ಕನ್ನಡಪ್ರಭ ವಾರ್ತೆ ಬೆಂಗಳೂರು
ವಿಟಿಯು ಕೇವಲ ಪಠ್ಯಕ್ರಮ ಮಾತ್ರವಲ್ಲ, ಪಠ್ಯೇತರ ಚಟುವಟಿಕೆಗಳಿಗೆ ಆದ್ಯತೆ ನೀಡುತ್ತಿದೆ. ವಿದ್ಯಾರ್ಥಿಗಳು ಸಿಗುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಕುಲಪತಿ ಡಾ.ಎಸ್.ವಿದ್ಯಾಶಂಕರ್ ಹೇಳಿದರು.ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಮತ್ತು ಆಚಾರ್ಯ ತಾಂತ್ರಿಕ ಮಹಾವಿದ್ಯಾಲಯ ಸಹಯೋಗದೊಂದಿಗೆ ಆಯೋಜಿಸಿದ್ದ 25ನೇ ವಿಟಿಯು ಯುವ ಜನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬರಲ್ಲೂ ಪ್ರತಿಭೆ ಇದೆ. ಇದರ ಅನಾವರಣಗೊಳ್ಳಬೇಕು ಎಂಬ ಕಾರಣಕ್ಕೆ ನಾವು ಈ ಯುವಜನೋತ್ಸವ ನಡೆಸುತ್ತಿದ್ದೇವೆ. ಕಾಲೇಜು ದಿನಗಳಲ್ಲಿ ತಮ್ಮ ಪ್ರತಿಭೆ ಅನಾವರಣಕ್ಕೆ ವೇದಿಕೆ ಸಿಗಲಿದೆ. ಇದನ್ನು ಸದ್ಭಳಕೆ ಮಾಡಿಕೊಳ್ಳಬೇಕು. ಎಲ್ಲರೂ ಬಹಳ ಉತ್ಸಾಹದಿಂದ ಭಾಗವಹಿಸಬೇಕು ಎಂದರು.
ಈ ಯುವಜನೋತ್ಸವ ಮೂರು ದಿನಗಳ ಕಾಲ ನಡೆಯಲಿದ್ದು, ಇದೊಂದು ಸಾಂಸ್ಕೃತಿಕ ಮತ್ತು ತಂತ್ರಜ್ಞಾನ ಆಧಾರಿದ ಸ್ಪರ್ಧೆಗಳ ಹಬ್ಬವಾಗಿದೆ. ವಿಟಿಯು ವ್ಯಾಪ್ತಿಯಲ್ಲಿರುವ 220 ಎಂಜಿನಿಯರಿಂಗ್ ಕಾಲೇಜಿನಿಂದ ಮೂರು ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿದ್ದಾರೆ. 25 ಸ್ಪರ್ಧೆಗಳು ನಡೆಯಲಿದ್ದು, 283 ಪದಕಗಳ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ವಿಟಿಯು ಬೆಂಗಳೂರು ಪ್ರಾದೇಶಿಕ ಕಚೇರಿಯ ನಿರ್ದೇಶಕ ಡಾ.ಎಚ್.ಆರ್. ಸುದರ್ಶನ ರೆಡ್ಡಿ, ಆಚಾರ್ಯ ವಿದ್ಯಾಸಂಸ್ಥೆಯ ಅಧ್ಯಕ್ಷರ ಕಾರ್ಯನಿರ್ವಾಹಕ ಕಾರ್ಯದರ್ಶಿ ಸಿ.ಬಿ.ಎಂ.ಭೂಷಣ್, ಕಾಲೇಜಿನ ಪ್ರಾಂಶುಪಾಲ ಡಾ.ಸಿ.ಕೆ.ಮರಿಗೌಡ ಸೇರಿ ಇತರರು ಇದ್ದರು.