ಕುಡಿಯುವ ನೀರಿಗಾಗಿ 7-8 ಕಿಮೀ ಅಲೆದಾಟ

KannadaprabhaNewsNetwork |  
Published : Apr 13, 2026, 02:00 AM IST
ಕೆರೆಯಿಂದ ನೀರು ತರುತ್ತಿರುವ ಕವಲೂರು ಗ್ರಾಮಸ್ಥರು | Kannada Prabha

ಸಾರಾಂಶ

ಪಕ್ಕದಲ್ಲಿಯೇ ಕೂಗಳತೆ ದೂರದಲ್ಲಿ ತುಂಗಭದ್ರಾ ನದಿ ಇದೆ. ಅಷ್ಟೇ ಯಾಕೆ ಊರ ಪಕ್ಕದಲ್ಲಿಯೇ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಬಾಯಿ ತೆರೆದುಕೊಂಡು ಕಾಲುವೆಗಳು ಇವೆ

ಸೋಮರಡ್ಡಿ ಅಳವಂಡಿ ಕೊಪ್ಪಳ

ಬೈಕ್, ಇಲ್ಲವೇ ಸೈಕಲ್ ಹತ್ತಿಕೊಂಡು ನಾಲ್ಕಾರು ಕಿಮೀ ದೂರದಲ್ಲಿರುವ ಕೆರೆಯಲ್ಲಿ ತಳ ಸೇರಿರುವ ನೀರು ತರಲು ಹೋಗುವ ದೃಶ್ಯ ಇಲ್ಲಿ ಸರ್ವೇ ಸಾಮಾನ್ಯ. ಇಲ್ಲಿ ಕುಡಿಯುವ ನೀರು ತರುವುದೇ ಮನೆಯಲ್ಲೊಬ್ಬರದ್ದು ಕಾಯಕ.

ಇದು ಯಾವುದೋ ಹಳೆಯ ಸಿನಿಮಾದಲ್ಲಿರುವ ದೃಶ್ಯಾವಳಿಯಲ್ಲ. ಕೊಪ್ಪಳ ತಾಲೂಕಿನ ಕವಲೂರು, ಗುಡಿಗೇರಿ ಸೇರಿದಂತೆ ಕೆಲವೊಂದು ಗ್ರಾಮಗಳ ನಿತ್ಯದ ಗೋಳು.

ಹೌದು, ಪಕ್ಕದಲ್ಲಿಯೇ ಕೂಗಳತೆ ದೂರದಲ್ಲಿ ತುಂಗಭದ್ರಾ ನದಿ ಇದೆ. ಅಷ್ಟೇ ಯಾಕೆ ಊರ ಪಕ್ಕದಲ್ಲಿಯೇ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಬಾಯಿ ತೆರೆದುಕೊಂಡು ಕಾಲುವೆಗಳು ಇವೆ. ಮಳೆಗಾಲದಲ್ಲಿ ಬೇಡವೆಂದರೂ ನೀರು ಹರಿಯುತ್ತಲೇ ಇರುತ್ತದೆ. ಇವು ಅಕ್ಕಪಕ್ಕದ ಕೆರೆ ತುಂಬಿಸಿದರೂ ಕುಡಿಯುವ ನೀರಿನ ಗೋಳು ತಪ್ಪುತ್ತದೆ. ಆದರೆ, ರಾಜಕೀಯ ಇಚ್ಛಾಶಕ್ತಿಯ ಕೊರತೆ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೊಪ್ಪಳ ತಾಲೂಕಿನಲ್ಲಿ ಇಂದಿಗೂ ಕುಡಿಯುವ ನೀರಿನ ಗೋಳು ತಪ್ಪಿಲ್ಲ.

