ಮಡಿಕೇರಿ ಪಿಎಲ್‌ಡಿ ಬ್ಯಾಂಕ್‌ನ 63ನೇ ವಾರ್ಷಿಕ ಮಹಾಸಭೆ : ಪ್ರಗತಿಪರ ರೈತರಿಗೆ ಸನ್ಮಾನ

KannadaprabhaNewsNetwork |  
Published : Aug 31, 2026, 03:00 AM IST
ಚಿತ್ರ :  30ಎಂಡಿಕೆ5 : ಐವರು ಪ್ರಗತಿಪರ ರೈತರನ್ನು ಸನ್ಮಾನಿಸಲಾಯಿತು.  | Kannada Prabha

ಸಾರಾಂಶ

ಮಡಿಕೇರಿ ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ 63ನೇ ವಾರ್ಷಿಕ ಮಹಾಸಭೆ ನಗರದ ಬಾಲಭವನ ಸಭಾಂಗಣದಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಮಡಿಕೇರಿ ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ 63ನೇ ವಾರ್ಷಿಕ ಮಹಾಸಭೆ ನಗರದ ಬಾಲಭವನ ಸಭಾಂಗಣದಲ್ಲಿ ನಡೆಯಿತು.ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಬ್ಯಾಂಕಿನ ಅಧ್ಯಕ್ಷ ಅಪ್ಪಚಟ್ಟೋಳಂಡ ಮನು ಮುತ್ತಪ್ಪ ಅವರು 1957ರ ಫೆಬ್ರವರಿ 13ರಂದು ಕೊಡಗು ವ್ಯಾಪ್ತಿಯನ್ನು ಒಳಗೊಂಡಂತೆ 25 ಸದಸ್ಯರು ಹಾಗೂ ರೂ.3 ಸಾವಿರ ಷೇರು ಬಂಡವಾಳದೊಂದಿಗೆ ಆರಂಭಗೊಂಡ ಬ್ಯಾಂಕ್ ಇಂದು 2,906 ಸದಸ್ಯರನ್ನು ಹೊಂದಿದ್ದು, ರೂ.184.21 ಲಕ್ಷ ಷೇರು ಬಂಡವಾಳ ಹೊಂದಿದೆ ಎಂದು ತಿಳಿಸಿದರು.ತಾಲೂಕಿನ ಖಾಲಿ ಜಮ್ಮಾ ಬಾಣೆ ಜಮೀನಿಗೆ ಸಾಲ ಸೌಲಭ್ಯ ಒದಗಿಸಿದ ಪ್ರಥಮ ಬ್ಯಾಂಕ್ ಇದಾಗಿದ್ದು, ಇದರ ಮೂಲಕ ಸಾವಿರಾರು ಎಕರೆ ಪ್ರದೇಶಗಳಲ್ಲಿ ಕಾಫಿ, ಕಾಳುಮೆಣಸು, ಅಡಿಕೆ, ತೆಂಗು ಹಾಗೂ ರಬ್ಬರ್ ತೋಟಗಳ ಅಭಿವೃದ್ಧಿಗೆ ಸಹಕಾರಿಯಾಗಿದೆ ಎಂದರು.ಸರ್ಕಾರದ ಆದೇಶದಂತೆ ಶೇ.3ರ ಬಡ್ಡಿದರದಲ್ಲಿ ರೂ.15 ಲಕ್ಷದವರೆಗೆ ವಿವಿಧ ಕೃಷಿ ಉದ್ದೇಶಗಳಿಗೆ ಸಾಲ ನೀಡಲಾಗುತ್ತಿದೆ. ಅಲ್ಲದೆ, ಸಕಾಲದಲ್ಲಿ ಸಾಲದ ಚಾಲ್ತಿ ಕಂತುಗಳನ್ನು ಮರುಪಾವತಿಸುವ ಸದಸ್ಯರಿಗೆ ಲಾಭದಲ್ಲಿ ಮೀಸಲಿಟ್ಟ ಮೊತ್ತದಿಂದ ರೂ.5 ಸಾವಿರದವರೆಗೆ ಬಡ್ಡಿ ರಿಯಾಯಿತಿ ನೀಡಲಾಗುತ್ತಿದೆ. ರಾಜ್ಯದಲ್ಲೇ ಈ ರೀತಿಯ ಸೌಲಭ್ಯ ಕಲ್ಪಿಸಿದ ಪ್ರಥಮ ಬ್ಯಾಂಕ್ ಎಂಬ ಹೆಗ್ಗಳಿಕೆ ಹೊಂದಿದೆ ಎಂದು ಹೇಳಿದರು.