ಸೋಮರಡ್ಡಿ ಅಳವಂಡಿ
ಈಗಾಗಲೇ ಇರುವ ಶಾಲೆಗಳನ್ನೇ ಗುರುತಿಸಿ, ಅಲ್ಲಿ ಸಕಲ ಸೌಕರ್ಯಗಳೊಂದಿಗೆ ಈಗಿರುವ ಕನ್ನಡ ಮಾಧ್ಯಮ ಶಾಲೆಯ ಜತೆಗೆ ಎಲ್‌ಕೆಜಿಯಿಂದ 12ನೇ ತರಗತಿ ವರೆಗೂ ಆಂಗ್ಲಮಾಧ್ಯಮ ಶಾಲೆ ಪ್ರಾರಂಭಿಸಲಾಗುತ್ತದೆ. ಅದರ ಜತೆಯಲ್ಲಿಯೇ ಅದರ ಸುತ್ತಮುತ್ತಲ ಶಾಲೆಗಳನ್ನೂ ಅಭಿವೃದ್ಧಿಪಡಿಸಲು ಮುಂದಾಗಿದೆ.
ಹೌದು, ಕಳೆದ ವರ್ಷ ಬಜೆಟ್‌ನಲ್ಲಿ ರಾಜ್ಯ ಸರ್ಕಾರ 500 ಕೆಪಿಎಸ್ ಶಾಲೆ ಘೋಷಣೆ ಮಾಡಿತ್ತು. ಈಗ ಅದರ ಜತೆಗೆ ಕೆಕೆಆರ್‌ಡಿಬಿ ಅನುದಾನದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳಲ್ಲಿ 200 ಕೆಪಿಎಸ್ ಶಾಲೆಯನ್ನು ಹೆಚ್ಚುವರಿಯಾಗಿ ಆರಂಭಿಸಲಾಗುತ್ತದೆ.ನಾಲ್ಕು ಕೋಟಿ ರು. ಅನುದಾನ: ಈಗಾಗಲೇ ಏಷ್ಯನ್ ಅಭಿವೃದ್ಧಿ ಬ್ಯಾಂಕಿನಿಂದ ₹500 ಕೋಟಿ ನೆರವಿನ ಜತೆಗೆ ರಾಜ್ಯ ಸರ್ಕಾರದ ಅನುದಾನದಿಂದ ಈ ಶಾಲೆಗಳು ತೆರೆಯಲಿವೆ. ಇದಕ್ಕೆ ಹೆಚ್ಚುವರಿಯಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ 200 ಕೆಪಿಎಸ್ ಶಾಲೆಗಳನ್ನು ತೆರೆಯಲು ಕೆಕೆಆರ್‌ಡಿಬಿ ಅನುದಾನದಲ್ಲಿ ಪ್ರಸಕ್ತ ವರ್ಷ ₹200 ಕೋಟಿ ಹಾಗೂ ರಾಜ್ಯ ಸರ್ಕಾರದ ಅನುದಾನ ₹200 ಬಳಕೆ ಮಾಡಲಾಗುತ್ತದೆ. ಪ್ರತಿ ಶಾಲೆಗೆ ₹4 ನಾಲ್ಕು ಕೋಟಿ ನೀಡಲಾಗುತ್ತದೆ. ಕೊಠಡಿಗಳ ನಿರ್ಮಾಣ, ಗ್ರಂಥಾಲಯ, ಪ್ರಯೋಗಾಲಯವನ್ನೊಳಗೊಂಡು ಸುಸಜ್ಜಿತಗೊಳಿಸಲಾಗುತ್ತದೆ.
ಶಾಲೆಯಿಂದ ಹೊರಗೆ ಉಳಿಯವ ಮಕ್ಕಳ ಸಂಖ್ಯೆ ಕನ್ನಡ ಮಾಧ್ಯಮ ಶಾಲೆಗಳಲ್ಲಿಯೇ ಅಧಿಕವಾಗಿರುವುದರಿಂದ ಅದನ್ನು ಗಮನದಲ್ಲಿಟ್ಟುಕೊಂಡು ಆಂಗ್ಲಮಾಧ್ಯಮ ಶಾಲೆ ಪ್ರಾರಂಭಿಸಲಾಗುತ್ತಿರುವುದು ಗಮನಾರ್ಹ ಸಂಗತಿ.
ರಾಜ್ಯ ಸರ್ಕಾರ ಕೆಪಿಎಸ್ ಶಾಲೆಗಳನ್ನು ಪ್ರಾರಂಭಿಸುವ ಮೂಲಕ ಸಕಲ ಸೌಕರ್ಯಗಳನ್ನು ನೀಡಲು ಮುಂದಾಗಿದೆ. ಅದರಲ್ಲೂ ಎಲ್‌ಕೆಜಿಯಿಂದ 12ನೇ ತರಗತಿ ವರೆಗೂ ಒಂದೇ ಕ್ಯಾಂಪಸ್‌ನಲ್ಲಿ ಇರುವುದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.