ಕೊಪ್ಪಳ ತಾಲೂಕಿನ ಕವಲೂರು ಗ್ರಾಮದ ಜನರು ಸುತ್ತಮುತ್ತಲು ಇರುವ ಕೆರೆಗೆ ಅಲೆದು ನೀರು ತರುತ್ತಾರೆ. ಅಷ್ಟಕ್ಕೂ ಇವರಿಗೆ ತುಂಗಭದ್ರಾ ನದಿಯಿಂದ ಬಹುಗ್ರಾಮ ಯೋಜನೆಯಲ್ಲಿ ನೀರು ಪೂರೈಕೆ ಇದೆಯಾದರೂ ಅವು ಗಬ್ಬುವಾಸನೆ ಇರುವುದರಿಂದ ನಾವು ಕೆರೆಯ ನೀರು ತರುತ್ತವೆ ಎನ್ನುತ್ತಾರೆ ಕವಲೂರು ಗ್ರಾಮಸ್ಥರು. ಶುದ್ಧ ನೀರು ಪೂರೈಕೆ ಮಾಡಿದರೆ ನಾವ್ಯಾಕೆ ಕೆರೆ ಸುತ್ತಿ ನೀರು ತರಬೇಕು ಎಂದು ಪ್ರಶ್ನೆ ಮಾಡುತ್ತಾರೆ.

ಆದರೆ, ಇನ್ನು ಗುಡಿಗೇರಿ ಗ್ರಾಮದ ಜನರ ಗೋಳು ಹೇಳತೀರದು. ಗುಡಿಗೇರಿ ಗ್ರಾಮಕ್ಕೆ ಜಲಜೀವನ ಮಿಶನ್‌ ಅಡಿ ನಲ್ಲಿ ಹಾಕಲಾಗಿದೆ, ಆದರೂ ನಲ್ಲಿಯಲ್ಲಿ ನೀರು ಬರುವುದೇ ಇಲ್ಲ. ಹೀಗಾಗಿ ಅವರು ಗ್ರಾಮದಿಂದ ಸುಮಾರು 7-8 ಕಿಮೀ ದೂರದಲ್ಲಿರುವ ಬನ್ನಿಕೊಪ್ಪದ ದಾರಿಯಲ್ಲಿರುವ ಖಾಸಗಿ ಕೆರೆಯಿಂದ, ಇಲ್ಲವೇ ದೂರದ ಯಕಸ್ಲಾಪುರ ಗ್ರಾಮದ ಬಳಿ ಇರುವ ಕೆರೆಯಿಂದಲೇ ನೀರು ತರಬೇಕು. ಏಪ್ರಿಲ್ ತಿಂಗಳಲ್ಲಿಯೇ ಹೀಗೆ ಪರಿಸ್ಥಿತಿ ಇದೆ. ಮೇ ತಿಂಗಳಲ್ಲಿ ಆ ಕೆರೆಗಳಲ್ಲಿನ ನೀರು ಇರುವುದಿಲ್ಲ. ಆಗ ನಮ್ಮನ್ನು ದೇವರೇ ಕಾಪಾಡಬೇಕು ಎನ್ನುತ್ತಾರೆ ಗುಡಿಗೇರಿ ಗ್ರಾಮಸ್ಥರು.

ಇದು, ಇದೊಂದೇ ಗ್ರಾಮದ ಗೋಳಲ್ಲ, ಅಳವಂಡಿ ಹೋಬಳಿ ವ್ಯಾಪ್ತಿಯ ಬಹುತೇಕ ಗ್ರಾಮಗಳ ಪರಿಸ್ಥಿತಿ ಹೀಗೆಯೇ ಇದೆ. ಇಲ್ಲಿ ತುಂಗಭದ್ರಾ ನೀರು ಪೂರೈಕೆ ಅಷ್ಟಕ್ಕಷ್ಟೇ ಇರುವುದರಿಂದ ಜನರು ಹಳ್ಳ, ಕೊಳ್ಳ ಸುತ್ತಾಡಿ ಇಲ್ಲವೇ ಕೆರೆ ಸುತ್ತಾಡಿ ನೀರು ತರಬೇಕಾದ ಹೀನಾಯ ಸ್ಥಿತಿ ಇದೆ ಎನ್ನುವುದು ದುರಂತವೇ ಸರಿ.

