ ನಿಯಮಗಳಿಗೆ ಸಂಬಂಧಿಸಿದಂತೆ ದಂಡವನ್ನೂ ಪಾವತಿಸಬೇಕಾಯಿತು. ಆಟೋರಿಕ್ಷಾ ಆಗಿರುವುದರಿಂದ ಎಕ್ಸ್‌ಪ್ರೆಸ್‌ವೇಗಳಲ್ಲಿ ಸಂಚರಿಸುವ ಬದಲು ಸರ್ವಿಸ್ ರಸ್ತೆಗಳನ್ನು ಬಳಸಿಕೊಂಡು ಪ್ರಯಾಣಿಸುತ್ತಿದ್ದಾರೆ. ಇದರಿಂದ ಪ್ರಯಾಣದ ಅವಧಿ ಹೆಚ್ಚಾಗುತ್ತಿದ್ದರೂ, ವಾಹನಕ್ಕೆ ಅನುಕೂಲವಾಗುವ ಮಾರ್ಗವನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.ಯುವಕರು ಧೈರ್ಯದಿಂದ ಹೊಸ ಅನುಭವಗಳನ್ನು ಪಡೆಯಲು ಮುಂದೆ ಬರಬೇಕು. ಆದರೆ ಧೈರ್ಯದ ಜತೆಗೆ ಸೂಕ್ತ ಸಿದ್ಧತೆ, ವಾಹನದ ಸ್ಥಿತಿಯ ಪರಿಶೀಲನೆ ಹಾಗೂ ಸುರಕ್ಷತೆಗೆ ಆದ್ಯತೆ ನೀಡಬೇಕು. ಎದುರಾಗುವ ಪ್ರತಿಯೊಂದು ಸವಾಲೂ ನಮಗೆ ಹೊಸ ಅನುಭವ ನೀಡುತ್ತಿದೆ ಎಂದು ನಾಲ್ವರು ಸ್ನೇಹಿತರು ‘ಕನ್ನಡಪ್ರಭ’ ಜೊತೆ ಖುಷಿ ಹಂಚಿಕೊಂಡಿದ್ದಾರೆ.