ದೊಂಡೋಲೆ ಮನೆಯಲ್ಲಿ 74ನೇ ವರ್ಷದ ಶ್ರೀ ಗಣೇಶೋತ್ಸವ

KannadaprabhaNewsNetwork | Published : Sep 9, 2024 1:36 AM

ಸಾರಾಂಶ

ಸೆ. 7ರಂದು ಬೆಳಗ್ಗೆ ಗಣಪತಿ ಹವನ, ಶ್ರೀ ಗಣಪತಿ ಮೂರ್ತಿ ಪ್ರತಿಷ್ಠೆ, ಮದ್ಯಾಹ್ನ ಮಹಾಪೂಜೆ, ರಾತ್ರಿ ಮನೆಯವರಿಂದ ಭಜನಾ ಕಾರ್ಯಕ್ರಮ, ಯಕ್ಷಗಾನ ತಾಳಮದ್ದಳೆ , ಕಲಾವಿದರ ಸನ್ಮಾನ ಹಾಗು ಸೆ 8 ರಂದು ಬೆಳಗ್ಗೆ ಗಣೇಶ ಮೂರ್ತಿ ವಿಸರ್ಜನಾ ಕಾರ್ಯಕ್ರಮಗಳೊಂದಿಗೆ ಸಂಭ್ರಮದಿಂದ ಸಂಪನ್ನಗೊಂಡಿದೆ.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಧರ್ಮಸ್ಥಳ ಗ್ರಾಮದ ದೊಂಡೋಲೆ ಮನೆಯಲ್ಲಿ ಸೂರ್ಯನಾರಾಯಣ ರಾವ್ ಅವರು ಪ್ರಾರಂಭಿಸಿಕೊಂಡು ಬಂದ 74ನೇ ವರ್ಷದ ಶ್ರೀ ಗಣೇಶೋತ್ಸವವು ಸೆ. 7ರಂದು ಬೆಳಗ್ಗೆ ಗಣಪತಿ ಹವನ, ಶ್ರೀ ಗಣಪತಿ ಮೂರ್ತಿ ಪ್ರತಿಷ್ಠೆ, ಮದ್ಯಾಹ್ನ ಮಹಾಪೂಜೆ, ರಾತ್ರಿ ಮನೆಯವರಿಂದ ಭಜನಾ ಕಾರ್ಯಕ್ರಮ, ಯಕ್ಷಗಾನ ತಾಳಮದ್ದಳೆ , ಕಲಾವಿದರ ಸನ್ಮಾನ ಹಾಗು ಸೆ 8 ರಂದು ಬೆಳಗ್ಗೆ ಗಣೇಶ ಮೂರ್ತಿ ವಿಸರ್ಜನಾ ಕಾರ್ಯಕ್ರಮಗಳೊಂದಿಗೆ ಸಂಭ್ರಮದಿಂದ ಸಂಪನ್ನಗೊಂಡಿದೆ.

ಸಂಜೆ ಕಮಲಾ ಸೂರ್ಯನಾರಾಯಣ ರಾವ್ ಚಾರಿಟೇಬಲ್ ಟ್ರಸ್ಟ್ ನ ಚತುರ್ಥ ವರ್ಷದ ಸನ್ಮಾನ ಸಮಾರಂಭದಲ್ಲಿ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯರು ಹಿರಿಯ ಯಕ್ಷಗಾನ ಕಲಾವಿದರನ್ನು ಸನ್ಮಾನಿಸಿ ಗೌರವಿಸಿ ಮಾತನಾಡಿ ಯಕ್ಷಗಾನ ಸಂಸ್ಕೃತಿಯನ್ನು ಹುಟ್ಟುಹಾಕಿದ ಕಲೆ. ಯಾವುದೇ ದೇವತಾ ಕಾರ್ಯ ಯಕ್ಷಗಾನವಿಲ್ಲದಿದ್ದರೆ ಅದು ಅಪೂರ್ಣ. ದೊಂಡೋಲೆ ಮನೆಯ ಸಾಂಗತ್ಯ, ಕುಟುಂಬದ ಎಲ್ಲರೂ ಸೇರಿ ದೇವತಾ ಕಾರ್ಯದಲ್ಲಿ ಭಾಗವಹಿಸುವುದು, ಅವರ ಆತ್ಮೀಯತೆ ಎಲ್ಲರಿಗೂ ಮಾದರಿಯಾಗುವಂತಿದೆ. ಯಕ್ಷಗಾನ ಕಲೆಗೆ ಸರ್ವಸ್ವವನ್ನು ಮುಡಿಪಾಗಿರಿಸಿ, ಸಮರ್ಪಿಸಿಕೊಂಡ ಹಿರಿಯ ಯಕ್ಷಗಾನ ಕಲಾವಿದರನ್ನು ಸನ್ಮಾನಿಸಿ ಗೌರವಿ ಸುತ್ತಿರುವುದು ಔಚಿತ್ಯಪೂರ್ಣ ಎಂದು ನುಡಿದು ಶುಭ ಹಾರೈಸಿದರು.

