ಕನಕಪುರ: ದೇಶದ ರಾಜಧಾನಿ ದೆಹಲಿಯಲ್ಲಿ ಶುದ್ಧ ಗಾಳಿಯಿಲ್ಲದೆ ಜನ ಕೃತಕ ಆಮ್ಲಜನಕ ತೆಗೆದುಕೊಳ್ಳುವ ಪರಿಸ್ಥಿತಿ ಬಂದಿದ್ದು ನಾವು ನಿರ್ಲಕ್ಷಿಸಿದರೆ ಮುಂದೆ ಬೆಂಗಳೂರಿನಲ್ಲಿಯೂ ಅಂತಹ ಪರಿಸ್ಥಿತಿ ಎದುರಾಗಬಹುದು ಎಂದು ವಿಧಾನ ಪರಿಷತ್ ಸದಸ್ಯ ಎಸ್.ರವಿ ಆತಂಕ ವ್ಯಕ್ತಪಡಿಸಿದರು. ನಗರದಲ್ಲಿ ಮಳಗಾಳು ಪರಿಸರ ಪ್ರೇಮಿಗಳ ಸಂಘ ಏರ್ಪಡಿಸಿದ್ದ ಮಹಿಳಾ ದಿನಾಚರಣೆ ಹಾಗೂ ಗಿಡಗಳ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಹಾನಗರ ಬೆಂಗಳೂರು ಬೃಹತ್ ಕೈಗಾರಿಕೆಗಳಿಂದ ಕೂಡಿರುವ ಕಾಂಕ್ರೀಟ್ ಕಾಡಾಗಿದ್ದು, ಗಗನ ಚುಂಬಿ ಕಟ್ಟಡಗಳಿಂದ ತುಂಬಿ ಹೋಗಿದೆ. ಮರಗಿಡಗಳು ನಾಶವಾಗಿ ಕಾರ್ಖಾನೆಗಳ ಮಾಲಿನ್ಯದಿಂದ ಗಾಳಿ ಕಲುಷಿತವಾಗುತ್ತಿದೆ. ಪರಿಸರ ಮತ್ತು ವಾಯು ಮಾಲಿನ್ಯ ತಡೆಗಟ್ಟಲು ಹೆಚ್ಚು ಮರಗಳನ್ನು ಬೆಳೆಸಬೇಕಿದೆ. ಮಳೆಗಾಳು ಪರಿಸರ ಪ್ರೇಮಿಗಳ ಸಂಘದಿಂದ ಗಿಡಗಳ ವಿತರಣೆ ಹಾಗೂ ಮಹಿಳಾ ದಿನಾಚರಣೆಯನ್ನು ಮಾಡುತ್ತಿರುವುದು ಉತ್ತಮ ಬೆಳವಣಿಗೆ. ಪ್ರತಿಯೊಬ್ಬರು ಕನಿಷ್ಠ ಒಂದು ಗಿಡವನ್ನಾದರೂ ಬೆಳೆಸಿ ಪರಿಸರ ಸಂರಕ್ಷಣೆಗೆ ತಮ್ಮ ಕಾಣಿಕೆ ಕೊಡಬೇಕು ಎಂದು ಹೇಳಿದರು.

ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ಇಂದು ಎಲ್ಲಾ ಕ್ಷೇತ್ರದಲ್ಲೂ ತಮ್ಮ ಚಾಪು ಮೂಡಿಸಿದ್ದಾರೆ. ಬಾಹ್ಯಾಕಾಶದ ಸುನಿತಾ ವಿಲಿಯಂ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸೇರಿದಂತೆ ಎಲ್ಲಾ ಪ್ರಮುಖ ಕ್ಷೇತ್ರಗಳಲ್ಲಿ, ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಯಾವುದು ಅಸಾಧ್ಯವಲ್ಲ ಮನಸ್ಸಿದ್ದರೆ ಎಲ್ಲವನ್ನು ಸಾಧಿಸಬಹುದೆಂದು ಮಹಿಳೆಯರಿಗೆ ಮತ್ತು ಶಾಲಾ ವಿದ್ಯಾರ್ಥಿಗಳಿಗೆ ತಿಳಿಸಿದರು.

