ಕನ್ನಡಪ್ರಭ ವಾರ್ತೆ ಮೂರ್ನಾಡು
ಮೂರ್ನಾಡು ವಿದ್ಯಾ ಸಂಸ್ಥೆಯ ಕಾಲೇಜು ಮೈದಾನದಲ್ಲಿ ಕೊಡಗಿನ ಹಿರಿಯ ಸಾಹಿತಿಗಳಾದ ನಾಗೇಶ್ ಕಾಲೂರು, ಮಡಿಕೇರಿ ಪೊಲೀಸ್ ಉಪ ಅಧೀಕ್ಷಕ ರವಿ ಹಾಗೂ ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರು ಡೊಳ್ಳು ಬಾರಿಸುವ ಮೂಲಕ ವರ್ಣರಂಜಿತ ಬೃಹತ್ ಕನ್ನಡ ಮೆರವಣಿಗೆಯನ್ನು ಉದ್ಘಾಟಿಸಿದರು.
ಮೂರ್ನಾಡುವಿನ ಶಾಲಾ ಕಾಲೇಜುಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಅಂಗನವಾಡಿ ಕಾರ್ಯಕರ್ತರು, ವಿವಿಧ ಸ್ತ್ರೀ ಶಕ್ತಿ ಸಂಘಗಳು, ಟೈಲರ್ ಅಸೋಸಿಯೇಷನ್, ಗಜಾನನ, ಆಪ್ತಮಿತ್ರ, ಸ್ವಸ್ತಿಕ್, ರಾಮ ಮಂದಿರ, ಮೂರ್ನಾಡು, ಗಾಂಧಿನಗರ, ಜೈಭೀಮ್ ಸಂಘ, ಅಯ್ಯಪ್ಪ ಯುವಕ ಮಂಡಳಿ, ತ್ರಿನೇತ್ರ, ನಕ್ಷತ್ರ, ಫ್ರೆಂಡ್ಸ್ ವಾಹನ ಮಾಲೀಕರು ಹಾಗೂ ಚಾಲಕರ ಸಂಘ, ಧರ್ಮಸ್ಥಳ ಸಂಘ, ಸಂಜೀವಿನಿ ಒಕ್ಕೂಟ, ವಿನಾಯಕ ಕೇರಿ ಸದಸ್ಯರು, ಕೊಡವ, ಗೌಡ, ಮಲಯಾಳಿ, ಮುಸ್ಲಿಂ ಸೇರಿದಂತೆ ವಿವಿಧ ಸಮುದಾಯಗಳು, ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟ ಕನ್ನಡ ಅಭಿಮಾನಿಗಳು, ಕಳಸ ಹೊತ್ತ ಮಹಿಳೆಯರು, ನಾಡಿನ ದಾರ್ಶನಿಕರ ವೇಷಧಾರಿಗಳು, ಕನ್ನಡ ಭಾಷೆಯ ವಿವಿಧ ಘೋಷಣೆಗಳ ಸ್ತಬ್ಧ ಚಿತ್ರ, ಮಂಡ್ಯದಿಂದ ಆಗಮಿಸಿದ ಡೊಳ್ಳು ಕುಣಿತ ಸೇರಿದಂತೆ ಭುವನೇಶ್ವರಿ ತಾಯಿಯ ಕಲಾಕೃತಿ ಆಕರ್ಷಕ ಹೂವಿನ ಅಲಂಕೃತ ರಥದೊಂದಿಗೆ ಮೂರ್ನಾಡು ಪಟ್ಟಣದಲ್ಲಿ ಮೆರವಣಿಗೆ ಸಾಗಿತು.ಪಿಎಂ ಶ್ರೀ ಮಾದರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಏರ್ಪಡಿಸಿದ್ದ ಬೃಹತ್ ವೇದಿಕೆ ಬಳಿಗೆ ಮೆರವಣಿಗೆ ಆಗಮಿಸಿತು. ಕಸಾಪ ಪದಾಧಿಕಾರಿ ಮುನೀರ್ ಹಾಗೂ ಶಿಕ್ಷಕ ಪಿ.ಆರ್.ರಾಜೇಶ್ ಮೆರವಣಿಗೆಯ ನಿರೂಪಣೆಯನ್ನು ಮಾಡಿದರು. ನಂತರ ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಎಸ್.ಕುಶನ್ ರೈ ರಾಷ್ಟ್ರಧ್ವಜ ಹಾಗೂ ಕಸಾಪದ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಅವರು ನಾಡ ಧ್ವಜಾರೋಹಣ ನೆರವೇರಿಸಿದರು.
ಕುಮಾರಿ ಮುಕ್ಕಾಟಿರ ಹಿತೈಷಿ ಅವರ ಭರತನಾಟ್ಯದ ನಂತರ ಸಭಾ ಕಾರ್ಯಕ್ರಮವನ್ನು ಕಸಾಪ ಜಿಲ್ಲಾಧ್ಯಕ್ಷ ಎಂ.ಪಿ.ಕೇಶವ್ ಕಾಮತ್ ಉದ್ಘಾಟಿಸಿ ಮಾತನಾಡಿದರು. ಜಿಲ್ಲೆಯ ಎಲ್ಲೆಡೆ ರಾಜ್ಯೋತ್ಸವ ಆಚರಣೆಗೊಳ್ಳುತ್ತಿದ್ದು, ಮೂರ್ನಾಡುವಿನಲ್ಲಿ ರಾಜ್ಯೋತ್ಸವವನ್ನು ಸಮ್ಮೇಳನದ ರೀತಿಯಲ್ಲಿ ನಡೆಸುತ್ತಿರುವುದು ಶ್ಲಾಘನೀಯ. ವರ್ಷದುದ್ದಕ್ಕೂ ಕನ್ನಡ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.
