ಉಪಕದನದಲ್ಲಿ ಶೇ.68.74 ಹಕ್ಕು ಚಲಾವಣೆ

KannadaprabhaNewsNetwork |  
Published : Apr 10, 2026, 02:30 AM IST
ಫೋಟೊಬಿಕೆಟಿ3, (1), (2) ವ್ರದ್ದರು, ವಿಶೇಷ ಚೇತನರು ಉತ್ಸುಕರಾಗಿ ಮತಗಟ್ಟೆಗೆ ತೆರಳಿ ಮತದಾನ ಮಾಡಿದರು) | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಬಾಗಲಕೋಟೆ ಮತಕ್ಷೇತ್ರದ ಉಪ ಚುನಾವಣೆಯ ಮತದಾನ ಅತ್ಯಂತ ತುರಿಸಿನಿಂದ ಜರುಗಿತು. ಈ ವೇಳೆ ಒಟ್ಟು ಶೇ.68.73ರಷ್ಟು ಮತದಾನವಾಯಿತು. ಬೆಳಗ್ಗೆ 7 ರಿಂದ ಸಂಜೆ 6ರವರೆಗೆ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ನಡೆಯಿತು. ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಜಿಲ್ಲೆಯಲ್ಲಿ ಬಾಗಲಕೋಟೆ ಮತಕ್ಷೇತ್ರದ ಉಪ ಚುನಾವಣೆಯ ಮತದಾನ ಅತ್ಯಂತ ತುರಿಸಿನಿಂದ ಜರುಗಿತು. ಈ ವೇಳೆ ಒಟ್ಟು ಶೇ.68.73ರಷ್ಟು ಮತದಾನವಾಯಿತು. ಬೆಳಗ್ಗೆ 7 ರಿಂದ ಸಂಜೆ 6ರವರೆಗೆ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ನಡೆಯಿತು. ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ.

ಬೆಳಗ್ಗೆಯಿಂದಲೇ ಮತದಾರರು ಉತ್ಸಾಹದಿಂದ ಮತಗಟ್ಟೆಗಳಲ್ಲಿ ಸರತಿ ಸಾಲಿನಲ್ಲಿ ನಿಂತು ಹಕ್ಕು ಚಲಾಯಿಸುತ್ತಿರುವುದು ಕಂಡುಬಂತು. ಮಹಿಳೆಯರು, ಹಿರಿಯ ನಾಗರಿಕರು ಹಾಗೂ ಯುವ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿರುವುದು ವಿಶೇಷವಾಗಿತ್ತು. ಬಹುತೇಕ ಮತಗಟ್ಟೆಗಳಲ್ಲಿ ಮಹಿಳಾ ಮತದಾರರಲ್ಲಿ ಹೆಚ್ಚಿನ ಉತ್ಸಾಹ ಕಂಡುಬಂತು. ಮತದಾನ ಕೇಂದ್ರಗಳಲ್ಲಿ ಅಗತ್ಯ ಸೌಲಭ್ಯ ಒದಗಿಸಲಾಗಿತ್ತು. ಪುರುಷ ಮತದಾರರಗಿಂತ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಸಾಲುಗಟ್ಟಿ ನಿಂತಿದ್ದರು.ಕ್ಷೇತ್ರದ ಶಿರೂರ, ಕಮತಗಿ, ಅಮೀನಗಡ, ಬಸರಿಕಟ್ಟಿ, ಬೆನಕಟ್ಟಿ, ರಾಮಪೂರ, ತಿಮ್ಮಾಪೂರ ಗ್ರಾಮಗಳ ಕೆಲ ಮತಗಟ್ಟೆಗೆ ತೆರಳಿದಾಗ ಪುರುಷ ಮತದಾರರಗಿಂತ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಸಾಲುಗಟ್ಟಿ ನಿಂತಿರುವ ದೃಶ್ಯ ಕಂಡು ಬಂತು. ಬೆಳಗ್ಗೆ 7 ರಿಂದ 9 ಗಂಟೆಯಲ್ಲಿ ಶೇ.11.87ರಷ್ಟು ಮತವಾದರೆ, 11 ಗಂಟೆಗೆ ಶೇ.27.82ರಷ್ಟು, ಮಧ್ಯಾಹ್ನ 1 ಗಂಟೆಗೆ ಶೇ.43.75ರಷ್ಟು, ಮಧ್ಯಾಹ್ನ 3 ಗಂಟೆಗೆ ಶೇ.54.82ರಷ್ಟು, ಸಂಜೆ 5 ವರೆಗೆ ಶೇ.65.59ರಷ್ಟು ಮತದಾನವಾಯಿತು.

ಮುಕ್ತ, ಶಾಂತಿಯುತ ಚುನಾವಣೆಗೆ ಜಿಲ್ಲಾಡಳಿತ ಸಕಲ ರೀತಿಯ ಕ್ರಮ ಕೈಗೊಂಡಿತ್ತು. ಮತದಾನ ಕಾರ್ಯಕ್ಕೆ 1564 ಮತಗಟ್ಟೆ ಸಿಬ್ಬಂದಿ ಹಾಗೂ 322 ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್, ಅಗತ್ಯತಕ್ಕೆ ಅನುಗುಣವಾಗಿ ಮೈಕ್ರೋ ಆಬ್ಸರ್ವರ್‌ ಹಾಗೂ ಕೇಂದ್ರದ ಮೀಸಲು ಪಡೆ ನಿಯೋಜಿಸಲಾಗಿತ್ತು. ಬೆಳಗ್ಗೆ 7 ರಿಂದ ಸಂಜೆ 6ರವರೆಗೆ ಜಿಲ್ಲೆಯಾದ್ಯಂತ ಶಾಂತಿಯುತವಾಗಿ ಮತದಾನವಾಯಿತು.

ವಿಶೇಷ ಮತಗಟ್ಟೆಗಳಿಗೆ ಡಿಸಿ, ಸಿಇಒ ಭೇಟಿ: ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಸಂಗಪ್ಪ ಅವರು ಆರ್ & ಆರ್ ಕಚೇರಿಯಲ್ಲಿ ಸ್ಥಾಪಿಸಲಾದ ಮತಗಟ್ಟೆ ಸಂಖ್ಯೆ 221 ರಿಂದ 224ರವರೆಗಿನ ಮತಗಟ್ಟೆಗಳಿಗೆ ಹಾಗೂ ಅಂಬೇಡ್ಕರ್‌ ಭವನದಲ್ಲಿ ಸ್ಥಾಪಿಸಲಾದ ಪಿಂಕ್ ಮತ್ತು ಯುವ ಮತಗಟ್ಟೆಗಳಿಗೆ ತೆರಳಿ ಮತಗಟ್ಟೆ ಮತ್ತು ಮತದಾನ ಪ್ರಕ್ರಿಯೆ ವೀಕ್ಷಿಸಿದರು. ಜಿಪಂ ಸಿಇಒ ಶಶಿಧರ ಕುರೇರ ನವನಗರದ ಪಿಎಂಶ್ರೀ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ನಂ.7 ರಲ್ಲಿ ಸ್ಥಾಪಿಸಿದ ಮತಗಟ್ಟೆಗೆ ಹಾಗೂ ಭಗವತಿ ಗ್ರಾಮದಲ್ಲಿ ಸ್ಥಾಪಿಸಿದ ಪಿಂಕ್ ಮತಗಟ್ಟೆ ಹಾಗೂ ಇತರೆ ಮತಗಟ್ಟೆಗಳಿಗೆ ಭೇಟಿ ನೀಡಿ ಮತದಾನ ಪ್ರಕ್ರಿಯೆ ವೀಕ್ಷಿಸಿದರು.

ಯುವ ಮತದಾರರಲ್ಲಿ ಉತ್ಸಾಹ: 18 ವರ್ಷ ಪೂರೈಸಿ ಮೊದಲ ಬಾರಿಗೆ ಮತದಾನ ಮಾಡುತ್ತಿರುವ ಯುವಕರಲ್ಲಿ ಉತ್ಸಾಹ ಕಂಡುಬಂತು. ತಮ್ಮ ಗುರುತಿನ ಚೀಟಿಯೊಂದಿಗೆ ಖುಷಿಯಿಂದ ಮತಗಟ್ಟೆಗೆ ಆಗಮಿಸಿದ ಮತದಾರರು ಮೊದಲ ಬಾರಿಗೆ ನಮ್ಮ ಹಕ್ಕು ಚಲಾಯಿಸುತ್ತಿರುವುದು ಸಂತೋಷ ತಂದಿದೆ. ಜನಪ್ರತಿನಿಧಿಗಳ ಆಯ್ಕೆಯಲ್ಲಿ ನಮ್ಮದು ಇರುವ ಪಾತ್ರದ ಬಗ್ಗೆ ಅರಿತಿರುವುದಾಗಿ ಯುವ ಮತದಾರರಾದ ಭರಮಪ್ಪ, ಪವಿತ್ರ ಕಾಮತ ಸೇರಿದಂತೆ ಇತರರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಕುಟುಂಬ ಸಮೇತ ಬಂದ ಸಿಇಓ, ಎಡಿಸಿ ಮತದಾನ: ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಆಗಿರುವ ಜಿಪಂ ಸಿಇಒ ಶಶಿಧರ ಕುರೇರ, ಪತ್ನಿ ಸುಚಿತಾ ಜೊತೆಗೆ ನವನಗರದ ಡಾ.ಬಿ.ಆರ್.ಅಂಬೇಡ್ಕರ್‌ ಭವನದಲ್ಲಿ ಸ್ಥಾಪಿಸಲಾದ ಮತಗಟ್ಟೆಯಲ್ಲಿ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ನಂತರ ಸಖಿ ಮತಗಟ್ಟೆಯಲ್ಲಿ ಇಡಲಾದ ಸೆಲ್ಫಿ ಕಾರ್ನರ್‌ ನಲ್ಲಿ ಫೋಟೋ ತೆಗೆಸಿಕೊಂಡರು. ಅಪರ ಜಿಲ್ಲಾಧಿಕಾರಿ ಆಗಿರುವ ಅಶೋಕ ತೇಲಿ ಅವರು ಸಹ ಕುಟುಂಬ ಸಮೇತ ಅಂಬೇಡ್ಕರ್‌ ಭವನದಲ್ಲಿ ಸ್ಥಾಪಿಸಲಾದ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

ವೃದ್ಧರು, ವಿಕಲಚೇನರು, ತೃತೀಯ ಲಿಂಗಿಗಳಿಂದ ಮತದಾನ: ವೃದ್ಧರು, ವಿಶೇಷ ಚೇತನರು ಹಾಗೂ ತೃತೀಯ ಲಿಂಗಿ ಮತದಾರರು ಉತ್ಸುಕತೆಯಿಂದ ಮತಗಟ್ಟೆಗೆ ತೆರಳಿ ಮತದಾನ ಮಾಡಿದರು.

ಮತದಾನಕ್ಕೆ ಗ್ರಾಪಂ ಪಂಚಾಯತಿಯಲ್ಲಿ ವಾಹನ ವ್ಯವಸ್ಥೆ, ವ್ಹೀಲ್ ಚೇರ್ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಲಾಗಿತ್ತು. ಶಿರೂರ, ಬೆನಕಟ್ಟಿ, ಬಸರಿಕಟ್ಟಿ, ರಾಮಪುರ, ಅಮೀನಗಡದಲ್ಲಿ ವೃದ್ಧರು ಮತದಾನ ಮಾಡಿದರೆ, ಕಮತಗಿಯಲ್ಲಿ ತೃತೀಯ ಲಿಂಗಿ ಹುಚ್ಚಮ್ಮ ಜೋಗತಿ ಮತ ಚಲಾಯಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಠ್ಯೇತರ ಚಟುವಟಿಕೆಗಳಿಗೆ ವಿಟಿಯು ಆದ್ಯತೆ
ಮಸ್ಟ್ 3ನೇ ಪುಟಕ್ಕೆ.... ನೀರಿನ ಹೊಂಡಕ್ಕೆ ಬಿದ್ದು ಯುವಕ ಸಾವು