ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅರಣ್ಯವಾಸಿಗಳು ಸಲ್ಲಿಸಿದ ಭೂಮಿ ಹಕ್ಕಿನ ಒಟ್ಟು 88 ಸಾವಿರ ಅರ್ಜಿಗಳಲ್ಲಿ ಬರೋಬ್ಬರಿ 73 ಸಾವಿರ ಅರ್ಜಿಗಳು ತಿರಸ್ಕೃತಗೊಂಡಿವೆ. ಇದರಿಂದಾಗಿ ಜಿಲ್ಲೆಯ ಶೇ. 82ರಷ್ಟು ಅರಣ್ಯವಾಸಿ ಕುಟುಂಬಗಳು ತೀವ್ರ ಆತಂಕದಲ್ಲಿವೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಕಳವಳ ವ್ಯಕ್ತಪಡಿಸಿದರು.
ಹಿಂದೆ ಇದೇ ಕಾನೂನಿನ ಅಡಿಯಲ್ಲಿ ಗದಗದಲ್ಲಿ ಸಚಿವ ಎಚ್.ಕೆ. ಪಾಟೀಲ್ ಹಾಗೂ ಉತ್ತರ ಕನ್ನಡದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ಅವರು ಪಾರಂಪರಿಕ ಹಕ್ಕುಪತ್ರಗಳನ್ನು ವಿತರಿಸಿದ್ದರು. ಅಂದು ಅನ್ವಯವಾದ ಮಾನದಂಡಗಳು ಇಂದು ಏಕೆ ಅನ್ವಯವಾಗುತ್ತಿಲ್ಲ? ಕಾನೂನಿನ ವಿಧಿವಿಧಾನಗಳನ್ನು ಗಾಳಿಗೆ ತೂರಿ, ಅವೈಜ್ಞಾನಿಕವಾಗಿ ಅರ್ಜಿಗಳನ್ನು ತಿರಸ್ಕರಿಸಲಾಗುತ್ತಿದೆ ಎಂದು ರವೀಂದ್ರ ನಾಯ್ಕ ಆರೋಪಿಸಿದರು.
ಅರ್ಜಿಗಳ ಪುನರ್‌ಪರಿಶೀಲನೆ ನಡೆಯುವ ವರೆಗೂ ಯಾರನ್ನೂ ಒಕ್ಕಲೆಬ್ಬಿಸಬಾರದು ಎಂಬ ನಿಯಮವಿದ್ದರೂ, ವಾಸ್ತವದಲ್ಲಿ ಚಿತ್ರಣ ಬೇರೆಯೇ ಇದೆ. ಸುಪ್ರೀಂ ಕೋರ್ಟ್ ಆದೇಶದನ್ವಯ ಅನಧಿಕೃತ ಒತ್ತುವರಿ ತೆರವುಗೊಳಿಸಲು ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ವಿಶೇಷ ತನಿಖಾ ತಂಡವನ್ನು ಈಗಾಗಲೇ ರಚಿಸಲಾಗಿದೆ. ಇದರ ಜತೆಗೆ, 1998ರಲ್ಲಿ ಅರಣ್ಯ ಅತಿಕ್ರಮಣದಾರರ ಮೇಲೆ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣಗಳನ್ನು 27 ವರ್ಷಗಳ ಬಳಿಕ ಮತ್ತೆ ಮುನ್ನೆಲೆಗೆ ತಂದು, ಒಕ್ಕಲೆಬ್ಬಿಸುವ ಪ್ರಕ್ರಿಯೆ ನಡೆಸುತ್ತಿರುವುದು ಖಂಡನೀಯ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.ಜಿಲ್ಲೆಯ ಸುಮಾರು 4.5 ರಿಂದ 5 ಲಕ್ಷ ಅರಣ್ಯವಾಸಿಗಳು ಈ ಸಮಸ್ಯೆಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಈ ಬಗ್ಗೆ ಗಂಭೀರ ಚರ್ಚೆ ನಡೆಸಿ, ಸ್ಪಷ್ಟ ನಿರ್ಣಯ ಕೈಗೊಳ್ಳಬೇಕು. 1978ರ ಪೂರ್ವದ ಅತಿಕ್ರಮಣದಾರರ ಹಾಗೂ ಹಂಗಾಮಿ ಪಟ್ಟಗಳ ಸಕ್ರಮಕ್ಕೆ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.
ಈ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯಲು ಇದೇ ತಿಂಗಳ 6ರಂದು ಬೃಹತ್ ಅರಣ್ಯವಾಸಿಗಳ `ಕಾರವಾರ ಚಲೋ'''' ಜಾಥಾವನ್ನು ಹಮ್ಮಿಕೊಳ್ಳಲಾಗಿದೆ. ನೀರಿನಲ್ಲಿದ್ದರೂ ನೀರು ಕುಡಿಯಲಾಗದಂತಹ ಸ್ಥಿತಿಯಲ್ಲಿರುವ ಅರಣ್ಯವಾಸಿಗಳಿಗೆ ನ್ಯಾಯ ಒದಗಿಸಲು ಎಲ್ಲರೂ ಸಹಕರಿಸಬೇಕು ಎಂದು ರವೀಂದ್ರ ನಾಯ್ಕ ಮನವಿ ಮಾಡಿದರು.ವೇದಿಕೆಯ ಕುಮಟಾ ಅಧ್ಯಕ್ಷ ಮಂಜು ಮರಾಠಿ, ಅಂಕೋಲಾ ರಮಾನಂದ ನಾಯ್ಕ ಅಚವೆ, ಜಿಲ್ಲಾ ಸಂಚಾಲಕ ರಾಜೇಶ ನಾಯ್ಕ, ಸಂಚಾಲಕ ಅರವಿಂದ ಗೌಡ, ಅಮೋಸ್, ಯೋಗೇಂದ್ರ ಗೌಡ ಇದ್ದರು.