ಕೊಪ್ಪಳ ತಾಲೂಕಿನ ಬಿಸರಳ್ಳಿ ಗ್ರಾಮದಲ್ಲಿಯ ಜನರು ಚರಂಡಿಯಲ್ಲಿ ಕೊಡವಿಟ್ಟು ನೀರು ತುಂಬಿಕೊಳ್ಳಬೇಕಾದ ಸ್ಥಿತಿ ಇದೆ. ವಾರಕ್ಕೊಮ್ಮೆಯೂ ನೀರು ಸರಿಯಾಗಿ ಬರುವುದಿಲ್ಲ. ನಲ್ಲಿಯಲ್ಲಿ ಬರುವುದೇ ಇಲ್ಲವಾದ್ದರಿಂದ ಚರಂಡಿಯಲ್ಲಿ ಗುಂಡಿ ಮಾಡಿಕೊಂಡು ನೀರು ತರುವಂತಾಗಿದೆ. ಅಂತಹ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗಿದೆ. ಆಡಳಿತಕ್ಕೆ ಛೀಮಾರಿ ಹಾಕಿದರೂ ಆಡಳಿತ ಸುಧಾರಣೆಯಾಗಿ ನೀರು ಕೊಡುವ ಮನಸ್ಸು ಮಾಡದೆ ಇರುವುದು ಮಾತ್ರ ಸೋಜಿಗವೇ ಸರಿ.

ಜಿಲ್ಲೆಯಲ್ಲಿ ಏನೇನು ಸಮಸ್ಯೆ?: ಕೊಪ್ಪಳ ಜಿಲ್ಲೆಯಲ್ಲಿ 722 ವಸತಿ ಗ್ರಾಮಗಳು ಇದ್ದು, ಇದರಲ್ಲಿ 473 ಗ್ರಾಮಗಳಿಗೆ ಡಿಬಿಒಟಿ ಹಾಗೂ ಎಂವಿಎಸ್ ಯೋಜನೆಯಡಿ ನೀರು ಪೂರೈಕೆ ಮಾಡಲಾಗುತ್ತದೆ. ನೀರಿನ ಸಮಸ್ಯೆಯಾಗದಂತೆ ಮುನ್ನಚ್ಚರಿಕೆ ವಹಿಸಲಾಗಿದೆ. ಆದರೆ, ಬೇಸಿಗೆಯ ಹಿನ್ನೆಲೆಯಲ್ಲಿ 122 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಆತಂಕ ಇರವುದರಿಂದ ಇಲ್ಲಿ ಖಾಸಗಿ ಬೋರ್‌ವೆಲ್ ಮೂಲಕ ನೀರು ಪೂರೈಕೆಗೆ ಕ್ರಮವಹಿಸಲಾಗಿದೆ.

ಇದು, ಜಿಲ್ಲಾಡಳಿತ ಬೇಸಿಗೆಯ ಹಿನ್ನೆಲೆಯಲ್ಲಿ ಮಾಡಿರುವ ಅಂದಾಜು ಲೆಕ್ಕಾಚಾರ. ಆದರೆ, ವಾಸ್ತವವಾಗಿ ನೀರಿನ ಸಮಸ್ಯೆ ಘನಘೋರವಾಗಿದೆ. ಲೆಕ್ಕಾಚಾರಕ್ಕೂ ವಾಸ್ತವಕ್ಕೂ ಸಂಬಂಧವೇ ಇಲ್ಲ ಎನ್ನುವಂತೆ ಇದೆ.

ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಮೂಲ ಮತ್ತು ಪೂರೈಕೆ ಇದ್ದರೂ ಸಮರ್ಪಕ ಪೂರೈಕೆಯಾಗದೆ ಇರುವುದರಿಂದ ಜನರು ನೀರಿಗಾಗಿ ಪರಿತಪಿಸುತ್ತಿದ್ದಾರೆ. ಸುತ್ತಮುತ್ತಲೂ ಇರುವ ಕೆರೆ, ಇಲ್ಲವೇ ಖಾಸಗಿ ಪಂಪ್‌ಸೆಟ್‌ಗಳಿಗೆ ಸುತ್ತಾಡಿ ನೀರು ತರಬೇಕಾದ ಸ್ಥಿತಿ ಇರುವುದು ಮಾತ್ರ ಕಟುಸತ್ಯ.

ಕುಡಿಯುವ ನೀರಿನ ಸಮಸ್ಯೆ ಗುರುತಿಸಿ ಅದಕ್ಕೆ ಪರಿಹಾರ ಸೂಚಿಸಿ ಅಗತ್ಯ ಕ್ರಮವಹಿಸುವಂತೆ ಸೂಚಿಸಲಾಗಿದೆ. ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿನ ನೀರಿನ ಸಮಸ್ಯೆಯ ಮೇಲೆ ನಿಗಾ ಇರಿಸಲಾಗಿದೆ ಎಂದು ಕೊಪ್ಪಳ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ತಿಳಿಸಿದ್ದಾರೆ.

ಅಯ್ಯೋ ಸಾರ್, ನಮ್ಮೂರಲ್ಲಿ ನೀರೇ ಇಲ್ಲ. ಕೆರೆಯೂ ಬತ್ತಿ ಹೋಗಿದೆ. ಅಷ್ಟೇ ಯಾಕೆ ಜಲಜೀವನ್ ಯೋಜನೆಯಲ್ಲಿಯೂ ನೀರು ಬರುತ್ತಿಲ್ಲ. ಹೀಗಾಗಿ, 6-8 ಕಿಮೀ ಸುತ್ತಾಡಿ, ಕೆರೆಯ ನೀರು ತರಬೇಕು. ಇದು ನಿತ್ಯವೂ ತಪ್ಪದ ಗೋಳು ಎಂದು ಗುಡಿಗೇರಿ ಗ್ರಾಮಸ್ಥ ಅಕ್ಬರ್ ತಿಳಿಸಿದ್ದಾರೆ.

ನೀರಿನ ಸಮಸ್ಯೆ ಗಂಭೀರವಾಗಿದ್ದರೂ ಯಾರೂ ಸ್ಪಂದಿಸುತ್ತಲೇ ಇಲ್ಲ. ಜನರು ನೀರಿಗಾಗಿ ಕೆರೆ ಅಲೆಯಬೇಕಾಗಿದೆ. ನಿತ್ಯವೂ ಈ ರೀತಿ ಸುತ್ತಾಡಿಯೇ ನೀರು ತಂದರೆ ಮನೆಯಲ್ಲಿ ನೀರು ಇಲ್ಲದಿದ್ದರೆ ಅವರ ಪಾಡು ದೇವರಿಗೆ ಪ್ರೀತಿ ಎನ್ನುವಂತಿದೆ ಎಂದು ಗುಡಿಗೇರಿ ಗ್ರಾಮದ ಜಗದೀಶಗೌಡ ತೆಗ್ಗಿನಮನಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಕಿಯು ನಾಶ ಸೂಚಿಸಿದರೆ ಮಳೆಯು ಸೃಷ್ಟಿ ಸೂಚಿಸುತ್ತದೆ: ಡಾ. ಬಿ.ಎಂ. ಪುಟ್ಟಯ್ಯ
ಯೋಗ, ಪ್ರಾಣಾಯಾಮದಿಂದ ಮಾನಸಿಕ ಸದೃಢತೆ: ಎಸ್‌ಪಿ ಜಾಹ್ನವಿ