ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಮನುಷ್ಯ ಶ್ವಾಸ ಇರುವವರೆಗೂ ವಿಶ್ವಾಸ ಬಿಡಬಾರದು. ಸತಿ-ಪತಿ, ಗುರು-ಶಿಷ್ಯರು ಹಾಗೂ ಸ್ನೇಹಿತರು ಸಂಬಂಧದಲ್ಲಿ ವಿಶ್ವಾಸವಿಟ್ಟುಕೊಂಡರೆ ಜಗತ್ತೇ ಆನಂದವಾಗಿರುತ್ತದೆ ಎಂದು ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ವಿದ್ಯಾಪೀಠದ ಆಡಳಿತ ಮಂಡಳಿಯ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ಹೇಳಿದರು.

ನಗರದ ಬಸವಕೇಂದ್ರ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ ಬುಧವಾರ ನಡೆದ 36 ನೇ ವರ್ಷದ ಎಂಟನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ 3 ಜೋಡಿಗಳ ವಿವಾಹ ನೆರವೇರಿಸಿ ಮಾತನಾಡಿದ ಶ್ರೀಗಳು, ಲಿಂಗೈಕ್ಯ ಮಲ್ಲಿಕಾರ್ಜುನ ಶ್ರೀಗಳು ಶ್ರೀಮಠದಲ್ಲಿ ಸಾಮೂಹಿಕ ಕಲ್ಯಾಣ ನಡೆಯಲು ಕಾರಣೀಭೂತರು. ಜಾತಕ, ಗಳಿಗೆ, ರಾಶಿ ನೋಡದೇ ಮದುವೆಯಾದ ವಧು ವರರು ಹಾಗೂ ಅವರ ಕುಟುಂಬವರ್ಗದವರು ಬಸವಾದಿ ಪ್ರಮಥರ ಕರುಣೆಗೆ ಪಾತ್ರರಾಗಿದ್ದಾರೆ ಅವರೆಲ್ಲ ಅಭಿನಂದನಾರ್ಹರು ಎಂದರು.

ಶ್ರೀಮಠವು ಮಹಾಲಯ ಅಮಾವಾಸ್ಯೆ ದಿನ 180 ಜೋಡಿ ಮದುವೆ ಮಾಡಿದ ಉದಾಹರಣೆಯಿದೆ. ನಮ್ಮ ನಡೆ-ನುಡಿ ಸರಿಯಿಲ್ಲದೆ ಕಾಲ ಸರಿಯಿಲ್ಲ ಎನ್ನುವವರು ವಿಕಾರಿಗಳು. ಮನುಷ್ಯ ಇಂದು ಮನಸ್ಸನ್ನು ಕಲುಷಿತಗೊಳ್ಳುವ, ಅಹಂಕಾರದ ಮಾತುಗಳನ್ನಾಡುತ್ತಿದ್ದಾನೆ. ಇಂತಹ ಮಾತುಗಳ ಬದಲಾಗಿ ಹಿತ ನುಡಿಗಳನ್ನಾಡಬೇಕೆಂದರು.

ಕುಟುಂಬ, ಸಮಾಜ ಚೆನ್ನಾಗಿರಬೇಕಾದರೆ ನಿರಹಂಕಾರಿಯಾಗಿ, ಅಂತಃಕರುಣಿಯಾಗಿರಬೇಕು. 12 ನೇ ಶತಮಾನದ ವಚನ ಚಳುವಳಿ ಕುಟುಂಬ, ಸಮಾಜ, ಮನುಷ್ಯ ಹೇಗಿರಬೇಕೆಂಬ ತತ್ವವನ್ನು ತಿಳಿಸಿದೆ. ಅವುಗಳನ್ನು ನಾವೆಲ್ಲರೂ ಅನುಸರಿಸಬೇಕು. ಹಣವನ್ನು ದುಂದುವೆಚ್ಚ ಮಾಡಿದರೆ ರಾಷ್ಟ್ರೀಯ ಸಂಪತ್ತನ್ನು ಹಾಳು ಮಾಡಿದಂತೆ. ಹಾಗಾಗಿ ಮೂಢನಂಬಿಕೆ, ಕಂದಾಚಾರ ಬಿಟ್ಟು ಬದುಕಬೇಕು. ಶ್ರೀಮಠವು 25 ಸಾವಿರ ಮದುವೆಗಳನ್ನು ಮಾಡಿದೆ. ಈ ಕಾರ್ಯವನ್ನು ದೇಶದ ಯಾವುದೇ ಮಠಗಳು ಮಾಡಿಲ್ಲ. ಮದುವೆ ಕಾರ್ಯದಲ್ಲಿ ಭಾಗವಹಿಸುವವರ ಅನುಕೂಲಕ್ಕಾಗಿಯೇ ಈ ಅನುಭವ ಮಂಟಪವನ್ನು ನಿರ್ಮಿಸಲಾಯಿತು ಎಂದು ಸ್ಮರಿಸಿದರು.


