ಬಿಪಿಎಲ್ ರದ್ದತಿಗೂ ಮುನ್ನ ಪರಿಶೀಲಿಸಿ

KannadaprabhaNewsNetwork |  
Published : Nov 21, 2024, 01:01 AM IST
ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ | Kannada Prabha

ಸಾರಾಂಶ

ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದತಿ ಮಾಡುವಾಗ ಕಂದಾಯ ಇಲಾಖೆ ಹಾಗೂ ಆಹಾರ ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಜಂಟಿಯಾಗಿ ಪರಿಶೀಲನೆ ನಡೆಸಬೇಕು ಎಂದು ಚಿತ್ರದುರ್ಗ ಸಂಸದ ಗೋವಿಂದ ಎಂ. ಕಾರಜೋಳ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ತುಮಕೂರುಬಿಪಿಎಲ್ ಪಡಿತರ ಚೀಟಿಗಳನ್ನು ರದ್ದತಿ ಮಾಡುವಾಗ ಕಂದಾಯ ಇಲಾಖೆ ಹಾಗೂ ಆಹಾರ ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಜಂಟಿಯಾಗಿ ಪರಿಶೀಲನೆ ನಡೆಸಬೇಕು ಎಂದು ಚಿತ್ರದುರ್ಗ ಸಂಸದ ಗೋವಿಂದ ಎಂ. ಕಾರಜೋಳ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ನಡೆದ ಶಿರಾ ಮತ್ತು ಪಾವಗಡ ತಾಲೂಕುಗಳ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನಾ (ದಿಶಾ) ಸಭೆಯಲ್ಲಿ ಮಾತನಾಡಿದರು. ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಯಾಗದಂತೆ ಸರ್ಕಾರದ ನಿಯಮಾವಳಿಯನ್ವಯ ಅನರ್ಹ ಬಿಪಿಎಲ್ ಕಾರ್ಡುಗಳ ರದ್ದತಿ ಬಗ್ಗೆ ಮಾಹಿತಿ ನೀಡಬೇಕು. ಜಿಲ್ಲೆಯಲ್ಲಿ 12,804 ಅನರ್ಹ ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದು ಮಾಡಲಾಗಿದ್ದು. ರದ್ದುಗೊಳಿಸುವ ಸಂದರ್ಭದಲ್ಲಿ ಅರ್ಹ ಪಡಿತರ ಚೀಟಿಗಳು ರದ್ದಾಗದಂತೆ ಎಚ್ಚರವಹಿಸಬೇಕು ಎಂದು ತಿಳಿಸಿದರು. ಜಿಲ್ಲೆಯ ರೈತರು ಬೇಸಿಗೆಯಲ್ಲೂ ಸಹ ಬೆಳೆಗಳನ್ನು ಬೆಳೆಯುವ ನಿರೀಕ್ಷೆಯಿದ್ದು, ರಾಜ್ಯದಲ್ಲಿ ಬೇಡಿಕೆಗಿಂತ ಹೆಚ್ಚು ವಿದ್ಯುತ್ ಉತ್ಪಾದನೆಯಾಗುತ್ತಿರುವುದರಿಂದ ಬೇಸಿಗೆಯಲ್ಲಿ ವಿದ್ಯುತ್ ಸರರಾಜಿನಲ್ಲಿ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಅಗತ್ಯ ಕ್ರಮವಹಿಸಬೇಕು ಎಂದು ಬೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 1,71,435 ಫಲಾನುಭವಿಗಳಿಗೆ 18,085 ಕ್ವಿಂಟಾಲ್ ಬಿತ್ತನೆ ಬೀಜ ವಿತರಣೆ ಮಾಡಲಾಗಿದೆ. ಕೃಷಿ ಯಾಂತ್ರೀಕರಣ, ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ, ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಸೇರಿದಂತೆ ಎಲ್ಲಾ ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ಪ್ರಗತಿ ಸಾಧಿಸಲಾಗುತ್ತಿದೆ ಎಂದು ಕೃಷಿ ಜಂಟಿ ನಿರ್ದೇಶಕ ರಮೇಶ್ ಸಭೆಗೆ ಮಾಹಿತಿ ನೀಡಿದರು.