ಈಡಿಗ, ಬಿಲ್ಲವ ಸಮಾಜದ ಅಭಿವೃದ್ಧಿಗಾಗಿ ಜ. 6ರಿಂದ 700 ಕಿಮೀ ಪಾದಯಾತ್ರೆ: ಪ್ರಣವಾನಂದ ಶ್ರೀ

KannadaprabhaNewsNetwork |  
Published : Nov 11, 2025, 02:45 AM IST
ಪೋಟೊ10ಕೆಎಸಟಿ1: ಕುಷ್ಟಗಿ ಪಟ್ಟಣದಲ್ಲಿ ಈಡಿಗ ಸಮಾಜದ ಗುರುಗಳಾದ ಡಾ.ಪ್ರಣವಾನಂದ ಶ್ರೀಗಳು ಸುದ್ದಿಗಾರರೊಂದಿಗೆ ಮಾತನಾಡಿದರು. | Kannada Prabha

ಸಾರಾಂಶ

ಈಡಿಗ ಬಿಲ್ಲವ ಸಮಾಜ ಸೇರಿದಂತೆ 26 ಪಂಗಡಗಳನ್ನು ಹೊಂದಿದ ಸಮಾಜದ ಬೇಡಿಕೆ ಈಡೇರಿಕೆಗಾಗಿ 2026 ಜನವರಿ 6ರಿಂದ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿಪೀಠ ಕರದಾಳದಿಂದ ಬೆಂಗಳೂರು ವರೆಗೆ 41 ದಿನಗಳ ಕಾಲ 700 ಕಿಲೋಮೀಟರ್‌ ಪಾದಯಾತ್ರೆ ಮಾಡಲಾಗುತ್ತಿದೆ ಎಂದು ಡಾ. ಪ್ರಣವಾನಂದ ಶ್ರೀಗಳು ಹೇಳಿದರು.

ಕುಷ್ಟಗಿ: ಈಡಿಗ ಬಿಲ್ಲವ ಸಮಾಜ ಸೇರಿದಂತೆ 26 ಪಂಗಡಗಳನ್ನು ಹೊಂದಿದ ಸಮಾಜದ ಬೇಡಿಕೆ ಈಡೇರಿಕೆಗಾಗಿ 2026 ಜನವರಿ 6ರಿಂದ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿಪೀಠ ಕರದಾಳದಿಂದ ಬೆಂಗಳೂರು ವರೆಗೆ 41 ದಿನಗಳ ಕಾಲ 700 ಕಿಲೋಮೀಟರ್‌ ಪಾದಯಾತ್ರೆ ಮಾಡಲಾಗುತ್ತಿದೆ ಎಂದು ಡಾ. ಪ್ರಣವಾನಂದ ಶ್ರೀಗಳು ಹೇಳಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಡಿಗ, ಬಿಲ್ಲವ ಸೇರಿದಂತೆ 26 ಪಂಗಡಗಳನ್ನು ಹೊಂದಿದ ಸಮಾಜದ ಅಭಿವೃದ್ಧಿಗೆ ಸರ್ಕಾರ ಮುಂದಾಗದ ಹಿನ್ನೆಲೆಯಲ್ಲಿ ಈ ಐತಿಹಾಸಿಕ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.

ಹೋರಾಟದ ಪ್ರಮುಖ ಬೇಡಿಕೆಗಳಾದ ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮಕ್ಕೆ ಕೂಡಲೇ ₹500 ಕೋಟಿ ಬಿಡುಗಡೆ ಮಾಡಬೇಕು. ಕುಲಕಸುಬು ಕಳೆದುಕೊಂಡ ಸಂತ್ರಸ್ತ ಈಡಿಗರಿಗೆ 5 ಎಕರೆ ಜಮೀನು ಪ್ರತಿ ಕುಟುಂಬಕ್ಕೆ ಮಂಜೂರು ಮಾಡುವುದು, ಸಮಾಜವನ್ನು ಎಸ್ಟಿ ಮೀಸಲಾತಿಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಬ್ರಹ್ಮಶ್ರೀ ನಾರಾಯಣ ಗುರುಗಳ ಪುತ್ಥಳಿಯನ್ನು ವಿಧಾನಸೌಧದ ಮುಂದೆ ಸ್ಥಾಪಿಸಬೇಕು.