ಯಕ್ಷಗಾನ ಕಲಾವಿದರ ಸನ್ಮಾನ :

ಇದೇ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ಹಿಮ್ಮೇಳ ಕಲಾವಿದ ರಾದ ಎಂ.ಜಿ.ಶ್ರೀಧರ ರಾವ್ ಮುಂಡ್ರು ಪ್ಪಾಡಿ ಮತ್ತು ಲೀಲಾ ರುಕ್ಮಿಣಿ ದಂಪತಿ ಹಾಗೂ ಯಕ್ಷಗಾನ ಅರ್ಥಧಾರಿ, ವಾಸ್ತುತಜ್ಞ ಬೆಳಾಲು ರಾಜಾರಾಮ ಶರ್ಮ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸುರೇಶ ಕುದ್ರೆನ್ತಯ ಮತ್ತು ಜನಾರ್ದನ ತೋಳ್ಪಡಿತ್ತಾಯ ಸನ್ಮಾನಿತರನ್ನು ಅಭಿನಂದಿಸಿದರು.

ರಂಜನ್ ವಿವೇಕ್ ಮತ್ತು ದಿವ್ಯ ಪುರಂದರ ರಾವ್ ಸನ್ಮಾನ ಪತ್ರ ವಾಚಿಸಿದರು. ಶರತ್ ಕೃಷ್ಣ ಪಡುವೆಟ್ನಾಯ ಅವರನ್ನು ಗೌರವಿಸಲಾಯಿತು. ಸಮ್ಮಾನಿತ ಎಂ.ಜಿ.ಶ್ರೀಧರ ರಾವ್ ತಮ್ಮ ಅನುಭವ, ಅನಿಸಿಕೆ ವ್ಯಕ್ತಪಡಿಸಿದರು. ಬೆಳಾಲು ರಾಜಾರಾಮ ಶರ್ಮ ಅವರು ಓದುವ ಅಭ್ಯಾಸ, ಪುಸ್ತಕ ಪ್ರೀತಿ, ಜ್ಞಾನ ತೃಷೆ, ಎಲ್ಲವನ್ನು ಓದಿ ಸಂಗ್ರಹಿಸುವ ಮನೋಧರ್ಮ ಬೆಳೆಯಿತು. ನಾವು ಏನೇ ಮಾಡಿದರೂ ಅದು ಸಮಾಜಕ್ಕೆ ಬಾಧೆಯಾಗಬಾರದು. ಸಮಾಜಮುಖಿಯಾಗಿ ಬದುಕುವಾಗ ಸಮಾಜಕ್ಕೆ ಹೊರೆಯಾಗಬಾರದು ಎಂಬ ಪ್ರಜ್ಞೆ ಇರಬೇಕು. ಯಕ್ಷಗಾನದಲ್ಲಿ ಸಮಾಜದಿಂದ ಪಡೆದುದನ್ನು ಸಮಾಜಕ್ಕೆ ಕೊಟ್ಟಿದ್ದೇನೆ ಎಂಬ ತೃಪ್ತಿಯಿದೆ. ಈಗ ಯಕ್ಷಗಾನದಲ್ಲಿ ಪೌರಾಣಿಕ ಹಿನ್ನೆಲೆಯ ವಿರುದ್ಧವಾಗಿ ಮಾತನಾಡುವುದು ಜಾಸ್ತಿಯಾಗಿದೆ ಎಂದು ಖೇದ ವ್ಯಕ್ತಪಡಿಸಿದರು.

ಕಮಲಾ ಸೂರ್ಯನಾರಾಯಣ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಪುರಂದರ ರಾವ್ ಸ್ವಾಗತಿಸಿ, ಪ್ರಸ್ತಾವಿಸಿದರು. ರವೀಂದ್ರ ರಾವ್, ಸೀತಾರಾಮ ತೋಳ್ಪಡಿತ್ತಾಯ, ವೆಂಕಟ್ರಮಣ ರಾವ್ ಬನ್ನೆಂಗಳ ಮೊದಲಾದವರು ಉಪಸ್ಥಿತರಿದ್ದರು.

ಅಭಯ ಕಾರಂತ್ ಪ್ರಾರ್ಥಿಸಿದರು. ಶಂಕರ ರಾಮ ರಾವ್, ಸೂ ರ್ಯನಾರಾಯಣ ರಾವ್, ನಾಗೇಶ್ ಪಿ.ರಾವ್, ಅಜಯ ರಾವ್, ಅಶೋಕ ರಾವ್, ಅರವಿಂದ ರಾವ್, ರಾಜಾರಾಮ ಕಾರಂತ ಮತ್ತು ಮನೆಯವರು ಸಹಕರಿಸಿದರು. ನಿಶಾಂತ ಹೊಳ್ಳ ಮತ್ತು ದಾಮೋದರ ದೊಂಡೋಲೆ ನಿರೂಪಿಸಿದ ಕಾರ್ಯಕ್ರಮದಲ್ಲಿ ಸಂದೇಶ ರಾವ್ ವಂದಿಸಿದರು.

ರಾತ್ರಿ ಜಿಲ್ಲೆಯ ಖ್ಯಾತ ಯಕ್ಷಗಾನ ಕಲಾವಿದರಿಂದ ಭಕ್ತ ಮಯೂರಧ್ವಜ ಪೌರಾಣಿಕ ಪ್ರಸಂಗದ ಯಕ್ಷಗಾನ ತಾಳಮದ್ದಳೆ ನಡೆಯಿತು.

ಧರ್ಮಸ್ಥಳ ಸನಿಹದ ದೊಂಡೋಲೆ ಮನೆಯ 74 ನೇ ವರ್ಷದ ಗಜಾನನ

Share this article