ಅಥಣಿಯಲ್ಲಿ 7 ಸಾವಿರ ಮೈನಸ್‌ ಆಗಿದ್ದು ನೋವಾಗಿದೆ

KannadaprabhaNewsNetwork | Published : Jun 8, 2024 12:32 AM

ಸಾರಾಂಶ

ಅಥಣಿ ಮತಕ್ಷೇತ್ರದಲ್ಲಿ ನಮಗೆ 10 ಸಾವಿರ ಲೀಡ್‌ ಸಿಕ್ಕರೂ ಸಂತೋಷ ಇತ್ತು. ಆದರೆ 7 ಸಾವಿರ ಮೈನಸ್‌ ಆಗಿದ್ದರಿಂದ ನೋವಾಗಿದೆ. ಅನವಶ್ಯಕವಾಗಿ ನಾವು ಯಾರನ್ನು ಟಾರ್ಗೆಟ್ ಮಾಡಿಲ್ಲ. ಅಥಣಿ, ಕುಡಚಿ ಮತಕ್ಷೇತ್ರದಲ್ಲಿ ಏಕೆ ಸಮಸ್ಯೆಯಾಗಿದೆ ಎಂಬುವುದನ್ನು ಸ್ವತಃ ಕಣ್ಣಾರೇ ಕಂಡಿದ್ದೇನೆ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಅಥಣಿ ಮತಕ್ಷೇತ್ರದಲ್ಲಿ ನಮಗೆ 10 ಸಾವಿರ ಲೀಡ್‌ ಸಿಕ್ಕರೂ ಸಂತೋಷ ಇತ್ತು. ಆದರೆ 7 ಸಾವಿರ ಮೈನಸ್‌ ಆಗಿದ್ದರಿಂದ ನೋವಾಗಿದೆ. ಅನವಶ್ಯಕವಾಗಿ ನಾವು ಯಾರನ್ನು ಟಾರ್ಗೆಟ್ ಮಾಡಿಲ್ಲ. ಅಥಣಿ, ಕುಡಚಿ ಮತಕ್ಷೇತ್ರದಲ್ಲಿ ಏಕೆ ಸಮಸ್ಯೆಯಾಗಿದೆ ಎಂಬುವುದನ್ನು ಸ್ವತಃ ಕಣ್ಣಾರೇ ಕಂಡಿದ್ದೇನೆ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು.

ನಗರದ ಕಾಂಗ್ರೆಸ್‌ ಭವನದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಇನ್ನೆರಡು ದಿನ ಇರುವಾಗ ಸ್ವತಃ ಕುಡಚಿಯಲ್ಲಿ ನಾನೇ ಠಿಕಾಣಿ ಹುಡಿದರೂ ಶಾಸಕ ಮಹೇಂದ್ರ ತಮ್ಮಣ್ಣವರ ನನ್ನ ಕೈಗೆ ಸಿಕ್ಕಿಲ್ಲ. ಇನ್ನು ವಿಧಾನಸಭೆ ಚುನಾವಣೆ ವೇಳೆ ಅಥಣಿಯಲ್ಲಿ 77 ಸಾವಿರ ಲೀಡ್‌ ಸಿಕ್ಕಿತ್ತು. ಆದರೆ ಲೋಕಸಭೆ ಚುನಾವಣೆಯಲ್ಲಿ 7 ಸಾವಿರ ಮೈನಸ್‌ ಆಗಿದೆ. ಕನಿಷ್ಠ 10 ಸಾವಿರ ಲೀಡ್‌ ಸಿಕ್ಕರೂ ಸಂತೋಷ ಇತ್ತು. ಮೈನಸ್‌ ಆಗಿದ್ದರಿಂದ ನಾನು ಕಾರ್ಯಕರ್ತರಿಗೆ ಅಲ್ಲಿ ನಡೆದ ಬೆಳವಣಿಗೆಗಳನ್ನು ತಿಳಿಸಿದ್ದೇನೆ ಎಂದರು.