ಬ್ಯಾಂಕ್ ರೂ.3,388.48 ಲಕ್ಷ ದುಡಿಯುವ ಬಂಡವಾಳ ಹೊಂದಿದ್ದು, ಸ್ವಂತ ಬಂಡವಾಳ ಯೋಜನೆಯಡಿ ವಾಹನ ಸಾಲ, ಮನೆ ನವೀಕರಣ ಸಾಲ, ವ್ಯಾಪಾರ ಸಾಲ, ಸಂಬಳಾಧಾರಿತ ಸಾಲ, ಪಿಗ್ಮಿ ಸಾಲ, ಚಿನ್ನಾಭರಣ ಸಾಲ ಹಾಗೂ ಠೇವಣಿ ಸಾಲ ಸೇರಿದಂತೆ ವಿವಿಧ ಸಾಲ ಸೌಲಭ್ಯಗಳನ್ನು ನೀಡುತ್ತಿದೆ. ಸತತ 20 ವರ್ಷಗಳಿಂದ ಬ್ಯಾಂಕ್ ಲಾಭದಲ್ಲಿ ಮುನ್ನಡೆಯುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ರೂ.85.22 ಲಕ್ಷ ಲಾಭ ಗಳಿಸಿದೆ. ಸರಕಾರದಿಂದ ಬರಬೇಕಿರುವ ರೂ.174.37 ಲಕ್ಷ ಸೇರಿ ಒಟ್ಟು ರೂ.259.59 ಲಕ್ಷ ಲಾಭದಲ್ಲಿದೆ ಎಂದು ಅಧ್ಯಕ್ಷರು ಮನು ಮುತ್ತಪ್ಪ ವಿವರಿಸಿದರು.ಬ್ಯಾಂಕ್ ಕಳೆದ ಹಲವು ವರ್ಷಗಳಿಂದ ರಾಜ್ಯದಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದು, ಸಾಲ ವಸೂಲಾತಿಯಲ್ಲಿ ಪ್ರಥಮ ಸ್ಥಾನ ಪಡೆಯುತ್ತಿದೆ. 2024-25ನೇ ಸಾಲಿನ ವಸೂಲಾತಿ ಹಾಗೂ ಸರ್ವಾಂಗೀಣ ಅಭಿವೃದ್ಧಿಗಾಗಿ ರಾಜ್ಯಮಟ್ಟದ ಎರಡು ಪ್ರಥಮ ಪ್ರಶಸ್ತಿಗಳು ಮಡಿಕೇರಿ ಪಿಎಲ್‌ಡಿ ಬ್ಯಾಂಕ್‌ಗೆ ಲಭಿಸಿವೆ ಎಂದು ಅವರು ತಿಳಿಸಿದರು.ಮಡಿಕೇರಿಯ ಹೃದಯಭಾಗದಲ್ಲಿ ಬ್ಯಾಂಕ್ ಸ್ವಂತ ಕಟ್ಟಡ ಹೊಂದಿದ್ದು, ಅಂದಾಜು ರೂ.7 ಲಕ್ಷ ಬಾಡಿಗೆ ಆದಾಯವೂ ಬರುತ್ತಿದೆ. ಬ್ಯಾಂಕಿನ ಸದಸ್ಯ ಸಾಲಗಾರರ ಪ್ರತಿಭಾವಂತ ಮಕ್ಕಳನ್ನು ಪ್ರತಿವರ್ಷ ಸನ್ಮಾನಿಸಲಾಗುತ್ತಿದೆ. ಸಭೆಯಲ್ಲಿ ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸಿರುವ ತೆಕ್ಕಬೊಟ್ಟೋಳಂಡ ಕುಶಾಲಪ್ಪ (ಮಾಣಿಚ್ಚಪೇರೂರು ಗ್ರಾಮ), ಬಾಚರಣಿಯಂಡ ಸುನಿತ ತಮ್ಮಯ್ಯ (ಕೊಳಗದಾಳು), ಬಲ್ಲಚಂಡ ಕಾವೇರಪ್ಪ (ಹೊಕ್ಕೇರಿ), ನಿಡ್ಯಮಲೆ ಮೋನಪ್ಪ (ಪಿ.ಪೆರಾಜೆ) ಹಾಗೂ ಅಮ್ಮಾಟಂಡ ಈರಪ್ಪ (ಹಾಕತ್ತೂರು) ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.ನಿರ್ದೇಶಕರಾದ ಬೀನಾ ಬೊಳ್ಳಮ್ಮ ಅಲ್ಲಾರಂಡ ಹಾಗೂ ಸುಶೀಲ ಕೂರನ ನಿರೂಪಿಸಿದರು. ಬ್ಯಾಂಕಿನ ಉಪಾಧ್ಯಕ್ಷ ರ‍್ಯಾಲಿ ಮಾದಯ್ಯ ನಾಪಂಡ ಸ್ವಾಗತಿಸಿ, ಮಾದೆಯಂಡ ನಾಚಪ್ಪ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ವರ್‌ ಸಮಸ್ಯೆ
ಅಪಸ್ಮಾರ ಶಾಪವಲ್ಲ, ಗುಣಪಡಿಸಲಾಗುವ ಖಾಯಿಲೆ: ಡಾ.ನಿಹಾಲ್ ಅಹಮದ್