ಮಂಡ್ಯ: ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ಸರಾಸರಿ 67.3 ಮಿ.ಮೀ. ಮಳೆಯಾಗಿರುವ ಬಗ್ಗೆ ವರದಿಯಾಗಿದೆ. ಕೆ.ಆರ್.ಪೇಟೆ, ಪಾಂಡವಪುರ, ಶ್ರೀರಂಗಪಟ್ಟಣದಲ್ಲಿ ಅತಿ ಹೆಚ್ಚು ಮಳೆಯಾಗಿದ್ದರೆ, ನಾಗಮಂಗಲ ತಾಲೂಕಿನಲ್ಲಿ ಕಡಿಮೆ ಮಳೆಯಾಗಿದೆ. ಕೆ.ಆರ್.ಪೇಟೆ ತಾಲೂಕಿನಲ್ಲಿ 88.2 ಮಿ.ಮೀ., ಪಾಂಡವಪುರ-81.6 ಮಿ.ಮೀ., ಶ್ರೀರಂಗಪಟ್ಟಣ-80.2 ಮಿ.ಮೀ., ಮಳವಳ್ಳಿ-77.2 ಮಿ.ಮೀ., ಮಂಡ್ಯ-68.2 ಮಿ.ಮೀ., ಮದ್ದೂರು-52.4 ಮಿ.ಮೀ., ನಾಗಮಂಗಲ ತಾಲೂಕಿನಲ್ಲಿ 43.5 ಮಿ.ಮೀ. ಮಳೆಯಾಗಿದೆ. ಒಡೆದ ಕೊತ್ತತ್ತಿ ದೊಡ್ಡಕೆರೆ: ಕೊತ್ತತ್ತಿ ದೊಡ್ಡ ಕೆರೆಯ ತೂಬಿನ ಬಳಿ ನೀರಿನ ರಭಸಕ್ಕೆ ಕೋಡಿ ಒಡೆದು ನೀರು ಪೋಲಾಗಿ ಜಮೀನುಗಳು ಜಲಾವೃತಗೊಂಡಿರುವ ಘಟನೆ ನಡೆದಿದೆ, ಮಳೆ ಸುರಿದ ಹಿನ್ನೆಲೆಯಲ್ಲಿ ಕೆರೆಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿತ್ತು, ತೂಬಿನ ಬಳಿ ನೀರಿನ ರಭಸಕ್ಕೆ ಮಣ್ಣು ಕುಸಿದು ಕೋಡಿ ಒಡೆದಿದ್ದು, ಇದರಿಂದ ನೀರು ಹೆಚ್ಚಿನ ಪ್ರಮಾಣದಲ್ಲಿ ಹೊರ ಬಿದ್ದಿದೆ. ಕೆರೆ ಕೆಳಗಿನ ಜಮೀನಿಗೆ ನೀರು ನುಗ್ಗಿದ್ದು. ಜಮೀನಿನಲ್ಲಿದ್ದ ಫಸಲು ಹಾನಿಯಾಗಿದೆ. ನೀರಾವರಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ವೇಳೆ ಜಮೀನುಗಳು ಜಲಾವೃತಗೊಂಡು ಫಸಲು ನಾಶವಾಗಿದೆ, ನೀರು ಪೋಲಾಗುತ್ತಿರುವುದರಿಂದ ಜನ ಜಾನುವಾರುಗಳಿಗೆ ಬೇಸಿಗೆಯಲ್ಲಿ ಕುಡಿಯುವ ನೀರು, ವ್ಯವಸಾಯಕ್ಕೆ ನೀರಿಲ್ಲದಂತಾಗಲಿದೆ ತುರ್ತು ಕ್ರಮ ವಹಿಸಿ ಎಂದು ಗ್ರಾಮಸ್ಥರು ಮನವಿ ಮಾಡಿದರು. ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರ ನಂಜುಂಡೇಗೌಡ, ಸಹಾಯಕ ಕಾರ್ಯಪಾಲಕ ಅಭಿಯಂತರ ವಿಶ್ವನಾಥ್, ಕಿರಿಯ ಇಂಜಿನಿಯರ್ ಕೆಂಪರಾಜು, ಕೊತ್ತತ್ತಿ ನೀರು ಬಳಕೆದಾರರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ರವಿ ಇತರರಿದ್ದರು.