ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ವಿಶ್ವವಿದ್ಯಾಲಯದ ಬಿಜಿಎಸ್ ಸಭಾಂಗಣದಲ್ಲಿ ಆ.13ರಂದು 6ನೇ ಘಟಿಕೋತ್ಸವ ನಡೆಯಲಿದೆ. ಘಟಿಕೋತ್ಸವದಲ್ಲಿ ವಿವಿಧ ವಿಭಾಗಗಳ 1841 ವಿದ್ಯಾರ್ಥಿಗಳಿಗೆ ಪದವಿ ಹಾಗೂ 31 ಸಂಶೋಧನಾರ್ಥಿಗಳಿಗೆ ಪಿಎಚ್.ಡಿ ಪದವಿ ಪ್ರದಾನ ಮಾಡಲಾಗುವುದು.
ಕನ್ನಡಪ್ರಭ ವಾರ್ತೆ ನಾಗಮಂಗಲ
ತಾಲೂಕಿನ ಆದಿಚುಂಚನಗಿರಿ ವಿಶ್ವವಿದ್ಯಾಲಯದ ಬಿಜಿಎಸ್ ಸಭಾಂಗಣದಲ್ಲಿ ಆ.13ರಂದು 6ನೇ ಘಟಿಕೋತ್ಸವ ನಡೆಯಲಿದೆ ಎಂದು ವಿಶ್ವ ವಿದ್ಯಾಲಯದ ಉಪಕುಲಪತಿ ಡಾ.ಎಸ್.ಎನ್.ಶ್ರೀಧರ ತಿಳಿಸಿದರು.
ತಾಲೂಕಿನ ಬಿ.ಜಿ.ನಗರದ ಆದಿಚುಂಚನಗಿರಿ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷ ಹಾಗೂ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ನಡೆಯುವ ಘಟಿಕೋತ್ಸದಲ್ಲಿ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಮುಖ್ಯ ಅತಿಥಿ ಹಾಗೂ ಬೆಂಗಳೂರಿನ ಕೇಂದ್ರೀಯ ಉತ್ಪಾದನಾ ತಂತ್ರಜ್ಞಾನ ಸಂಸ್ಥೆ ನಿರ್ದೇಶಕ ಡಾ.ನಾಗಹನುಮಯ್ಯ ಗೌರವ ಅತಿಥಿಯಾಗಿ ಪಾಲ್ಗೊಳ್ಳುವರು ಎಂದರು.
ಘಟಿಕೋತ್ಸವದಲ್ಲಿ ವಿವಿಧ ವಿಭಾಗಗಳ 1841 ವಿದ್ಯಾರ್ಥಿಗಳಿಗೆ ಪದವಿ ಹಾಗೂ 31 ಸಂಶೋಧನಾರ್ಥಿಗಳಿಗೆ ಪಿಎಚ್.ಡಿ ಪದವಿ ಪ್ರದಾನ ಮಾಡಲಾಗುವುದು. ಹಾಗಾಗಿ ವಿದ್ಯಾರ್ಥಿಗಳು ಹಾಗೂ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಗ್ರಾಮೀಣ ವಿದ್ಯಾರ್ಥಿಗಳಿಗೆ ಆದ್ಯತೆ:
2018ರಲ್ಲಿ ಸ್ಥಾಪನೆಯಾದ ಆದಿಚುಂಚನಗಿರಿ ವಿಶ್ವವಿದ್ಯಾಲಯವು ನ್ಯಾಕ್‌ನಿಂದ ಎ+ ಮಾನ್ಯತೆ ಪಡೆದಿದೆ. 67.3 ಎಕರೆ ವಿಸ್ತೀರ್ಣದ ಹಸಿರಿನಿಂದ ಕಂಗೊಳಿಸುವ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿರುವ ನಮ್ಮ ವಿಶ್ವವಿದ್ಯಾಲಯದಲ್ಲಿ 7400ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಪೈಕಿ ಶೇ.80ರಷ್ಟು ಮಂದಿ ಗ್ರಾಮೀಣ ಪ್ರದೇಶದವರು. ಶೇ.58ರಷ್ಟು ವಿದ್ಯಾರ್ಥಿನಿಯರಿದ್ದಾರೆ. 788 ಕ್ಕೂ ಹೆಚ್ಚು ಬೋಧಕ ಹಾಗೂ1423 ಬೋಧಕೇತರ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರು.
ಗ್ರಾಮೀಣ ಪ್ರದೇಶದ ಈ ವಿವಿಯಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಭೈರವೈಕ್ಯ ಡಾ. ಬಾಲಗಂಗಾಧರನಾಥಶ್ರೀಗಳ ಆಶಯದಂತೆ ಅನ್ನ, ಅಕ್ಷರ, ಆರೋಗ್ಯ, ಅರಣ್ಯ, ಆಶ್ರಯ, ಅನುಕಂಪ, ಅನುಬಂಧ ದಾಸೋಹಗಳೊಂದಿಗೆ ಆಕಳು ಸೇವೆ ಹಾಗೂ ಆಧ್ಯಾತ್ಮಿಕತೆಗೂ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತಿದೆ ಎಂದರು.
