ಆರ್. ಸುಬ್ರಮಣಿ
ಕನ್ನಡಪ್ರಭ ವಾರ್ತೆ ಸಿದ್ದಾಪುರತನ್ನ ಮಗನ ಚಿಕಿತ್ಸೆಗಾಗಿ ನೆರವಾದ ಸಮಾಜಕ್ಕೆ ಸೇವೆಯ ಮೂಲಕ ಕೃತಜ್ಞತೆಯನ್ನು ಸಲ್ಲಿಸುತ್ತಿರುವ ಅಪರೂಪದ ವ್ಯಕ್ತಿ ಚೆರಿಯಪರಂಬು ಗ್ರಾಮದ ಜಾಬಿರ್ ನಿಜಾಮಿ. ತಾವೇ ಸ್ಥಾಪಿಸಿದ ಟ್ರಸ್ಟ್ ಮೂಲಕ ಈಗಾಗಲೇ 30 ಕ್ಕೂ ಅಧಿಕ ನೊಂದ ನಿರ್ಗತಿಕರ ಬಾಳಿಗೆ ಬೆಳಕಾಗಿ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಮಗನ ಚಿಕಿತ್ಸೆಗೆ ನೆರವಾದ ಸಮಾಜಕ್ಕೆ ನೆರವು: ಜಾಬಿರ್ ನಿಜಾಮಿ ಮೂಲತಃ ನಾಪೋಕ್ಲು ಗ್ರಾಮದ ಚೆರಿಯಪರಂಬು ನಿವಾಸಿ. ಕಳೆದ ಆರು ವರ್ಷಗಳ ಹಿಂದೆ ಇವರ ಮಗ ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದನು. ಈ ಸಂದರ್ಭ ಮಗನ ಚಿಕಿತ್ಸೆಯ ವೆಚ್ಚಕ್ಕಾಗಿ ಪರದಾಡಿದ್ದು ಗ್ರಾಮಸ್ಥರ ಹಾಗೂ ಸಂಬಂಧಿಕರ ನೆರವಿನೊಂದಿಗೆ ಮಗನಿಗೆ ಅಗತ್ಯ ಚಿಕಿತ್ಸೆಯನ್ನು ಕೊಡಿಸಿದ್ದರು. ಈ ಘಟನೆಯು ಜಾಬಿರ್ ಜೀವನದಲ್ಲಿ ಸೇವೆಯ ಮಾರ್ಗವನ್ನು ತೋರಿಸಿದೆ. ಸಣ್ಣಪುಟ್ಟ ಸೇವಾ ಚಟುವಟಿಕೆಗಳನ್ನು ಪ್ರಾರಂಭಿಸಿದ ಜಾಬಿರ್ ತಮ್ಮ ಗ್ರಾಮದಲ್ಲೇ ಹತ್ತು ತಿಂಗಳ ಹಿಂದೆ ಸೇವ್ ದಿ ಡ್ರೀಮ್ಸ್ ಎಂಬ ಟ್ರಸ್ಟ್ ಸ್ಥಾಪಿಸಿದರು. ಇದಾದ ನಂತರ ಜಿಲ್ಲೆಯ ಅನೇಕ ಅನಾರೋಗ್ಯ ಪೀಡಿತ ಬಡವರ ಬಾಳಿಗೆ ಬೆಳಕಾದರು.ಏಳು ತಿಂಗಳಲ್ಲಿ 7.5 ಕೋಟಿ ರು. ನೆರವು ನೀಡಿದ ಸಂಸ್ಥೆ: ಸಹಾಯಕ್ಕಾಗಿ ಸಂಸ್ಥೆಯನ್ನು ಸಂಪರ್ಕ ಮಾಡಿದ ಕೊಡಗು ಜಿಲ್ಲೆ ಸೇರಿದಂತೆ ರಾಜ್ಯದ ಹಲವೆಡೆಗಳ ನಿರ್ಗತಿಕರಾದ ಅನಾರೋಗ್ಯ ಪೀಡಿತರಿಗೆ ಸೇವ್ ದಿ ಡ್ರೀಮ್ಸ್ ಸಂಸ್ಥೆಯ ಮೂಲಕ ನೆರವನ್ನು ನೀಡಿದ್ದಾರೆ. ಕಳೆದ ಏಳು ತಿಂಗಳಲ್ಲಿ ಒಟ್ಟು 37 ರೋಗಿಗಳಿಗೆ 7.5 ಕೋಟಿ ರು. ಸಂಗ್ರಹ ಮಾಡಿ ಚಿಕಿತ್ಸೆಗೆ ನೆರವಾಗಿದ್ದಾರೆ.