ಗುರುಮಠಕಲ್‌ನ ಗುರುಶಾಂತವೀರ ಮುರುಘರಾಜೇಂದ್ರ ಸ್ವಾಮಿಗಳು ಮಾತನಾಡಿ, ಲಿಂಗೈಕ್ಯ ಮಲ್ಲಿಕಾರ್ಜುನ ಸ್ವಾಮಿಗಳು ಪ್ರತಿವರ್ಷ ಜಯವಿಭವ ಸ್ವಾಮಿಗಳ ಸ್ಮರಣೋತ್ಸವದ ನೆನಪಿಗಾಗಿ ಶ್ರೀಮಠದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಅಲ್ಲಿಂದ ಇಲ್ಲಿಯವರೆಗೆ ಶ್ರೀಮಠವು ಪ್ರತಿತಿಂಗಳು ನೇ ತಾರೀಕಿನಂದು ಸಾಮೂಹಿಕ ಕಲ್ಯಾಣ ಮಹೋತ್ಸವವನ್ನು ನಿರಂತರವಾಗಿ ಮುನ್ನಡೆಸಿಕೊಂಡು ಬರುತ್ತಿದೆ. ಮಧ್ಯಕರ್ನಾಟಕ ಭಾಗದ ಜನರಿಗೆ ಅನುಕೂಲವಾಗುವ ದೂರದೃಷ್ಟಿಯಿಂದ ಈ ಕಾರ್ಯವನ್ನು ನೆರವೇರಿಸುತ್ತಿದೆ ಎಂದರು.

ವೈಚಾರಿಕ, ವೈಜ್ಞಾನಿಕ ಹಾಗೂ ಬಸವಾದಿ ಶರಣರ ಚಿಂತನೆಗಳನ್ನು ಬಿತ್ತುವ ಕೆಲಸ ಶ್ರೀಮಠವು ಮಾಡುತ್ತಿದೆ. ಬಡಜನತೆಗೆ ವಿವಾಹದ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟ ಉಂಟಾಗಬಾರದು, ಸಾಲಕ್ಕೆ ಒಳಗಾಗಬಾರದೆನ್ನುವ ನಿಟ್ಟಿನಲ್ಲಿ ಶ್ರೀಮಠವು ಸರಳವಾಗಿ ಮದುವೆ ಮಾಡಲು ಸಹಕಾರಿಯಾಗಿದೆ ಎಂದು ಸ್ಮರಿಸಿದರು.

ಆಷಾಡದಲ್ಲಿ ಮೂಢನಂಬಿಕೆಯನ್ನು ದೂರಮಾಡಿ ಇಂದು ಕಲ್ಯಾಣ ಮಹೋತ್ಸವ ನೆರವೇರುತ್ತಿದೆ. ವಧು-ವರರು ಬಸವಾದಿ ಶರಣರ ಆದರ್ಶಗಳನ್ನು ಪಾಲಿಸಿಕೊಂಡು ಜೀವನ ಸಾಗಿಸಬೇಕು. ಜೀವನದ ಅತ್ಯಂತ ಅಮೂಲ್ಯ ಘಟ್ಟವೆಂದರೆ ದಾಂಪತ್ಯ ಜೀವನ. ಆಗ ಜೀವನದಲ್ಲಿ ನೆಮ್ಮದಿ ಸಂತೋಷ ಸಿಗುತ್ತದೆ ಎಂದರು.

ಶ್ರೀಮಠದ ಗೌರವ ಸ್ವೀಕರಿಸಿ ಮಾತನಾಡಿದ, ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಹಿರಿಯ ಶಸ್ತ್ರಚಿಕಿತ್ಸಕ ಡಾ.ಸಾಲಿಮಂಜಪ್ಪ, ಏನಾದರೂ ಸಾಧನೆ ಮಾಡಬೇಕು ಎಂಬ ಆಸೆಯನ್ನು ಇಟ್ಟುಕೊಂಡು ಬೆಳೆದವನು ನಾನು. ಕಷ್ಟ ಬಂದಾಗ ಕುಗ್ಗದೇ ಸುಖ ಬಂದಾಗ ಹಿಗ್ಗದೇ ಸಮನಾಗಿ ಸ್ವೀಕರಿಸಿ ಬದುಕನ್ನು ಸಾಗಿಸಬೇಕು. ಬಸವಣ್ಣನವರ ಕಾಯಕವೇ ಕೈಲಾಸ ನುಡಿ ನಮ್ಮ ಮನಸ್ಸಿನಲ್ಲಿ ಹಾಸು ಹೊಕ್ಕಾಗಬೇಕು. ಕಷ್ಟಪಟ್ಟು ಕೆಲಸ ಮಾಡಿದರೆ ನಮಗೆ ಒಳ್ಳೆಯ ಫಲ ಸಿಕ್ಕೇ ಸಿಗುತ್ತದೆ ಎಂದರು.

ಎಸ್‌ಜೆಎಂ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಬಿ ಗುಡಸಿ, ದಾವಣಗೆರೆ ವಿರಕ್ತಮಠದ ಡಾ. ಬಸವಪ್ರಭು ಮಹಾಸ್ವಾಮಿಗಳು ವೇದಿಕೆಯಲ್ಲಿದ್ದರು. ಜಮುರಾ ಕಲಾವಿದ ಉಮೇಶ್ ಪತ್ತಾರ್ ವಚನ ಸಂಗೀತ ಹಾಡಿದರು. ಲಿಂಗರಾಜ್ ಸ್ವಾಗತಿಸಿ, ಕಾರ‍್ಯಕ್ರಮ ನಿರೂಪಿಸಿದರು.