ವಿವಿ ಮೌಲ್ಯಮಾಪನ ಕುಲಸಚಿವ ಪ್ರೊ.ನಾಗರಾಜ್ ಮಾತನಾಡಿ, ನಮ್ಮ ವಿಶ್ವವಿದ್ಯಾಲಯದಲ್ಲಿ ಒಟ್ಟು ಎಂಟು ಅಧ್ಯಾಪಕರ ವಿಭಾಗಗಳಿದ್ದು, 17 ಪದವಿಪೂರ್ವ, 33 ಸ್ನಾತಕೋತ್ತರ ಪದವಿ ಕೋರ್ಸ್‌ಗಳಿವೆ. ಈ ಘಟಿಕೋತ್ಸವದಲ್ಲಿ ದತ್ತಿಗಳು ನೀಡಿರುವ ದಾನದಲ್ಲಿ 6 ಮಂದಿಗೆ ಚಿನ್ನದ ಪದಕ ಹಾಗೂ ವಿವಿಧ ವಿಷಯಗಳ ಕುರಿತು ಪ್ರಬಂಧ ಮಂಡಿಸಿರುವ 31 ಮಂದಿಗೆ ಪಿಎಚ್.ಡಿ ಪದವಿ ಪ್ರದಾನ ಮಾಡಲಾಗುವುದು ಎಂದರು.
ಆದಿಚುಂಚನಗಿರಿ ಆಸ್ಪತ್ರೆ ಸಾರ್ವಜನಿಕ ಸಂಪರ್ಕಾಧಿಕಾರಿ ವೈ.ಪಿ.ಧಮೇಂದ್ರ ಮಾತನಾಡಿ, 1151 ಹಾಸಿಗೆಗಳುಳ್ಳ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ 160 ಐಸಿಯು ಹಾಸಿಗೆಗಳು, 20 ಶಸ್ತ್ರಚಿಕಿತ್ಸಾ ಕೊಠಡಿಗಳು ಹಾಗೂ 12 ಸೂಪರ್ ಸ್ಪೆಷ್ಪಾಲಿಟಿ ವಿಭಾಗಗಳಿವೆ. ಗ್ರಾಮೀಣ ಪ್ರದೇಶದ ಕಣ್ಣಿನ ಪೊರೆ ರೋಗಿಗಳನ್ನು ಆಸ್ಪತ್ರೆಗೆ ಕರೆತಂದು ಉಚಿತ ಊಟ ಮತ್ತು ವಸತಿ ಸೌಲಭ್ಯದ ಜೊತೆಗೆ ಶಸ್ತ್ರಚಿಕಿತ್ಸೆ, ಲೆನ್ಸ್ ಹಾಗೂ ಕನ್ನಡಕ ನೀಡಲಾಗುತ್ತಿದೆ. ಕಳೆದ 20 ವರ್ಷಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದರು.
ಕೈ-ಕಾಲು ಕಳೆದುಕೊಂಡವರಿಗೆ ಕೃತಕ ಅಂಗ ಜೋಡಣೆ, ಸೀಳು ತುಟಿ-ಅಂಗುಳಿನ ಮಕ್ಕಳಿಗೆ ಶಸ್ತ್ರಚಿಕಿತ್ಸೆ, ಕಿಡ್ನಿ ಕಸಿ ಸೇರಿದಂತೆ ಹಲವು ಸೇವೆಗಳನ್ನು ನೀಡಲಾಗುತ್ತಿದೆ. ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಹಲವು ಚಿಕಿತ್ಸೆಗಳು ಉಚಿತವಾಗಿವೆ. ಪ್ರತಿ ತಿಂಗಳು 200ಕ್ಕೂ ಹೆಚ್ಚು ಆಂಜಿಯೋಗ್ರಾಮ್ ಹಾಗೂ ಆಂಜಿಯೋಪ್ಲಾಸ್ಟಿ ನಡೆಯುತ್ತಿದ್ದು, ಅರ್ಹ ಬಿಪಿಎಲ್ ಫಲಾನುಭವಿಗಳಿಗೆ ಉಚಿತ ಸೇವೆ ನೀಡಲಾಗುತ್ತಿದೆ ಎಂದರು.
ಅಂಗಾಂಗ ದಾನದ ಬಗ್ಗೆ ಜಾಗೃತಿ, 100ಮಂದಿ ಬಡವರಿಗೆ ದಂತಪಂಕ್ತಿ ಅಳವಡಿಕೆ ಹಾಗೂ ವಾಕಥಾನ್‌ಗಳ ಮೂಲಕ ಆರೋಗ್ಯ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಶ್ರೀಗಳ ಪ್ರೇರಣೆಯಿಂದ ಶಿಕ್ಷಣದ ಜೊತೆಗೆ ಆರೋಗ್ಯ ಮತ್ತು ಸಮಾಜಮುಖಿ ಸೇವೆಗೂ ವಿಶ್ವವಿದ್ಯಾಲಯ ಒತ್ತು ನೀಡುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ರೋಹಿತ್, ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಗೋವಿಂದ್, ಉಪನ್ಯಾಸಕರಾದ ನಾಗೇಶ್, ಚೇತನ್ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.