ಕನ್ನಡಪ್ರಭ ವಾರ್ತೆ ವಿಜಯಪುರ

ಗಣತಿದಾರರು ಮತ್ತು ಮೇಲ್ವಿಚಾರಕರು ಸರಿಯಾದ ರೀತಿಯಲ್ಲಿ ತರಬೇತಿ ಪಡೆದುಕೊಂಡು ಗಣತಿ ಕಾರ್ಯವನ್ನು ಯಶಸ್ವಿಗೊಳಿಸಬೇಕು. ಜತೆಗೆ ಸಾರ್ವಜನಿಕರು ಜನಗಣತಿ ಕಾರ್ಯದ ಯಶಸ್ಸಿಗೆ ಕೈ ಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಆನಂದ.ಕೆ ಹೇಳಿದರು.

ನಗರದ ಜಿಲ್ಲಾಡಳಿತ ಭವನದ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜನಗಣತಿಯು ದೇಶದ ಜನಸಂಖ್ಯೆಯ ಗಣತಿಯ ಜತೆಗೆ, ದೇಶದ ಸಾಮಾಜಿಕ, ಆರ್ಥಿಕ ಸ್ಥಿತಿಗಳು ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ದಾಖಲಿಸುವ ವೈಜ್ಞಾನಿಕ ಪ್ರಕ್ರಿಯೆಯಾಗಿದೆ. ಹಾಗಾಗಿ ಜನಗಣತಿ-2027ರ ಮೇಲ್ವಿಚಾರಕರ ಮತ್ತು ಗಣತಿದಾರರಿಗೆ ಹಮ್ಮಿಕೊಳ್ಳಲಾದ ತರಬೇತಿಯನ್ನು ಸರಿಯಾಗಿ ಪಡೆದುಕೊಂಡು, ಗಣತಿ ಕಾರ್ಯಕ್ಕೆ ತೆರಳಿದಾಗ ಸಾರ್ವಜನಿಕರಿಗೆ ಸೂಕ್ತ ತಿಳಿವಳಿಕೆ ನೀಡಿ. ಗಣತಿ ಕಾರ್ಯಕ್ಕೆ ಒಳಪಡಿಸುವ ಮೂಲಕ ಜನಗಣತಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದರು.ಜಿಲ್ಲೆಯ ಜನತೆ ಜನಗಣತಿಯಿಂದ ಹೊರಗುಳಿಯಬಾರದು.

ಡಿಜಿಟಲ್‌ ಗಣತಿ ಇದೇ ಮೊದಲ ಬಾರಿಗೆ ಭಾರತದ ಮೊದಲ ಡಿಜಿಟಲ್ ಜನಗಣತಿ ಕಾರ್ಯಕ್ಕೆ ಈಗಾಗಲೇ ಚಾಲನೆ ಸಿಕ್ಕಿದೆ. 2 ಹಂತಗಳಲ್ಲಿ ನಡೆಯಲಿರುವ ಗಣತಿ ಕಾರ್ಯವನ್ನು ಸ್ವತಃ ಗಣತಿದಾರರು ವಿಶೇಷ ಕಾಳಜಿ ವಹಿಸುವ ಮೂಲಕ ಯಶಸ್ವಿಗೊಳಿಸಬೇಕು. ಈಗಾಗಲೇ ಸ್ವಯಂ ಗಣತಿ ಕಾರ್ಯ ಆರಂಭವಾಗಿದೆ. ಜನಗಣತಿಯ ಸುರಕ್ಷಿತ ವೆಬ್ ಪೋರ್ಟಲ್‌ಗೆ https://se.census.gov.in ಗೆ ಮೊಬೈಲ್ ಸಂಖ್ಯೆ ಮತ್ತು ಒಟಿಪಿ ಬಳಸಿ ಲಾಗಿನ್ ಆಗಿ. ಬಳಿಕ ನಿಮ್ಮ ಸ್ಥಳ ಆಯ್ಕೆ ಮಾಡಿ. ನಕ್ಷೆಯಲ್ಲಿ ನಿಮ್ಮ ಮನೆ ಗುರುತಿಸಿ. ಬಳಿಕ ಮನೆಯ ಇಲ್ಲವೇ ಕುಟುಂಬದ ವಿವರ ಭರ್ತಿ ಮಾಡಿ, ನಿಮ್ಮ SE Reference ಐಡಿ ಪಡೆಯಬೇಕು ಎಂದು ಜಿಲ್ಲಾಧಿಕಾರಿಗಳು ಸಾರ್ವಜನಿಕರಿಗೆ ಮನವಿ ಮಾಡಿದರು.