ಆರ್‌ಇಎಸ್ ಅಧ್ಯಕ್ಷ ಎಚ್.ಕೆ.ಶ್ರೀಕಂಠ ಮಾತನಾಡಿ, ಅಭಿವೃದ್ಧಿ ಎಂಬುದೇ ಪರಿಸರಕ್ಕೆ ಮಾರಕ. 40 ಲಕ್ಷವಿದ್ದ ಬೆಂಗಳೂರು ಜನಸಂಖ್ಯೆ ಒಂದೂವರೆ ಕೋಟಿಯಷ್ಟು ಆಗಿದೆ. ಬೆಂಗಳೂರಿಗೆ ಶುದ್ಧ ಕುಡಿಯುವ ನೀರನ್ನ ನಾವು ಕಳಿಸಿದರೆ ಅಲ್ಲಿಂದ ಕಲುಷಿತ ಕೊಳಚೆ ನೀರು ವಾಪಸ್ ಬರುತ್ತಿದೆ. ಅರ್ಕಾವತಿ ನದಿಯಲ್ಲಿ ಕಾಲಿಡದಷ್ಟು ಗಲೀಜು ನೀರು ಬರುತ್ತಿದೆ. ಇದೆಲ್ಲವನ್ನು ನಾವೇ ಮಾಡುತ್ತಿರುವ ಸ್ವಯಂಕೃತ ಅನಾಹುತಗಳು. ಆ ನಿಟ್ಟಿನಲ್ಲಿ ಜವಾಬ್ದಾರಿಯಿಂದ ಪರಿಸರ ಉಳಿಸುವ ಹಾಗೂ ಮರ ಗಿಡಗಳನ್ನು ಬೆಳೆಸುವ ಕೆಲಸ ಮಾಡಬೇಕಿದೆ. ಅತಿಯಾದ ಪರಿಸರ ಮಾಲಿನ್ಯದಿಂದ ಓಝೋನ್ ಪದರ ಹಾಳಾಗುತ್ತಿದೆ. ಅತಿಯಾದ ಪ್ಲಾಸ್ಟಿಕ್ ಬಳಕೆ, ಕಾರ್ಖಾನೆಗಳ ವಿಷಾನಿಲ, ಮರ ಗಿಡಗಳ ನಾಶ ಪ್ರಪಂಚದ ವಿನಾಶಕ್ಕೆ ಕಾರಣವಾಗುತ್ತಿದೆ. ಈಗಲಾದರೂ ನಾವೆಲ್ಲ ಎಚ್ಚೆತ್ತುಕೊಳ್ಳಬೇಕಿದೆ. ಸಮಾಜದಲ್ಲಿ ಮಹಿಳೆಯರಿಗೆ ಸಮಾನತೆ ದೊರೆತಿದ್ದು ಹೆಣ್ಣು ಮಕ್ಕಳಿಗೆ ಉತ್ತಮ ಭವಿಷ್ಯವಿದೆ. ನಾವು ಕಾಣುವ ಕನಸು ನಮ್ಮ ಗುರಿಯನ್ನು ತಲುಪಿಸುತ್ತದೆ. ಆ ದಾರಿಯಲ್ಲಿ ಹೆಣ್ಣುಮಕ್ಕಳು ಸಾಗಬೇಕು,ಉತ್ತಮ ಭವಿಷ್ಯವನ್ನರೂಪಿಸಿ ಕೊಳ್ಳಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮಹಿಳಾ ದಿನಾಚರಣೆ ಪ್ರಯುಕ್ತ ಸಬ್ ಇನ್ಸ್‌ಪೆಕ್ಟರ್ ರತ್ನಮ್ಮ, ಹಿರಿಯ ಪಶು ವೈದ್ಯಾಧಿಕಾರಿ ಡಾ.ಶ್ವೇತಾ.ಎಸ್, ಪ್ರಾಣಿ ದಯಾ ಸಂಘದ ಕಾರ್ಯದರ್ಶಿ ನಿಧಿ.ಎಸ್, ಯೋಗ ತರಬೇತುದಾರರಾದ ಚಂದ್ರಿಕಾಮೂರ್ತಿ ಅವರನ್ನು ಗೌರವಿಸಲಾಯಿತು. ಮಳಗಾಳು ವಿಶ್ವ ಪರಿಸರ ಪ್ರೇಮಿ ಸಂಘದ ಅಧ್ಯಕ್ಷ ಮರಸಪ್ಪ ರವಿ 200ಕ್ಕೂ ಹೆಚ್ಚು ಗಿಡಗಳನ್ನು ವಿತರಿಸಿದರು.

ಕೆ ಕೆ ಪಿ ಸುದ್ದಿ 02:


ಕನಕಪುರದ ರೂರಲ್ ಶಿಕ್ಷಣ ಸಂಸ್ಥೆಯಲ್ಲಿ ಪರಿಸರ ಪ್ರೇಮಿಗಳ ಸಂಘದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಆಚರಿಸಲಾಯಿತು.