ನರೇಗಾ ಕೂಲಿಕಾರರ ಮಗ ಮಯೂರನಿಗೆ 7 ಚಿನ್ನದ ಪದಕ

KannadaprabhaNewsNetwork |  
Published : Sep 25, 2024, 12:50 AM IST
ಪದಕ ಪ್ರದಾನ  | Kannada Prabha

ಸಾರಾಂಶ

ಯಲ್ಲಾಪುರ ತಾಲೂಕಿನ ಕಿರವತ್ತಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊಸಳ್ಳಿ ಗ್ರಾಮದ ರಾಮಚಂದ್ರ ಮತ್ತು ಬಮ್ಮವ್ವ ಖಿಲಾರಿ ಕುಟುಂಬ ನರೇಗಾ ಕೂಲಿಯ ಹಣದಿಂದ ಪುತ್ರ ಮಯೂರ ಅವರನ್ನು ಓದಿಸಿದ್ದಾರೆ.

ಕಾರವಾರ: ನರೇಗಾ ಕೂಲಿಕಾರ ದಂಪತಿಯ ಪುತ್ರರೊಬ್ಬರು ಧಾರವಾಡದ ಕವಿವಿ ಎಂಎ ರಾಜ್ಯಶಾಸ್ತ್ರ ವಿಭಾಗದಲ್ಲಿ 7 ಚಿನ್ನದ ಪದಕ ಗಳಿಸಿ ಸಾಧನೆ ಮಾಡಿದ್ದಾರೆ.

ಸಮಾಜದ ಹಲವು ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭೆ ಬಡತನದ ಹೊಡೆತಕ್ಕೆಸಿಲುಕಿ ಕಮರಿದ ಉದಾಹರಣೆಗಳಿವೆ. ಇಂಥ ಪರಿಸ್ಥಿತಿಯಲ್ಲೂ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕಿರವತ್ತಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊಸಳ್ಳಿ ಗ್ರಾಮದ ರಾಮಚಂದ್ರ ಮತ್ತು ಬಮ್ಮವ್ವ ಖಿಲಾರಿ ಕುಟುಂಬ ನರೇಗಾ ಕೂಲಿಯ ಹಣದಿಂದ ಪುತ್ರ ಮಯೂರ ಅವರನ್ನು ಓದಿಸಿದ್ದು, ಊರಿಗೆ ಬಂದಾಗ ನರೇಗಾ ಕೆಲಸ ಮಾಡುತ್ತಿದ್ದ ಮಯೂರ ಧಾರವಾಡದ ಕವಿವಿಯ ಎಂಎ ರಾಜ್ಯಶಾಸ್ತ್ರ ವಿಭಾಗದಲ್ಲಿ 7 ಚಿನ್ನದ ಪದಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.