ಜಿಲ್ಲೆಯಲ್ಲಿ 5.73 ಲಕ್ಷ ಜಾನುವಾರುಗಳಿದ್ದು, ಶಿರಾ ಮತ್ತು ಪಾವಗಡ ತಾಲೂಕಿನಲ್ಲಿ 97 ಸಾವಿರ ಜಾನುವಾರುಗಳಿವೆ. ಜಿಲ್ಲೆಯು ಹಾಲು ಉತ್ಪಾದನೆಯಲ್ಲಿ ರಾಜ್ಯಕ್ಕೆ 3ನೇ ಸ್ಥಾನದಲ್ಲಿದ್ದು, 8 ರಿಂದ 10 ಲಕ್ಷ ಲೀ. ಹಾಲು ಉತ್ಪಾದನೆಯಾಗುತ್ತಿದೆ. ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ ಕುರಿ, ಮೇಕೆ, ಹಂದಿ ಸಾಕಾಣಿಕೆಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ ಎಂದು ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವೆ ಇಲಾಖೆ ಉಪ ನಿರ್ದೇಶಕ ಡಾ: ಗಿರೀಶ್ ಬಾಬು ರೆಡ್ಡಿ ಸಭೆಗೆ ಮಾಹಿತಿ ತಿಳಿಸಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಮಾತನಾಡಿ, ನರೇಗಾ ಯೋಜನೆಯಡಿ ಸಮಗ್ರ ಶಾಲಾ ಅಭಿವೃದ್ಧಿಗಾಗಿ 205 ಕೋಟಿ ರು. ವೆಚ್ಚದಲ್ಲಿ 3,614 ಕಾಮಗಾರಿ, ಮೂಲಭೂತ ಸೌಕರ್ಯಗಳಿಗಾಗಿ 90 ಕೋಟಿ ರು. ವೆಚ್ಚದಲ್ಲಿ 1,500 ಕಾಮಗಾರಿ ಹಾಗೂ ಸಮಗ್ರ ವೈಜ್ಞಾನಿಕ ಚರಂಡಿ ವ್ಯವಸ್ಥೆಗಾಗಿ 102 ಕೋಟಿ ರು. ವೆಚ್ಚದಲ್ಲಿ 6,170 ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗಿದೆ. ಸಮಗ್ರ ಶಾಲಾ ಅಭಿವೃದ್ಧಿ ಶೀರ್ಷಿಕೆಯಡಿ 1,424 ಶಾಲಾ ಕಾಂಪೌಂಡ್, 1,354 ಶೌಚಾಲಯ, 836 ಆಟದ ಮೈದಾನ ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ಈಗಾಗಲೇ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದರು.ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ ಹಸರೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಕೃಷಿ, ಅರಣ್ಯೀಕರಣ, ನೆಡುತೋಪು, ಕಂದಕ ನಿರ್ಮಾಣ, ವೃಕ್ಷವನ ನಿರ್ಮಾಣಕ್ಕಾಗಿ 4,732 ಲಕ್ಷ ರು. ವೆಚ್ಚದಲ್ಲಿ 2,917 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.ಪಾವಗಡ ತಾಲೂಕಿನ ಆಸ್ಪತ್ರೆಗಳಿಗೆ ತಜ್ಞ ವೈದ್ಯರ ಬೇಡಿಕೆಯಿದ್ದು, ತಜ್ಞ ವೈದ್ಯರಿಗೆ 1.50 ಲಕ್ಷ ರು.ಗಳ ಸಂಭಾವನೆ ನಿಗದಿಯಾಗಿದೆ. ಸಂಭಾವನೆಯನ್ನು 2.50 ಲಕ್ಷ ರು.ಗಳಿಗೆ ನಿಗದಿಪಡಿಸಿದರೆ ತಜ್ಞ ವೈದ್ಯರು ಸೇವೆ ಒದಗಿಸುತ್ತಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಚಂದ್ರಶೇಖರ್ ಸಭೆಗೆ ಮಾಹಿತಿ ನೀಡಿದಾಗ ಸಂಸದರು ಜಿಲ್ಲೆಯಲ್ಲಿ ಪಾವಗಡ ತಾಲ್ಲೂಕಿನಲ್ಲಿ ಕುಷ್ಠರೋಗಿಗಳ ಸಂಖ್ಯೆ ಹೆಚ್ಚಾಗಿದ್ದು ಕುಷ್ಠರೋಗ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಅನುಪಮ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!