ಸಿಗಂಧೂರು ಚೌಡೇಶ್ವರಿ ದೇವಸ್ಥಾನದ ವಿರುದ್ಧ ಹೂಡಿದ ಮೊಕದ್ದಮೆಗಳನ್ನು ಹಿಂತೆಗೆದುಕೊಂಡು ಸೂಕ್ತ ಭದ್ರತೆ ನೀಡಿ ಅಗತ್ಯ ಭೂಮಿ ಮಂಜೂರು ಮಾಡಬೇಕು. ಮದ್ಯ ಮಾರಾಟದಲ್ಲಿ ಶೇ. 50 ಮೀಸಲಾತಿ ನೀಡಬೇಕು. ಕೋಟಿಚೆನ್ನಯ್ಯ ಅಭಿವೃದ್ಧಿ ಪ್ರಾಧಿಕಾರಕ್ಕೆ ಪ್ರತಿ ಬಜೆಟ್‌ನಲ್ಲಿ ₹100 ಕೋಟಿ ಮಂಜೂರು ಮಾಡಬೇಕು. ವಿಶ್ವವಿದ್ಯಾಲಯದಲ್ಲಿ ನಾರಾಯಣ ಗುರುಗಳ ಅಧ್ಯಯನ ಪೀಠ ಸ್ಥಾಪಿಸಬೇಕು. ವಿಶ್ವವಿದ್ಯಾಲಯಕ್ಕೆ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರು ಘೋಷಣೆ ಮಾಡುವುದು. ಶರಣ ಹೆಂಡದ ಮಾರಯ್ಯನವರ ಜಯಂತಿ ಘೋಷಣೆ ಮಾಡಬೇಕು. ಶಿವಮೊಗ್ಗ ಜಿಲ್ಲೆಯ ಮುಳುಗಡೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ಕೊಡಬೇಕು.

ಸಮುದಾಯದ ಸಾಧಕರಿಗೆ ಬ್ರಹ್ಮಶ್ರೀ ನಾರಾಯಣ ಗುರು ರಾಜ್ಯ ಮಟ್ಟದ ಪ್ರಶಸ್ತಿಯನ್ನು ₹5 ಲಕ್ಷ ನಗದು ಪುರಸ್ಕಾರದೊಂದಿಗೆ ನೀಡಬೇಕು. ಉತ್ತರ ಕನ್ನಡ ಜಿಲ್ಲೆಯಲ್ಲಿ ಅರಣ್ಯ ಪ್ರದೇಶದಲ್ಲಿ ಉಳುಮೆ ಮಾಡಿಕೊಂಡು ಮನೆ ಕಟ್ಟಿಕೊಂಡವರಿಗೆ ಜಮೀನು ಸಕ್ರಮಗೊಳಿಸಬೇಕು. ಶಿವಮೊಗ್ಗ ಜಿಲ್ಲೆಯ ಹೊಸನಗರ ಕ್ಷೇತ್ರವನ್ನು ಮರಳಿ ವಿಧಾನಸಭೆ ಕ್ಷೇತ್ರವಾಗಿ ಮಾಡುವುದಕ್ಕೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಆಶ್ರಯ ಮತ್ತು ವಸತಿ ಯೋಜನೆಯಲ್ಲಿ ಸಮಾಜಕ್ಕೆ ಪ್ರತ್ಯೇಕವಾಗಿ 25 ಸಾವಿರ ಮನೆ ಮಂಜೂರು ಮಾಡಬೇಕು. ರಾಜ್ಯದ ಎಲ್ಲ ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿಯೂ ಬ್ರಹ್ಮಶ್ರೀ ನಾರಾಯಣ ಗುರುಭವನ ನಿರ್ಮಿಸುವುದಕ್ಕೆ ಭೂಮಿ ಮಂಜೂರು ಮಾಡಬೇಕು. ಮಂಗಳೂರು ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯ್ಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಘೋಷಣೆ ಮಾಡಬೇಕು. ಸಮುದಾಯದ ಟ್ರಸ್ಟ್‌ವೊಂದಕ್ಕೆ ಮೆಡಿಕಲ್ ಕಾಲೇಜು ಮಂಜೂರಾತಿ ಮಾಡಬೇಕು. ಪ್ರತಿ ಜಿಲ್ಲೆಯಲ್ಲಿ ಐಎಎಸ್, ಐಪಿಎಸ್ ತರಬೇತಿ ಕೇಂದ್ರಗಳನ್ನು ತೆರೆಯಬೇಕು ಸೇರಿದಂತೆ ಅನೇಕ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ರಾಜ್ಯದ ಎಲ್ಲ ತಾಲೂಕಿನ ಜನರು ಭಾಗವಹಿಸಬೇಕು ಎಂದರು.

ರಾಷ್ಟ್ರೀಯ ಈಡಿಗ ಮಹಾಮಂಡಳಿಯ ತಾಲೂಕಾಧ್ಯಕ್ಷ ರವಿಕುಮಾರ್ ಈಡಿಗ, ಈಡಿಗ ಸಂಘದ ಅಧ್ಯಕ್ಷ ಉಮಾಕಾಂತಗೌಡ, ಅಶೋಕ ವಣಿಗೇರಿ, ಬಸವರಾಜ ಭಾಗ್ಯದ, ಮಂಜುನಾಥ, ಬಸವರಾಜ ನಾರಿನಾಳ ಇದ್ದರು.

PREV

Recommended Stories

ಗೋವಿನಜೋಳ ಖರೀದಿ ಕೇಂದ್ರ ಆರಂಭಿಸಲು ಆಗ್ರಹಿಸಿ ಸರ್ಕಾರಕ್ಕೆ ಮನವಿ
ಪ್ರೇರಣಾ ಸಂಸ್ಥೆ ಜನಸಾಮಾನ್ಯರಿಗೆ ಮರಣಶಾಸನ: ಸುರೇಶ ಭೂಮರಡ್ಡಿ