ಐದು ದಿನಗಳಲ್ಲಿ ಒಂದು ಕೋಟಿ ಸಂಗ್ರಹ: ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ರಿಝಾ ಫಾತಿಮಾ ಎಂಬ ಪುಟ್ಟ ಕಂದಮ್ಮಳಿಗೆ ಮಾರಕ ರೋಗದ ಚಿಕಿತ್ಸೆಗಾಗಿ ಬರೋಬರಿ ಒಂದು ಕೋಟಿ ರು. ವೆಚ್ಚದಲ್ಲಿ ಇಮ್ಮುನೊಥೆರಪಿ ಅವಶ್ಯಕವಾಗಿತ್ತು. ಈ ಸಂದರ್ಭದಲ್ಲಿ ಪೋಷಕರು ಅಗತ್ಯ ದಾಖಲೆಗಳೊಂದಿಗೆ ಕೊಡಗಿನ ಸೇವ್ ದಿ ಡ್ರೀಮ್ಸ್ ಸಂಸ್ಥೆಯನ್ನು ಸಂಪರ್ಕಿಸಿ ನೆರವು ಯಾಚಿಸಿದ ಹಿನ್ನೆಲೆಯಲ್ಲಿ ಸಂಸ್ಥೆಯು ದೇಶ, ವಿದೇಶ, ರಾಜ್ಯ, ಜಿಲ್ಲೆಗಳಿಂದ ಕೇವಲ ಐದು ದಿನಗಳಲ್ಲಿ ಬರೋಬ್ಬರಿ 1 ಕೋಟಿ ರು. ಹಣವನ್ನು ಸಂಗ್ರಹಿಸಿ ಮಗುವಿನ ಚಿಕಿತ್ಸೆಗೆ ನೆರವಾಗಿದ್ದಾರೆ. ಅಲ್ಲದೆ ಗೋಣಿಕೊಪ್ಪದ ಆಟೋ ಚಾಲಕ ಆದಿಲ್‌ಪಾಷಾ ಎಂಬುವವರ ಇಬ್ಬರು ಮಕ್ಕಳ ಚಿಕಿತ್ಸೆಗೆ ಮೂರು ದಿನಗಳಲ್ಲಿ 80 ಲಕ್ಷ ರು. ಸಂಗ್ರಹಿಸಿ ನೆರವಾಗಿದ್ದಾರೆ.ಸಂಗ್ರಹ ಹೇಗೆ: ನೊಂದವರು ಅಗತ್ಯ ದಾಖಲೆಗಳೊಂದಿಗೆ ನೆರವಿಗಾಗಿ ಸೇವ್ ದಿ ಡ್ರೀಮ್ಸ್ ಸಂಸ್ಥೆಯನ್ನು ಸಂಪರ್ಕಿಸಿದ ಸಂದರ್ಭದಲ್ಲಿ ಸಂಸ್ಥೆಯ ಪದಾಧಿಕಾರಿಗಳು ನೇರವಾಗಿ ರೋಗಿಯನ್ನು ಸಂಪರ್ಕಿಸಿ ಮಾಹಿತಿಯನ್ನು ಕಲೆ ಹಾಕುತ್ತಾರೆ. ಅಲ್ಲದೆ ರೋಗದ ವಿವರ ಹಾಗೂ ಚಿಕಿತ್ಸೆಯ ವೆಚ್ಚದ ಕುರಿತು ವೈದ್ಯರ ಬಳಿ ಸಮಾಲೋಚಿಸುತ್ತಾರೆ. ಗ್ರಾಮ ಪಂಚಾಯಿತಿಯಿಂದ ಅರ್ಜಿ ಪಡೆಯಲಾಗುತ್ತದೆ. ತದ ನಂತರ ರೋಗಿಯ ಗ್ರಾಮದ ಪ್ರಮುಖರನ್ನು ಸೇರಿಸಿ ತಾತ್ಕಾಲಿಕ ಸಮಿತಿಯನ್ನು ರಚಿಸಲಾಗುತ್ತದೆ. ನಂತರ ರೋಗಿಯ ಸಂಬಂಧಿಕರ ಹೆಸರಿನಲ್ಲಿ ಬ್ಯಾಂಕ್ ಖಾತೆ, ಗೂಗಲ್ ಪೇ ಮಾಡಲಾಗಿ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಲಾಗುತ್ತದೆ. ಅಲ್ಲದೆ ಪ್ರತಿನಿತ್ಯ ಖಾತೆಯ ವಿವರಗಳನ್ನು ಸಂಸ್ಥೆಯು ಪರಿಶೀಲಿಸುತ್ತದೆ. ಚಿಕಿತ್ಸೆಗೆ ಬೇಕಾದ ಹಣ ಖಾತೆಯಲ್ಲಿ ಸಂಗ್ರಹವಾದ ಕ್ಷಣದಲ್ಲಿ ಮತ್ತೊಮ್ಮೆ ಗ್ರಾಮದ ಸಮಿತಿಯವರ ಎದುರು ಲೆಕ್ಕ ಮಂಡನೆಯ ನಂತರ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗುತ್ತದೆ.