ಬೆಳಗಾವಿ ಸೆಷನ್‌ ಬಂದೋಬಸ್ತ್‌ಗೆ 7000 ಪೊಲೀಸರು

KannadaprabhaNewsNetwork |  
Published : Nov 30, 2026, 03:15 AM IST
ಸಿದ್ಧತೆ ಪರಿಶೀಲನೆ | Kannada Prabha

ಸಾರಾಂಶ

ಚಳಿಗಾಲದ ಅಧಿವೇಶನದ ಬಂದೋಬಸ್ತ್‌ಗೆ 14 ಜನ ವಿವಿಧ ಹಂತದ ಐಪಿಎಸ್ ಅಧಿಕಾರಿಗಳು ಸೇರಿ ಒಟ್ಟು 7 ಸಾವಿರ ಸಿಬ್ಬಂದಿಯನ್ನು ನಿಯೋಜಿಸಿದ್ದು, ಸೋಮವಾರದಿಂದಲೇ ಹಂತ ಹಂತವಾಗಿ ನಗರಕ್ಕೆ ಆಗಮಿಸಿ ಅವರು ಬಂದೋಬಸ್ತ್‌ ಕರ್ತವ್ಯ ವಹಿಸಿಕೊಳ್ಳಲಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಪ್ರಕಾಶ ನಿಕ್ಕಂ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ:

ಚಳಿಗಾಲದ ಅಧಿವೇಶನದ ಬಂದೋಬಸ್ತ್‌ಗೆ 14 ಜನ ವಿವಿಧ ಹಂತದ ಐಪಿಎಸ್ ಅಧಿಕಾರಿಗಳು ಸೇರಿ ಒಟ್ಟು 7 ಸಾವಿರ ಸಿಬ್ಬಂದಿಯನ್ನು ನಿಯೋಜಿಸಿದ್ದು, ಸೋಮವಾರದಿಂದಲೇ ಹಂತ ಹಂತವಾಗಿ ನಗರಕ್ಕೆ ಆಗಮಿಸಿ ಅವರು ಬಂದೋಬಸ್ತ್‌ ಕರ್ತವ್ಯ ವಹಿಸಿಕೊಳ್ಳಲಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಪ್ರಕಾಶ ನಿಕ್ಕಂ ತಿಳಿಸಿದರು.

ಸುವರ್ಣ ವಿಧಾನಸೌಧ ಸಮೀಪದ ಟೆಂಟ್‌ಹೌಸ್ ಸಿಟಿಗೆ ಭಾನುವಾರ ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಐಜಿ, ಡಿಐಜಿ, ಎಸ್‌ಪಿ, ಹೆಚ್ಚುವರಿ ಎಸ್‌ಪಿ ಸೇರಿದಂತೆ 14 ಜನ ಐಪಿಎಸ್ ಅಧಿಕಾರಿಗಳು, ಡಿಎಸ್‌ಪಿ, ಎಸಿಪಿ, ಪೊಲೀಸ್ ನಿರೀಕ್ಷಕರು, ಪಿಎಸ್‌ಐ, ಎಎಸ್‌ಐ, ಎಚ್‌ಸಿ, ಪಿಸಿ, ಗೃಹರಕ್ಷಕ ದಳ ಸಿಬ್ಬಂದಿ, ಕೆಎಸ್‌ಆರ್‌ಪಿ ತುಕಡಿ ಸೇರಿದಂತೆ ಒಟ್ಟು 7 ಸಾವಿರ ಪೊಲೀಸರು ಬಂದೋಬಸ್ತ್‌ಗೆ ನಿಯೋಜನೆಯಾಗಿದ್ದಾರೆ ಎಂದರು.

ಟೆಂಟ್ ಹೌಸ್ ಸಿಟಿಯಲ್ಲಿ ಸುಮಾರು 2,500 ಅಧಿಕಾರಿ/ ಸಿಬ್ಬಂದಿಗೆ ವಸತಿ ವ್ಯವಸ್ಥೆ ಮಾಡಲಾಗುವುದು. ಟೆಂಟ್ ಹೌಸ್ ಸಿಟಿ ಜತೆಗೆ ನಗರದ ಬೇರೆ ಕಡೆಗಳಲ್ಲಿಯೂ ಪೊಲೀಸ್‌ ಅಧಿಕಾರಿ ಹಾಗೂ ಸಿಬ್ಬಂದಿಗಾಗಿ ವಸತಿ ವ್ಯವಸ್ಥೆ ಮಾಡಿದ್ದೇವೆ. ಟೆಂಟ್ ಹೌಸ್ ಸಿಟಿಯಲ್ಲಿ ವಸತಿಗಾಗಿ ಉತ್ತಮವಾದ ಮಂಚ, ಹಾಸಿಗೆಗಳನ್ನು ಅಳವಡಿಸಿದ್ದೇವೆ. ವಾರದಲ್ಲಿ ಎರಡು ಸಲ ಮುದ್ದೆ ಸಹಿತ ವಿವಿಧ ಬಗೆಯ ಊಟ, ಬಿಸಿ ನೀರಿನ ವ್ಯವಸ್ಥೆ ಇರಲಿದೆ. ನಿತ್ಯ ಕರ್ತವ್ಯ ನಿರ್ವಹಿಸಿ ಮರಳಿದ ಬಳಿಕ ವಿಶ್ರಾಂತಿ ವೇಳೆಗೆ ಮನರಂಜನೆಗಾಗಿ ಟಿವಿ ವೀಕ್ಷಣೆಗೆ ವ್ಯವಸ್ಥೆ ಮಾಡುತ್ತಿದ್ದೇವೆ. ಜೊತೆಗೆ, ನಮ್ಮಲ್ಲಿಯೇ ಅನೇಕ ಹಾಡುಗಾರಿಕೆಯ ಪ್ರತಿಭೆಯುಳ್ಳ ಸಿಬ್ಬಂದಿಯಿದ್ದು, ಅವರ ಹಾಡುಗಾರಿಕೆಗೆ ಸಹ ವ್ಯವಸ್ಥೆ ಮಾಡುತ್ತಿದ್ದೇವೆ ಎಂದು ಹೇಳಿದರು.

ಪೂರ್ವ ಸಿದ್ಧತೆ ಪರಿಶೀಲಿಸಿದ ಸಲೀಂ: ವಿಧಾನ ಪರಿಷತ್ ಸಭಾಪತಿ ಸಲೀಂ ಅಹ್ಮದ್ ಅವರು ಭಾನುವಾರ ಸುವರ್ಣ ವಿಧಾನಸೌಧಕ್ಕೆ ಭೇಟಿ ನೀಡಿ ಚಳಿಗಾಲ ಅಧಿವೇಶನದ‌ ಪೂರ್ವ ಸಿದ್ದತೆಗಳನ್ನು ಪರಿಶೀಲಿಸಿದರು. ಸಭಾಪತಿಗಳ ಕಚೇರಿ, ಸಭಾಂಗಣ, ಬ್ಯಾಂಕ್ವೆಟ್ ಹಾಲ್‌ನಲ್ಲಿ ಮಾಡಲಾಗಿರುವ ಸಿದ್ಧತೆಗಳನ್ನು ಪರೀಶಿಲಿಸಿ, ಅಧಿಕಾರಿಗಳಿಗೆ ಸಲಹೆ ಸೂಚನೆಗಳನ್ನು ನೀಡಿದರು.

ಪ್ರತಿಭಟನೆಗೆ ಸ್ಥಳಗಳ ನಿಗದಿ:

ಅಧಿವೇಶನದ ವೇಳೆ ಈ ಸಲ ಪ್ರತಿಭಟನೆಗಾಗಿ ಹಲಗಾ-ಮಚ್ಛೆ ಬೈಪಾಸ್‌ನಲ್ಲಿ ಹಾಗೂ ಯಡಿಯೂರಪ್ಪ ಮಾರ್ಗದ ಧಾರವಾಡ ನಾಕಾ ಬಳಿ ವ್ಯವಸ್ಥೆ ಮಾಡಿದ್ದೇವೆ. ಈಗಾಗಲೇ 60 ಸಂಘಟನೆಗಳಿಂದ ಪ್ರತಿಭಟನೆಗೆ ಅವಕಾಶ ಕೋರಿ ಮನವಿಗಳು ಬಂದಿವೆ. ಇವರಿಗೆಲ್ಲ ನಿಗದಿತ ದಿನಾಂಕದ ಸಮೇತ ಅನುಮತಿ ನೀಡುವ ಪ್ರಕ್ರಿಯೆ ಜಾರಿಯಲ್ಲಿದೆ. ಪ್ರತಿಭಟನೆಯ ನೆಪದಲ್ಲಿ ರಸ್ತೆ ತಡೆ, ಮುತ್ತಿಗೆ ಅಥವಾ ಸಾರ್ವಜನಿಕರಿಗೆ ತೊಂದರೆಯಾಗುವಂತಹ ಚಟುವಟಿಕೆಗಳಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಅನುಮತಿ ಸಂದರ್ಭದಲ್ಲೇ ಈ ಬಗ್ಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗುತ್ತಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಿಸ್ತೇಜನಗೊಂಡ ಗ್ರಾಮೀಣ ಗ್ರಂಥಾಲಯಗಳು !
ಪ್ರತಿಯೊಬ್ಬ ಕನ್ನಡಿಗ ನಾಡಿನ ಕಾವಲುಗಾರನಾಗಬೇಕಿದೆ: ಚಲಪತಿ ಗೌಡ