ಗದಗ: ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ದುಷ್ಕರ್ಮಿಗಳು ಕರುವಿನ ಶಿರಚ್ಛೇದ ಮಾಡಿದ ದೇಹವನ್ನು ಬಿಸಾಡಿ ಹೋಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಎಪಿಎಂಸಿ ಜಾನುವಾರು ಮಾರುಕಟ್ಟೆ ಬಳಿಯೇ ಈ ಕೃತ್ಯ ನಡೆದಿರುವುದು ಸಾರ್ವಜನಿಕರಲ್ಲಿ ಎರಡು ಬಗೆಯ ಚರ್ಚೆಗೆ ಕಾರಣವಾಗಿದೆ. ಅನಾಮಿಕ ದುಷ್ಕರ್ಮಿಗಳು ಉದ್ದೇಶಪೂರ್ವಕವಾಗಿ ಕರುವಿನ ತಲೆ ಕತ್ತರಿಸಿ ಗೋಹತ್ಯೆ ಮಾಡಿ, ದೇಹವನ್ನು ಇಲ್ಲಿ ಬಿಸಾಡಿ ಹೋಗಿರುವ ಸಾಧ್ಯತೆ ಇದೆ. ಕರುವಿನ ತಲೆಯನ್ನು ಚೀಲದಲ್ಲಿ ತುಂಬಿಕೊಂಡು ತಂದು ಬಿಸಾಡಿರುವ ಶಂಕೆ ವ್ಯಕ್ತವಾಗಿದೆ.
ಚಿರತೆಯ ಕೃತ್ಯ?: ಮತ್ತೊಂದು ವಾದದ ಪ್ರಕಾರ, ಇತ್ತೀಚೆಗೆ ಅವಳಿ ನಗರದ ಸುತ್ತಮುತ್ತ ಕಾಣಿಸಿಕೊಂಡಿದ್ದ ಚಿರತೆಯೇ ಈ ಕೃತ್ಯ ಎಸಗಿದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಚಿರತೆಯು ಕೊಂದ ನಂತರ ದೇಹವನ್ನು ಎಳೆದು ತಂದಿರಬಹುದು ಎಂದು ಊಹಿಸಲಾಗಿದೆ. ಈ ಎರಡೂ ಸಾಧ್ಯತೆಗಳಿಂದಾಗಿ ಅವಳಿ ನಗರದ ಜನರಲ್ಲಿ ತೀವ್ರ ಗೊಂದಲ ಉಂಟಾಗಿದ್ದು, ಪೊಲೀಸರು ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.ಒತ್ತಾಯ: ಕರುವಿನ ದೇಹ ಪತ್ತೆಯಾದ ಕೂಡಲೇ ಸುದ್ದಿ ತಿಳಿದ ಹಿಂದೂ ಸಂಘಟನೆಗಳ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇದು ಗೋಹತ್ಯೆ ನಿಷೇಧ ಕಾಯ್ದೆಯ ಸ್ಪಷ್ಟ ಉಲ್ಲಂಘನೆ. ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ದುರುದ್ದೇಶದಿಂದಲೇ ಈ ಕೃತ್ಯ ಎಸಗಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಗೋವು ಹತ್ಯೆ ಮಾಡಿದ ದುಷ್ಟರಿಗೆ ತಕ್ಷಣವೇ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.