ನಿಮ್ಮ ಎಸ್‌ಇಐಡಿ ಅನ್ನು ಸುರಕ್ಷಿತವಾಗಿ ಇಟ್ಟು, Enumerator ಮನೆಗೆ ಬಂದಾಗ ಅದನ್ನು ಅವರೊಂದಿಗೆ ಹಂಚಿಕೊಳ್ಳಬೇಕು. ಏ.16ರಿಂದ ಮೇ 15ರ ವರೆಗಿನ ಅವಧಿಯಲ್ಲಿ ಗಣತಿದಾರರು ಮನೆ-ಮನೆಗೆ ಭೇಟಿ ನೀಡಿ ವಿವರಗಳನ್ನು ಪರಿಶೀಲಿಸಬೇಕು. ಒಂದು ವೇಳೆ ಸಾರ್ವಜನಿಕರು ಸ್ವಯಂ ಗಣತಿ ಪೂರ್ಣಗೊಳಿಸದಿದ್ದರೆ, ಅಂತವರ ಸ್ವಯಂ ಗಣತಿಯನ್ನು ಗಣತಿದಾರರೇ ಮಾಹಿತಿ ಸಂಗ್ರಹಿಸಿ ಗಣತಿ ಕಾರ್ಯ ಯಶಸ್ವಿಗೊಳಿಸಲಿದ್ದಾರೆ ಎಂದರು.


ಈ ಹಂತದಲ್ಲಿ ಸಾರ್ವಜನಿಕರ ಮಾಹಿತಿಯನ್ನು ಶೇ.100ರಷ್ಟು ಗೌಪ್ಯತೆ ಇದ್ದು, ಸ್ವಯಂ ಗಣತಿಯನ್ನು ಪೂರ್ಣಗೊಳಿಸುವಂತೆ ಗಣತಿದಾರರಿಗೆ ಸೂಚನೆ ನೀಡಲಾಗಿದೆ. ಆಯಾ ಕುಟುಂಬದ ಮುಖ್ಯಸ್ಥರು ತಮ್ಮ ಕುಟುಂಬದ ಮಾಹಿತಿಯನ್ನು ಯಶಸ್ವಿಯಾಗಿ ಸಲ್ಲಿಸಿದ ನಂತರ, ಅವರಿಗೆ ಒಂದು ವಿಶಿಷ್ಟ ಸ್ವಯಂ-ಗಣತಿ ಐಡಿ (Self-Enumeration ID) ನೀಡಲಾಗುತ್ತದೆ. ಈ ಐಡಿಯನ್ನು ಎಸ್ ಎಂಎಸ್ ಮತ್ತು ಇಮೇಲ್ ಮೂಲಕ ಕಳುಹಿಸಲಾಗುತ್ತದೆ. ಅದನ್ನು ಮನೆಗೆ ಭೇಟಿ ನೀಡುವ ಗಣತಿದಾರರಿಗೆ (Enumerator) ಆ ಐಡಿಯನ್ನು ಹಂಚಿಕೊಂಡು ಜನಗಣತಿ ಯಶಸ್ವಿಗೊಳಿಸಬೇಕು ಎಂದರು. ಒಂದು ವೇಳೆ ಸಾರ್ವಜನಿಕರು ತಮ್ಮ ಸ್ವಯಂ ಗಣತಿ ಪೂರ್ಣಗೊಳಿಸದಿದ್ದರೆ, ಗಣತಿದಾರರೇ ಮಾಹಿತಿ ಸಂಗ್ರಹಿಸಬೇಕು ಎಂದರು.