ಅತ್ಯಂತ ಹಿಂದುಳಿದ ಸಮುದಾಯಕ್ಕೆ ಸೇರಿದ ರಾಮಚಂದ್ರ ಖಿಲಾರಿ ಕುಟುಂಬ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಡೆಯುವ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಕೆಲಸದ ಮೇಲೆ ಅವಲಂಬಿತವಾಗಿದೆ. 2022ರಿಂದ 2024ರ ವರೆಗೆ ನಿರಂತರವಾಗಿ ಕೂಲಿ ಕೆಲಸ ನಿರ್ವಹಿಸುತ್ತಿದೆ. ಅಲ್ಲದೇ ನರೇಗಾ ಕೂಲಿ ಹಣದಲ್ಲಿಯೇ ಮಗ ಮಯೂರನ ವಿದ್ಯಾಭ್ಯಾಸದ ವೆಚ್ಚ, ಮನೆಯ ನಿರ್ವಹಣೆ ನಿಭಾಯಿಸಿಕೊಂಡು ಬರುತ್ತಿದೆ. ನರೇಗಾದಡಿ ಕಳೆದ 3 ವರ್ಷಗಳಲ್ಲಿ 196 ದಿನ ಕೂಲಿ ಕೆಲಸ ಮಾಡಿ ಒಟ್ಟೂ ₹62403 ಕೂಲಿ ಹಣವನ್ನು ಇವರ ಕುಟುಂಬದವರು ಪಡೆದಿದ್ದಾರೆ. ಏಳು ಪದಕ: ದಿ. ಪ್ರೊ. ಆರ್.ಟಿ. ಜಂಗಮ ಬಂಗಾರದ ಪದಕ, ದಿ. ಪ್ರೊ. ಎಚ್.ಎಸ್. ಹೊಸಮನಿ ಸ್ಮಾರಕ ಬಂಗಾರದ ಪದಕ, ಪ್ರೊ. ವಿ.ಟಿ. ಪಾಟೀಲ ಬಂಗಾರದ ಪದಕ, ಪ್ರೊ. ಎ.ಎಂ. ರಾಜಶೇಖರಯ್ಯ ಬಂಗಾರದ ಪದಕ, ಮಂಜಪ್ಪ ಸ್ಮಾರಕ ಗ್ರಂಥಮಾಲ ಬಂಗಾರದ ಪದಕ, ಪವಿತ್ರಾ ಮತ್ತು ಡಾ. ಎಚ್‌.ಎಂ. ವಿರುಪಾಕ್ಷಯ್ಯ ಬಂಗಾರದ ಪದಕ, ಕೆ‌ಎಸ್‌ಎಸ್‌ ಬಂಗಾರದ ಪದಕ ಸೇರಿದಂತೆ ಒಟ್ಟು ಏಳು ಚಿನ್ನದ ಪದಕ, ಪ್ರಶಸ್ತಿ ಪತ್ರವನ್ನು ಮಯೂರ ಖಿಲಾರಿ ಪಡೆದಿದ್ದಾರೆ.ಸಾಧನಗೆ ಖುಷಿ: ಕಡುಬಡತನದಲ್ಲಿಯೂ ಮಗನಿಗೆ ಧಾರವಾಡ ವಿಶ್ವವಿದ್ಯಾಲಯದಲ್ಲಿ ಓದಲು ಅನುಕೂಲ ಮಾಡಿಕೊಟ್ಟೆವು. ಮನೆಯ ಪರಿಸ್ಥಿತಿ ಅರಿತ ಮಗ ಕಾಲೇಜಿನ ರಜೆಯ ದಿನಗಳಲ್ಲಿ ಗ್ರಾಮಕ್ಕೆ ಬಂದಾಗ ಸ್ವತಃ ನರೇಗಾ ಕೂಲಿ ಕೆಲಸದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ. ಮಗನ ಸಾಧನೆ ತುಂಬ ಖುಷಿ ನೀಡಿದೆ ಎಂದು ಮಯೂರನ ತಂದೆ ರಾಮಚಂದ್ರ ಖಿಲಾರಿ ತಿಳಿಸಿದರು.ಓದಿಗೆ ಉತ್ತೇಜನ: ಮನೆಯಲ್ಲಿ ಬಡತನ ತಾಂಡವವಾಡುತ್ತಿದ್ದ ಕಾರಣಕ್ಕೆ ಮೊದಲಿಗೆ ಉನ್ನತ ಶಿಕ್ಷಣ ಪೂರೈಸುವ ಕುರಿತು ಆತಂಕ ಎದುರಾಗಿತ್ತು. ಆದರೆ ನರೇಗಾದಡಿ ಕೂಲಿ ಕೆಲಸ ಮಾಡಿ ನಿನ್ನ ಓದಿಸುತ್ತೇವೆ ಎಂಬ ಪೋಷಕರ ಬೆಂಬಲ ನನ್ನ ನೆಮ್ಮದಿಯ ಓದಿಗೆ ಉತ್ತೇಜನ ನೀಡಿತು ಎಂದು ಸ್ನಾತಕೋತ್ತರ ವಿದ್ಯಾರ್ಥಿ ಮಯೂರ ಖಿಲಾರಿ ತಿಳಿಸಿದರು.

PREV

Recommended Stories

ಟಿಕೆಟ್ ಆಯ್ತು, ಮಲ್ಟಿಪ್ಲೆಕ್ಸ್‌ಗಳಲ್ಲಿ ತಿಂಡಿ ದರ ಇಳಿಸಿ : ಸಿನಿ ಪ್ರಿಯರು
ಮಂಗಳಮುಖಿಯರು, ಮಹಿಳೆಯರಿಗೆ ಸರ್ಕಾರದಿಂದಲೇ ಉಚಿತ ಆಟೋ