ಇನ್ನು ಶಾಸಕರಾದ ಲಕ್ಷ್ಮಣ ಸವದಿ, ಮಹೇಂದ್ರ ತಮ್ಮಣ್ಣವರ್‌ ಅಥಣಿಯಲ್ಲಿ ಸೇರಿದ್ದ ಬಗ್ಗೆ ಮಾತನಾಡಿದ ಅವರು, ಜನ, ಕಾರ್ಯಕರ್ತರು, ಪಕ್ಷ ನಮ್ಮ ಪರ ಇದೆ. ನಮ್ಮನ್ನು ವಿರೋಧಿಸಲು ಅವರು ಯಾರು ಎಂದು ಪ್ರಶ್ನಿಸಿದರು. ತಾವು ಏನು ಮಾಡಿದ್ದಾರೆ ಎಂದು ಮನವರಿಕೆ ಮಾಡಿಕೊಳ್ಳಬೇಕು. ಶಾಸಕರ ಬಗ್ಗೆ ದೂರು ನೀಡಲ್ಲ. ದೂರು ನೀಡಿದರೂ ನಮ್ಮಲ್ಲಿ ಇನ್ನುವರೆಗೆ ಯಾರ ಮೇಲೆಯೂ ಕ್ರಮವಾಗಿಲ್ಲ. ಇವರು ಮಾಡಿದ್ದರ ಬಗ್ಗೆ ಜನತೆಗೆ ತಿಳಿಸುತ್ತೇನೆ ಎಂದು ತಿಳಿಸಿದರು.ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಎಲ್ಲಾ ಕಾಂಗ್ರೆಸ್‌ ಶಾಸಕರು ಲೀಡ್‌ ಕೊಟ್ಟಿದ್ದಾರೆ. ಅಥಣಿಯಲ್ಲಿ ಶಾಸಕ ಸವದಿ ಅವರು ಲೀಡ್‌ ಕೊಟ್ಟಿದ್ದರೆ, ಅವರ ನಮ್ಮ ಬಾಂಧವ್ಯ ಚೆನ್ನಾಗಿ ಉಳಿಯುತ್ತಿತ್ತು. ಆದರೆ ಈಗ ನಮ್ಮಿಂದ ಅಂತರ ಕಾಯ್ದುಕೊಂಡಿದ್ದಾರೆ. ಚುನಾವಣೆಗಿಂತ ಮುಂಚೆ ಪ್ರಿಯಾಂಕಾಗೆ ಲೀಡ್‌ ಕೊಡುತ್ತೇನೆ ಎಂದು ಅವರೇ ಸ್ವತಃ ಹೇಳಿದ್ದರು. ಆದರೆ 7 ಸಾವಿರ ಮೈನಸ್‌ ಆಗಿದ್ದರಿಂದ ಅಥಣಿ ಜನತೆ ಅವರನ್ನೇ ಪ್ರಶ್ನಿಸುತ್ತಿದ್ದಾರೆ. ಜನಕ್ಕೆ ಅವರೇ ಉತ್ತರ ನೀಡಬೇಕೆಂದು ಆಗ್ರಹಿಸಿದರು.ಲೋಕಸಭೆ ಚುನಾವಣೆಯಲ್ಲಿ ಗ್ಯಾರಂಟಿಗಳು ಪರಿಣಾಮ ಬೀರಿದೆ. ಕಳೆದ ಬಾರಿ ಚುನಾವಣೆಗೆ ಹೋಲಿಸಿದರೆ ಬಿಜೆಪಿ ಅಭ್ಯರ್ಥಿಗಳ ಗೆಲುವಿನ ಅಂತರ ಕಡಿಮೆಯಾಗಿದೆ. ಹೀಗಾಗಿ ಚುನಾವಣೆಯಲ್ಲಿ ಗ್ಯಾರಂಟಿಗಳ ಪರಿಣಾಮ ಬೀರಿದೆ. ಗ್ಯಾರಂಟಿಗಳು ಮುಂದುವರಿಯುವ ಅವಶ್ಯಕತೆ ಇದೆ ಎಂದು ಪ್ರತಿಪಾದಿಸಿದರು.ಭವಿಷ್ಯ ಕೇಳಿ ನಾಮಪತ್ರ ಸಲ್ಲಿಸಿದವರಿಗೆ ಸೋಲು:ಪರಿಶ್ರಮ ಇದ್ದಾಗ ಮಾತ್ರ ಗೆಲವು ಸಾಧ್ಯ. ಅಭ್ಯರ್ಥಿ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿದ್ದಾಗ ಹಾಗೂ ಜನರ ಜೊತೆ ಉತ್ತಮ ಒಡನಾಟ ಹೊಂದಿದಾಗ ಮಾತ್ರ ಜನರ ಮನಸಿನಲ್ಲಿ ಉಳಿಯಲು ಸಾಧ್ಯ. ಅದನ್ನು ಬಿಟ್ಟು ಭವಿಷ್ಯ ಕೇಳಿ ನಾಮಪತ್ರ ಸಲ್ಲಿಸಿ ನಾವು ಗೆಲ್ಲುತ್ತೇವೆ ಎಂದು ಹಗಲು ಕನಸು ಕಂಡ ಅಭ್ಯರ್ಥಿಗಳಿಗೆ ಸೋಲಾಗಿದೆ ಎಂದು ವ್ಯಂಗ್ಯವಾಡಿದರು.