ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ತಾಲೂಕಿನಲ್ಲಿ 64301 ಬಿಪಿಎಲ್ ಕಾರ್ಡ್‌ಗಳಿದ್ದು 2,07,301 ಜನ ಬಿಪಿಎಲ್ ಕಾರ್ಡ್‌ಗಳ ಮೂಲಕ ಸರ್ಕಾರದ ವಿವಿಧ ಯೋಜನೆಗಳ ಲಾಭ ಪಡೆಯುತ್ತಿದ್ದಾರೆ ಎಂದು ತಾಲೂಕು ಆಹಾರ ಇಲಾಖೆ ಶಿರಸ್ತೇದಾರ್ ಎಚ್.ಎಲ್.ಪೂರ್ಣಿಮ ತಿಳಿಸಿದ್ದಾರೆ.5617 ಅಂತ್ಯೋದಯ ಪಡಿತರ ಚೀಟಿಗಳಿದ್ದು, 23,994 ಜನ ಅಂತ್ಯೋದಯ ಕಾರ್ಡ್ ಲಾಭ ಪಡೆಯುತ್ತಿದ್ದಾರೆ. 203 ಎಪಿಎಲ್ ಕಾರ್ಡ್‌ದಾರರಿದ್ದಾರೆ. ಪ್ರಸ್ತುತ ಎಪಿಎಲ್ ಮತ್ತು ಬಿಪಿಎಲ್ ಕಾರ್ಡ್‌ಗಳನ್ನು ಬಿಟ್ಟರೆ ಅಂತ್ಯೋದಯ ಕಾರ್ಡ್‌ಗಳನ್ನು ವಿತರಿಸುತ್ತಿಲ್ಲ. 64301 ಬಿಪಿಎಲ್ ಕಾರ್ಡ್‌ಗಳಲ್ಲಿ ಕುಟುಂಬಸ್ಥರ ಆದಾಯ ತೆರಿಗೆ ಪಾವತಿ ಹಿನ್ನೆಲೆಯಲ್ಲಿ 401 ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್ ಕಾರ್ಡ್‌ಗಳಾಗಿ ಪರಿವರ್ತಿಸಲಾಗಿದೆ ಎಂದು ತಿಳಿಸಿದ್ದಾರೆ.ಎಪಿಎಲ್‌ಗೆ ಪರಿವರ್ತಿಸಿರುವ 401 ಕಾರ್ಡ್‌ಗಳಲ್ಲಿ 284 ಕಾರ್ಡ್‌ದಾರರು ಮಾತ್ರ ನೈಜವಾಗಿ ಆದಾಯ ತೆರಿಗೆ ಪಾವತಿಸುವ ಕುಟುಂಬಕ್ಕೆ ಸೇರಿದ್ದು, ಉಳಿದ 117 ಕಾರ್ಡ್‌ದಾರರು ಬಿಪಿಎಲ್ ಕಾರ್ಡ್ ಹೊಂದಲು ಅರ್ಹರಿದ್ದರೂ ತಾಂತ್ರಿಕ ಕಾರಣದಿಂದ ಎಪಿಎಲ್ ಕಾರ್ಡ್‌ದಾರರಾಗಿ ಪರಿವರ್ತಿಸಲ್ಪಟ್ಟಿದ್ದಾರೆ.
ಈ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸುತ್ತಿದ್ದು, ಬಿಪಿಎಲ್ ಕಾರ್ಡ್ ಸೌಲಭ್ಯಕ್ಕೆ ಅರ್ಹರಿರುವ 117 ಕಾರ್ಡ್‌ದಾರರನ್ನು ಮತ್ತೆ ಬಿಪಿಎಲ್ ವ್ಯಾಪ್ತಿಗೆ ತರಲು ಕ್ರಮ ವಹಿಸುತ್ತಿರುವುದಾಗಿ ಎ.ಎಲ್.ಪೂರ್ಣಿಮ ತಿಳಿಸಿದ್ದಾರೆ.ತಪ್ಪು ವರದಿ ಕ್ರಮ ಜರುಗಿಸಿ:
ರಾಜ್ಯ ಸರ್ಕಾರ ಪಡಿತರ ಚೀಟಿಗಳ ಪರಿಷ್ಕರಣೆಯ ಹೆಸರಿನಲ್ಲಿ ಬಡಜನರ ಅನ್ನ ಕಿತ್ತುಕೊಳ್ಳುವ ಬದಲು ಅನರ್ಹರಿಗೆ ನಿಯಮ ಮೀರಿ ಸುಳ್ಳು ಆದಾಯ ಪ್ರಮಾಣ ಪತ್ರ ನೀಡಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸುವಂತೆ ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಆಗ್ರಹಿಸಿದ್ದಾರೆ.ಯಾವುದೇ ರೀತಿಯ ಪಡಿತರ ಚೀಟಿಗಳನ್ನು ಪಡೆಯಬೇಕಾದರೆ ಆದಾಯ ಧೃಡೀಕರಣ ಪ್ರಮಾಣ ಪತ್ರ ಕಡ್ಡಾಯ. ಈ ಆದಾಯ ಧೃಡೀಕರಣ ಪತ್ರ ನೀಡುವವರು ಆಯಾ ವ್ಯಾಪ್ತಿ ಗ್ರಾಮ ಆಡಳಿತಾಧಿಕಾರಿಗಳು ಮತ್ತು ರೆವಿನ್ಯೂ ಶಿರಸ್ತೇದಾರರು. ಇವರು ನೀಡಿದ ಸುಳ್ಳು ಪ್ರಮಾಣ ಪತ್ರಗಳಿಂದ ಸಿರಿವಂತರು ಬಿಪಿಎಲ್ ಕಾರ್ಡ್‌ಗಳನ್ನು ಪಡೆದುಕೊಂಡಿದ್ದಾರೆ.
ಸರ್ಕಾರ ಬಿಪಿಎಲ್ ಕಾರ್ಡ್‌ದಾರರನ್ನು ಪರಿಶೀಲಿಸಿದರೆ ಸಾಲದು ಬದಲಾಗಿ ಸುಳ್ಳು ಪ್ರಮಾಣ ಪತ್ರ ನೀಡಿದ ಸರ್ಕಾರಿ ಸಿಬ್ಬಂದಿ ವಿರುದ್ಧವೂ ಕ್ರಮ ಜರುಗಿಸಬೇಕು. ತಪ್ಪು ಮಾಡಿದ ನೌಕರರ ವಿರುದ್ಧ ಕ್ರಮ ಜರುಗಿಸುವ ಪರಂಪರೆ ಆರಂಭಗೊಂಡರೆ ಭ್ರಷ್ಟಾಚಾರ ತಾನೇ ತಾನಾಗಿ ನಿಲ್ಲಲಿದೆ. ಇದರಿಂದ ನಾಡಿನ ಬಡಜನರಿಗೆ ಅನುಕೂಲವಾಗಲಿದೆ ಎಂದು ಪುಟ್ಟೇಗೌಡ ಹೇಳಿದ್ದಾರೆ.