ಮಡಿಕೇರಿ ತಾಲೂಕು ಕಸಾಪದ ಅಧ್ಯಕ್ಷರಾದ ಕಡ್ಲೆರ ತುಳಸಿ ಮಾತನಾಡಿ, ಸರ್ಕಾರದ ಯಾವುದೇ ಅನುದಾನವಿಲ್ಲದೆ ಮೂರ್ನಾಡುವಿನಲ್ಲಿ ರಾಜ್ಯೋತ್ಸವವನ್ನು ಸಮ್ಮೇಳನದ ರೀತಿಯಲ್ಲಿ ಆಚರಣೆ ಮಾಡಿರುವ ಮೂರ್ನಾಡು ಹೋಬಳಿ ಘಟಕಕ್ಕೂ ಹಾಗೂ ಇಲ್ಲಿನ ವಿವಿಧ ಸಂಘ ಸಂಸ್ಥೆಗಳಿಗೂ ಧನ್ಯವಾದಗಳನ್ನು ತಿಳಿಸಿದರು.
ಜಿಲ್ಲಾ ಕಸಾಪದ ಗೌರವ ಕಾರ್ಯದರ್ಶಿ ಮುನೀರ್ ಅಹಮ್ಮದ್ ಮಾತನಾಡಿ, ಮೂರ್ನಾಡಿನ ಕಾರ್ಯಕ್ರಮ ಸರ್ವಜನರ ಒಗ್ಗಟ್ಟನ್ನು ಎತ್ತಿ ತೋರಿಸುತ್ತಿದೆ. ಇದೇ ರೀತಿ ಮುಂದಿನ ದಿನಗಳಲ್ಲಿಯೂ ಕನ್ನಡದ ಕಂಪನ್ನು ಎಲ್ಲೆಡೆ ಪಸರಿಸುವಂತೆ ಕರೆ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಈರಮಂಡ ಹರಿಣಿ ವಿಜಯ್ ಇಲ್ಲಿಯವರೆಗೆ ಕನ್ನಡಕ್ಕಾಗಿ ಶ್ರಮಿಸಿದವರನ್ನು ನೆನೆಪಿಸಿಕೊಂಡರು. ಸರ್ಕಾರದ ಅನುದಾನವಿಲ್ಲದೆ ಆಡಂಬರವಾಗಿ ನಡೆದ ಕನ್ನಡ ಹಬ್ಬದ ಭವ್ಯ ಮೆರವಣಿಗೆ, ಸಭಾ ಕಾರ್ಯಕ್ರಮ ಮತ್ತು ಊಟೋಪಚಾರಕ್ಕೆ ಕೈ ಜೋಡಿಸಿದ ಮೂರ್ನಾಡು ಪಟ್ಟಣದ ಎಲ್ಲ ಸಂಘ ಸಂಸ್ಥೆ ಹಾಗೂ ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ಹಿರಿಯ ಸಾಹಿತಿಗಳಾದ ಉಳುವಂಗಡ ಕಾವೇರಿ ಉದಯರವರ ‘ಪವಿತ್ರ ಪ್ರೀತಿ ಪ್ರಾಪ್ತಿ ’ ಎಂಬ ಪುಸ್ತಕವನ್ನು ಸಾಹಿತಿ ಕಿಗ್ಗಾಲು ಗಿರೀಶ್ ಬಿಡುಗಡೆಗೊಳಿಸಿದರು.
ಪಿಎಂ ಶ್ರೀ ಶಾಲೆ ಶಿಕ್ಷಕಿ ಎ.ಸಿ.ಜ್ಯೋತಿ ಪ್ರಾರ್ಥಿಸಿ, ಮೂರ್ನಾಡು ಹೋಬಳಿ ಘಟಕದ ಕಸಾಪ ಸಂಘಟನೆ ಕಾರ್ಯದರ್ಶಿ ಜಾಶೀರ್ ಸ್ವಾಗತಿಸಿ, ಶಾಲೆಯ ಮುಖ್ಯೋಪಾಧ್ಯಾಯನಿ ಪುಷ್ಪಾವತಿ ವಂದಿಸಿದರು.
ಕಸಾಪ ಪದಾಧಿಕಾರಿ ಕಲ್ಪನಾ ಸಾಮ್ರಾಟ್, ಪಿಎಂ ಶ್ರೀ ಶಾಲೆಯ ಶಿಕ್ಷಕಿಯರಾದ ಪ್ರೇಮಲತಾ ಶೆಟ್ಟಿ, ಗೌತಮಿ ಅಶೋಕ್, ನಿರ್ಮಲ ಅವರು ಸಭಾ ಕಾರ್ಯಕ್ರಮವನ್ನು ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮೂರ್ನಾಡು ಹೋಬಳಿಯ ವಿವಿಧ ಎಂಟು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಸ್ಟೆಪ್ ಅಪ್ ಶಾಡೋ ಡಾನ್ಸ್ ಅಕಾಡಮಿಯ ಕನ್ನಡ ನೃತ್ಯಗಳು ಆಕರ್ಷಿಸಿದವು ಮತ್ತು ಕನ್ನಡಾಭಿಮಾನಿಗಳ ಪ್ರಶಂಸೆಗೆ ಪಾತ್ರವಾದವು. ರಾಜ್ಯೋತ್ಸವದಲ್ಲಿ ಪಾಲ್ಗೊಂಡಿದ್ದ ಸಾವಿರಾರು ಮಂದಿಗೆ ರುಚಿ ರುಚಿಯಾದ ಉಪಹಾರ, ಊಟ ಮತ್ತು ಮಜ್ಜಿಗೆ ವ್ಯವಸ್ಥೆ ಮಾಡಲಾಗಿತ್ತು.