ದೊಡ್ಡಬಳ್ಳಾಪುರ: ಬೆಂಗಳೂರಿನ ವೃಷಭಾವತಿ ವ್ಯಾಲಿಯಿಂದ ಶುದ್ಧೀಕರಿಸಿದ ಕೊಳಚೆ ನೀರನ್ನು ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹೋಬಳಿಯ ಕೆರೆಗಳಿಗೆ ಹರಿಸುವ ಯೋಜನೆಯನ್ನು ರಾಜ್ಯ ಸರ್ಕಾರ ತಕ್ಷಣವೇ ರದ್ದುಪಡಿಸಬೇಕು ಎಂದು ನವ ಕರ್ನಾಟಕ ಯುವಶಕ್ತಿ ವೇದಿಕೆ ಅಧ್ಯಕ್ಷ ಹಳ್ಳಿರೈತ ಅಂಬರೀಶ್ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತೂಬಗೆರೆ ಹೋಬಳಿಯ ಜನರಿಗೆ ಎತ್ತಿನಹೊಳೆ ಯೋಜನೆಯ ನೀರು ಬೇಕಾಗಿದೆ. ವೃಷಭಾವತಿ ಕೊಳಚೆ ನೀರು ಅಗತ್ಯವಿಲ್ಲ. ವೃಷಭಾವತಿ ನೀರನ್ನು ನೀಡುವಂತೆ ಸ್ಥಳೀಯರು ಯಾರೂ ಕೇಳಿಕೊಂಡಿಲ್ಲ. ಇಂತಹ ಕೊಳಚೆ ನೀರನ್ನು ಹರಿಸಿದರೆ ಮುಂದಿನ ದಿನಗಳಲ್ಲಿ ಎರಡು ನಗರಗಳ ಕುಡಿಯುವ ನೀರಿನ ಸಮಸ್ಯೆಗೆ ದೊಡ್ಡ ಹೊಡೆತ ಬೀಳುವ ಸಾಧ್ಯತೆ ಇದೆ. ಆದ್ದರಿಂದ ದೊಡ್ಡಬಳ್ಳಾಪುರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ ಜನರ ಬೆಂಬಲ ಪಡೆದು ರಾಜ್ಯಮಟ್ಟದಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.ವೇದಿಕೆ ಕಾರ್ಯದರ್ಶಿ ಉದಯ ಆರಾಧ್ಯ ಮಾತನಾಡಿ, ರಾಜ್ಯ ಸರ್ಕಾರ 2026–27ರ ಬಜೆಟ್‌ನಲ್ಲಿ ಘೋಷಿಸಿರುವ ಯೋಜನೆಯಂತೆ ಬೆಂಗಳೂರಿನ ವೃಷಭಾವತಿ ವ್ಯಾಲಿಯಿಂದ ಎರಡು ಹಂತದಲ್ಲಿ ಶುದ್ಧೀಕರಿಸಿದ 308 ಎಂಎಲ್‌ಡಿ ನೀರಿನಿಂದ 259 ಕೆರೆಗಳನ್ನು ತುಂಬಿಸುವ ಮೂಲ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಅದರ ಭಾಗವಾಗಿ ಗೋಪಾಲಪುರ ಕೆರೆಯಿಂದ ನೆಲಮಂಗಲ ಮತ್ತು ದೊಡ್ಡಬಳ್ಳಾಪುರ ತಾಲೂಕಿನ 119 ಕೆರೆಗಳಿಗೆ ನೀರು ಹರಿಸಲು ₹650 ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ. ತೂಬಗೆರೆ ಹೋಬಳಿಯ ಕಾರ್ನಾಳ, ಲಕ್ಷ್ಮೀದೇವಿಪುರ, ತಿರುಮಗೊಂಡನಹಳ್ಳಿ, ಕುರುವಿಗೆರೆ, ತೂಬಗೆರೆ, ಗೂಳ್ಯ ನಂದಿಗುಂದ, ಮೆಳೇಕೋಟೆ, ಗಂಟಿಗಾನಹಳ್ಳಿ, ಕಂಚಿಗಾನಳ, ತಪಸೀಹಳ್ಳಿ ಕೆರೆಗಳು ಸೇರಿ ಒಟ್ಟು 19 ಕೆರೆಗಳಿಗೆ ವೃಷಭಾವತಿ ವ್ಯಾಲಿಯಿಂದ ನೀರು ಹರಿಸುವ ಪ್ರಸ್ತಾವನೆ ರೂಪಿಸಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ ಎಂದು ಹೇಳಿದರು.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೆ.ಸಿ.ವ್ಯಾಲಿ ಹಾಗೂ ಎಚ್.ಎನ್ ವ್ಯಾಲಿ ಯೋಜನೆಗಳ ಮೂಲಕ ಹರಿಯುತ್ತಿರುವ ಕೊಳಚೆ ನೀರಿನ ಪರಿಣಾಮ ಸ್ಥಳೀಯರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅಂತರ್ಜಲದ ಗುಣಮಟ್ಟ ಹದಗೆಟ್ಟಿದ್ದು, ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ. ಈ ನೀರನ್ನು ಬಳಸಿಕೊಂಡು ಕೃಷಿ ಮಾಡುತ್ತಿರುವ ರೈತರಿಗೆ ಸಮಸ್ಯೆಗಳು ಎದುರಾಗುತ್ತಿದ್ದು, ಆ ನೆಲದಲ್ಲಿ ಬೆಳೆಯುವ ಬೆಳೆಗಳ ಗುಣಮಟ್ಟದ ಬಗ್ಗೆ ಜನರಲ್ಲಿ ಆತಂಕ ಹೆಚ್ಚಾಗಿದೆ. ಕುಡಿಯುವ ನೀರು ಮತ್ತು ಆಹಾರ ಕಲುಷಿತವಾಗುವ ಅಪಾಯವೂ ಎದುರಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.ಪತ್ರಿಕಾಗೋಷ್ಠಿಯಲ್ಲಿ ವೇದಿಕೆ ಪದಾಧಿಕಾರಿಗಳು ಹಾಗೂ ಮುಖಂಡರಾದ ಹರೀಶ್ ಮತ್ತಿತರರು ಉಪಸ್ಥಿತರಿದ್ದರು.
15ಕೆಡಿಬಿಪಿ1-
ದೊಡ್ಡಬಳ್ಳಾಪುರದಲ್ಲಿ ನವ ಕರ್ನಾಟಕ ಯುವಶಕ್ತಿ ವೇದಿಕೆ ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.