ಜನಗಣತಿ ಸಲುವಾಗಿ ಬ್ಲಾಕ್ ರಚಿಸಲಾಗುತ್ತಿದ್ದು, 150 ರಿಂದ 200 ಮನೆಗಳು ಅಥವಾ 700 ರಿಂದ 800 ಜನಸಂಖ್ಯೆಗನುಗುಣವಾಗಿ ಓರ್ವ ಗಣತಿದಾರರನ್ನು ಪ್ರತಿ 6 ಜನ ಗಣತಿದಾರರಿಗೆ ಓರ್ವ ಮೇಲ್ವಿಚಾರಕರನ್ನು ನೇಮಿಸಲಾಗುವುದು. ಜಿಲ್ಲೆಯಲ್ಲಿ ಗ್ರಾಮೀಣ ಭಾಗದಲ್ಲಿ 2846, ನಗರ ಮತ್ತು ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 624 ಹಾಗೂ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ 565 ಬ್ಲಾಕ್ ಸೇರಿದಂತೆ ಒಟ್ಟಾರೆ ಜಿಲ್ಲೆಯಲ್ಲಿ 4,035 ಬ್ಲಾಕ್ ಗಳ ರಚನೆ ಮಾಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು 4405 ಗಣತಿದಾರರನ್ನು ಹಾಗೂ 767 ಮೇಲ್ವಿಚಾರಕರನ್ನು ನೇಮಿಸಲಾಗಿದೆ ಎಂದು ಹೇಳಿದರು.

ಜನಗಣತಿ ಅಧಿಕಾರಿಯು ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಗಣತಿದಾರರು ಕೇಳುವ ಪ್ರಶ್ನೆಗಳಿಗೆ ಸರಿಯಾದ ಮಾಹಿತಿ ನೀಡುವ ಮೂಲಕ ಸಹಕರಿಸುವಂತೆಯೂ ಹಾಗೂ ಜಿಲ್ಲೆಯಲ್ಲಿ ಭಾರತ ಜನಗಣತಿ 2027 ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಜಿಪಂ ಸಿಇಒ ರಿಶಿ ಆನಂದ, ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ, ಮಹಾನರಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಸೇರಿದಂತೆ ಇತರ ಅಧಿಕಾರಿಗಳು ಇದ್ದರು.

ಬಾಕ್ಸ್‌....

ಜನಗಣತಿಯನ್ನು ಎರಡು ಹಂತಗಳಲ್ಲಿ ನಡೆಯುತ್ತಿದ್ದು, ಇದು ಸಂಪೂರ್ಣ ಡಿಜಿಟಲ್ ಪ್ರಥಮ ಜನಗಣತಿಯಾಗಿದೆ. 2026 ಏ1ರಿಂದ 2026 ಏ.15ರ ವರೆಗೆ ಸ್ವಯಂ ಗಣತಿ ಕಾರ್ಯ ಪ್ರಗತಿಯಲ್ಲಿದೆ. 2026 ಏ.16 ರಿಂದ 2026 ಮೇ 16ರ ವರೆಗೆ ಮನೆ ಪಟ್ಟಿ ಕ್ಷೇತ್ರ ಕಾರ್ಯ ನಡೆಯಲಿದೆ. 2ನೇ ಹಂತದಲ್ಲಿ ಫೆಬ್ರವರಿ 2027 ರಿಂದ ಜನಸಂಖ್ಯಾ ಗಣತಿ ಕಾರ್ಯ ನಡೆಯಲಿದೆ.

। ಡಾ.ಆನಂದ.ಕೆ, ಜಿಲ್ಲಾಧಿಕಾರಿ ವಿಜಯಪುರ

------------

9bij02: ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಡಾ.ಆನಂದ.ಕೆ ಮಾತನಾಡಿದರು.