ಬೆಳಗಾವಿ ವಿಭಜಿಸಿ ಚಿಕ್ಕೋಡಿ, ಗೋಕಾಕ ಕೇಂದ್ರವಾಗಿ ಇನ್ನೆರಡು ಹೊಸ ಜಿಲ್ಲೆಗಳಾಗಬೇಕು. ಬೆಳಗಾವಿ ಜಿಲ್ಲೆ ಪ್ರಾದೇಶಿಕವಾಗಿ ಬಹಳ ದೊಡ್ಡದಿದೆ. ಆಡಳಿತದ ದೃಷ್ಟಿಯಿಂದ ಇದು ಸರಿಯಲ್ಲ. ಜಿಲ್ಲೆ ವಿಭಜನೆ ಆಗಬೇಕು ಎಂದು ನಾನು ಹಿಂದೆಯೂ ಹೇಳಿದ್ದೆ. ಈಗಲೂ ಅಷ್ಟೇ. ಆಡಳಿತ ಸುಗಮವಾಗಲು ಗೋಕಾಕ- ಚಿಕ್ಕೋಡಿಯನ್ನು ಜಿಲ್ಲೆಯನ್ನಾಗಿ ಮಾಡಬೇಕಿದೆ ಎಂದರು.ಬೆಳಗಾವಿ ಜಿಲ್ಲೆಯನ್ನು ಗೋಕಾಕ, ಚಿಕ್ಕೋಡಿ ಹಾಗೂ ಬೆಳಗಾವಿ ಎಂಬ ಮೂರು ಜಿಲ್ಲೆಗಳನ್ನಾಗಿ ಮಾಡಲು ಒತ್ತಡ ಮೊದಲಿನಿಂದಲೇ ಇದ್ದೇ ಇದೆ. ಬೆಳಗಾವಿಯು ರಾಜ್ಯದ ಅತೀ ದೊಡ್ಡ ಜಿಲ್ಲೆಯಾಗಿದೆ. ಉಡುಪಿಯಂತ ಜಿಲ್ಲೆಯಲ್ಲಿ 9 ಲಕ್ಷ ಜನರಿದ್ದಾರೆ. ಆದರೆ ಬೆಳಗಾವಿ ತಾಲೂಕಿನಲ್ಲೇ 9 ಲಕ್ಷ ಜನ ಇದ್ದಾರೆ. ಆದ್ದರಿಂದ 18 ವಿಧಾನಸಭಾ ಕ್ಷೇತ್ರಗಳ ಭಾಗವನ್ನು ವ್ಯಾಪಿಸಿರುವ ಕರ್ನಾಟಕದ ಅತಿದೊಡ್ಡ ಜಿಲ್ಲೆಯಾದ ಬೆಳಗಾವಿಯನ್ನು ಮೂರು ಭಾಗಗಳಾಗಿ ವಿಭಜಿಸುವ ಬಗ್ಗೆ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.ಬೆಳಗಾವಿಯ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಅವರ ಸೋಲಿನ ಕುರಿತು ಪ್ರತಿಕ್ರಿಯಿಸಿ, ಹೆಬ್ಬಾಳ್ಕರ್ ಅವರ ಸೋಲಿಗೆ ಯಾರೂ ಜವಾಬ್ದಾರರಲ್ಲ. ಅವರು ತಮ್ಮ ಜವಾಬ್ದಾರಿಯನ್ನು ತಾವೇ ಹೊರಬೇಕು ಎಂದರು.ಈ ಸಂದರ್ಭದಲ್ಲಿ ಬೆಳಗಾವಿ ಗ್ರಾಮೀಣ ಜಿಲ್ಲಾ ಅಧ್ಯಕ್ಷ ವಿನಯ ನಾವಲಗಟ್ಟಿ, ಕಾಂಗ್ರೆಸ್‌ ಮುಖಂಡ ಸೈಯದ್‌ ಮನಸೂರ ಮತ್ತಿತರರು ಉಪಸ್ಥಿತರಿದ್ದರು.

Share this article