ಕೃತಿಯಲ್ಲಿರುವ ಹಾಡುಗಳು ಸಾಮಾಜಿಕ ವ್ಯವಸ್ಥೆಯ ಮೂಲಭೂತ ವೈರುಧ್ಯಗಳನ್ನು ಸ್ಪಷ್ಟವಾಗಿ ಹಿಡಿದಿಡುತ್ತವೆ.

ಹೊಸಪೇಟೆ: ಬೆಂಕಿಯ ಮಳೆ ಎಂಬ ಶೀರ್ಷಿಕೆಯನ್ನು ಡಾ.ಸಿದ್ದಲಿಂಗಯ್ಯ ಅವರ ಕಾವ್ಯದಿಂದ ಪಡೆದಿದ್ದು, ಬೆಂಕಿಯು ನಾಶವನ್ನು ಸೂಚಿಸಿದರೆ, ಮಳೆಯು ಸೃಷ್ಟಿಯನ್ನು ಸೂಚಿಸುತ್ತದೆ. ಈ ಎರಡರ ಸಂಯೋಜನೆಯ ಮೂಲಕ ಶೀರ್ಷಿಕೆ ಹೋರಾಟದ ಸ್ವಭಾವವನ್ನು ವ್ಯಕ್ತಪಡಿಸುತ್ತದೆ ಎಂದು ಕುಪ್ಪಳ್ಳಿಯ ಕನ್ನಡ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ಡಾ.ಬಿ.ಎಂ. ಪುಟ್ಟಯ್ಯ ವಿವರಿಸಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದಿಂದ ಅಲ್ಲಮ ಸಭಾಂಗಣದಲ್ಲಿ ನಮ್ಮ ಮಾತು 37 ಕಾರ್ಯಕ್ರಮದ ಅಂಗವಾಗಿ ‘ಬೆಂಕಿಯ ಮಳೆ’ ಸಮಗ್ರ ಹೋರಾಟದ ಹಾಡುಗಳು ಕೃತಿಯ ಕುರಿತು ಸಂವಾದದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕೃತಿಯಲ್ಲಿರುವ ಹಾಡುಗಳು ಸಾಮಾಜಿಕ ವ್ಯವಸ್ಥೆಯ ಮೂಲಭೂತ ವೈರುಧ್ಯಗಳನ್ನು ಸ್ಪಷ್ಟವಾಗಿ ಹಿಡಿದಿಡುತ್ತವೆ. ಈ ಹಾಡುಗಳನ್ನು ಕೇವಲ ಓದುವುದಲ್ಲದೆ ಹಾಡಬೇಕು, ಕೇಳಬೇಕು ಮತ್ತು ವೇದಿಕೆಯಲ್ಲಿ ಪ್ರದರ್ಶಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಇತ್ತೀಚೆಗೆ ಹೋರಾಟದ ಗೀತೆಗಳು ಸುಗಮ ಸಂಗೀತದ ರೂಪ ಪಡೆದುಕೊಳ್ಳುತ್ತಿರುವುದು ವಿಷಾದನೀಯ ಸಂಗತಿ ಎಂದು ಅವರು ಬೇಸರ ವ್ಯಕ್ತಪಡಿಸಿದರು. ಈ ಹಾಡುಗಳು ಕೇರಿಯಿಂದ ನಾಡಿನವರೆಗೆ, ಹಳ್ಳಿಯಿಂದ ರಾಷ್ಟ್ರಮಟ್ಟದವರೆಗೆ ವ್ಯಾಪಿಸಬೇಕಾಗಿದೆ ಎಂದು ಅವರು ಹೇಳಿದರು.

ಸಮಾಜವು ದೇವರಿಂದ ನಡೆಯುವುದಿಲ್ಲ; ಮನುಷ್ಯನ ಶ್ರಮ ಮತ್ತು ದುಡಿಮೆಯಿಂದಲೇ ಸಾಗುತ್ತದೆ. ದೇವಸ್ಥಾನಗಳನ್ನು ನಿರ್ಮಿಸಿದ ಕೈಗಳಿಗೆ ಪ್ರವೇಶವೇ ಇಲ್ಲದಿರುವುದು ನಮ್ಮ ದೇಶದ ದುರಂತ ಸ್ಥಿತಿಯಾಗಿದೆ. ಹೋರಾಟಗಳು ನಿಂತಿಲ್ಲ. ಹಾಗೆಯೇ ಹೋರಾಟದ ಹಾಡುಗಳ ರಚನೆಯೂ ನಿಂತಿಲ್ಲ ಎಂದು ಸ್ಪಷ್ಟಪಡಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಕೃತಿ ಚಿಂತಕ, ಕವಿ ಆರಿಫ್ ರಾಜಾ ಕೃತಿಯ ಕುರಿತು ಮಾತನಾಡಿ, ಬೆಂಕಿಯ ಮಳೆ ಕೃತಿಯಲ್ಲಿರುವ ಹಾಡುಗಳು ಕೇವಲ ಗೀತೆಗಳಲ್ಲ, ದಮನಿತ ವರ್ಗದ ಅಸ್ತಿತ್ವದ ಕೂಗು ಮತ್ತು ಬದುಕಿನ ಮಾರ್ಗವನ್ನು ಸೂಚಿಸುವ ಅಭಿವ್ಯಕ್ತಿಗಳಾಗಿವೆ ಎಂದು ಹೇಳಿದರು.

ಕವಿಗಿಂತ ಹಾಡುಗಾರ ಹೆಚ್ಚು ಪ್ರಾಮುಖ್ಯನಾಗುತ್ತಾನೆ. ಕೃತಿಯ ಸಂದೇಶವನ್ನು ಜನತೆಗೆ ತಲುಪಿಸುವ ಜವಾಬ್ದಾರಿ ಹಾಡುಗಾರನ ಮೇಲಿದೆ. ಅವಮಾನ, ಹಸಿವು, ಸಮಾನ ಸಮಾಜದ ಕನಸುಗಳ ಜೊತೆಗೆ, ಈ ಕಾವ್ಯದ ಭಾಷೆಯು ದಮನಕ್ಕೆ ಒಳಗಾದವರ ಬದುಕಿನ ನೈಜ ಅನುಭವಗಳನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.

ಹಂಪಿ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ವೆಂಕಟಗಿರಿ ದಳವಾಯಿ ಸಮಾಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಹೋರಾಟದ ಹಾಡುಗಳು ಹೊರಗಿನ ಜಗತ್ತಿನಿಂದ ಹುಟ್ಟಿದ್ದಕ್ಕಿಂತ ಒಳಗಿನ ನೋವು ಅಪಮಾನಗಳಿಂದ ಹುಟ್ಟಿದಂತವು. ಇನ್ನು ಹುಟ್ಟುತ್ತಲೇ ಇರುತ್ತವೆ. ಎಲ್ಲಿವರೆಗೂ ಸಮಾಜದಲ್ಲಿ ಈ ಅಸಮಾನತೆ ಇರುತ್ತದೋ ಅಲ್ಲಿವರೆಗೂ ಹೋರಾಟದ ಹಾಡುಗಳು ಮತ್ತೆ ಮತ್ತೆ ಅಸ್ತಿತ್ವ ಪಡೆಯುತ್ತಲೇ ಇರುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಸಂಚಾಲಕ ಸಂಶೋಧನಾರ್ಥಿ ಪ್ರವೀಣ ಕಿತ್ನೂರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಮಲಮ್ಮ ವಂದಿಸಿದರು. ರವೀಂದ್ರ ನಾಯಕ್ ನಿರೂಪಿಸಿದರು.