ಎಸ್ಪಿ ಹೆಸರಲ್ಲಿ ನೌಕರನಿಗೆ 75 ಸಾವಿರ ವಂಚನೆ

KannadaprabhaNewsNetwork | Published : Nov 17, 2023 6:45 PM

ಸಾರಾಂಶ

ರಾಮನಗರ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಅವರ ಹೆಸರಿನಲ್ಲಿ ಫೇಸ್‌ಬುಕ್ ನಕಲಿ ಖಾತೆ ಸೃಷ್ಟಿಸಿರುವ ಆನ್‌ಲೈನ್ ವಂಚಕರು ‘ಡಿ’ ಗ್ರೂಪ್ ನೌಕರರೊಬ್ಬರಿಗೆ 75 ಸಾವಿರ ರುಪಾಯಿ ವಂಚಿಸಿರುವ ಘಟನೆ ನಡೆದಿದೆ.

ರಾಮನಗರ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಅವರ ಹೆಸರಿನಲ್ಲಿ ಫೇಸ್‌ಬುಕ್ ನಕಲಿ ಖಾತೆ ಸೃಷ್ಟಿಸಿರುವ ಆನ್‌ಲೈನ್ ವಂಚಕರು ‘ಡಿ’ ಗ್ರೂಪ್ ನೌಕರರೊಬ್ಬರಿಗೆ 75 ಸಾವಿರ ರುಪಾಯಿ ವಂಚಿಸಿರುವ ಘಟನೆ ನಡೆದಿದೆ.

ಜಿಲ್ಲಾ ಪಂಚಾಯಿತಿಯಲ್ಲಿ ಕೆಲಸ ಮಾಡುವ ಡಿ ಗ್ರೂಪ್ ನೌಕರ ಅನಿಲ್ ವಂಚನೆಗೊಳಗಾದವರು. ಕಾರ್ತಿಕ್ ರೆಡ್ಡಿ ಹೆಸರಿನ ನಕಲಿ ಖಾತೆಯಿಂದ ವಂಚಕರು ಅನಿಲ್ ಅವರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದರು. ತಮ್ಮ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಿಂದ ಬಂದ್ ರಿಕ್ವಿಸ್ಟ್ ಅನ್ನು ಅನಿಲ್ ಅಕ್ಸೆಪ್ಟ್ ಮಾಡಿದ್ದರು. ಅಲ್ಲದೆ, ಗುಡ್‌ನೈಟ್ ಸರ್ ಎಂದು ಅನಿಲ್ ಮಸೆಂಜರ್‌ನಲ್ಲಿ ಸಂದೇಶ ಕಳಿಸಿದ್ದರು.

ಅನಿಲ್ ಅವರ ಸಂದೇಶಕ್ಕೆ ಪ್ರತಿಯಾಗಿ, ಆ ಕಡೆಯಿಂದ ‘ಹಾಯ್ ಹೇಗಿದ್ದೀರಿ’ ಎಂಬ ಪ್ರತಿಕ್ರಿಯೆ ಬಂದಿತ್ತು. ಆರೋಗ್ಯ ಹಾಗೂ ಆರ್ಥಿಕ ಸ್ಥಿತಿ ಚೆನ್ನಾಗಿಲ್ಲ ಎಂದು ಅನಿಲ್ ಕಷ್ಟ ಹೇಳಿಕೊಂಡಿದ್ದರು. ಅದಕ್ಕೆ, ‘ನಿನ್ ಕಷ್ಟ ದೂರ ಮಾಡೋದಕ್ಕೆ ನನ್ ಹತ್ರ ಐಡಿಯಾ ಇದೆ’ ಎಂಬ ಸಂದೇಶ ಬಂದಿದೆ.

ಮುಂದುವರಿದು ವಂಚಕರು, ‘ನನಗೆ ಸಿಆರ್‌ಪಿಎಫ್‌ನಲ್ಲಿ ಒಬ್ಬ ಫ್ರೆಂಡ್ ಇದ್ದಾನೆ. ಸದ್ಯ ಆತನಿಗೆ ವರ್ಗಾವಣೆಯಾಗಿದೆ. ಅವನ ಮನೆ ಫ್ರಿಡ್ಜ್, ಸೋಫಾ, ಟಿ.ವಿ‌ ಸೇರಿದಂತೆ ಕೆಲ ಗೃಹ ಉಪಯೋಗಿ ವಸ್ತುಗಳಿದ್ದು ಎಲ್ಲವನ್ನೂ 75 ಸಾವಿರಕ್ಕೆ ಕೊಡುತ್ತಾನೆ ಎಂದು ಆಮಿಷವೊಡ್ಡಿದ್ದರು. ಜೊತೆಗೆ, ಸಿಆರ್‌ಪಿಎಫ್‌ ಅಧಿಕಾರಿ ಸಂತೋಷ್ ಎಂಬುವರ ಮೊಬೈಲ್ ಸಂಖ್ಯೆ ಸಹ ಕಳುಹಿಸಿದ್ದರು.

ಎಸ್ಪಿ ಹೆಸರಿನ ಸಂದೇಶವನ್ನು ನಿಜವೆಂದು ನಂಬಿದ ಅನಿಲ್, ಆ ಮೊಬೈಲ್ ಸಂಖ್ಯೆಗೆ ಹಂತ ಹಂತವಾಗಿ 75 ಸಾವಿರವನ್ನು ಪಾವತಿಸಿದ್ದಾರೆ. ಇದಾಗಿ ಕೆಲ ದಿನಗಳಾದರೂ ಯಾವ ಉಪಕರಣಗಳು ಸಹ ಬಂದಿಲ್ಲ. ಇದರಿಂದ ಆತಂಕಗೊಂಡ ಅನಿಲ್, ವಿಷಯವನ್ನು ಮೆಸೆಂಜರ್ ಮೂಲಕ ತಿಳಿಸಿದ್ದಾರೆ. ಆದರೆ, ಅಲ್ಲಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ತಾನು ವಂಚನೆಗೊಳಗಾಗಿರುವುದು ಗೊತ್ತಾಗಿದೆ.

ಬಳಿಕ ಅನಿಲ್ ಅವರು ಎಸ್‌ಪಿ ಅವರ ಹೆಸರಿನ ನಕಲಿ ಫೇಸ್‌ಬುಕ್ ಖಾತೆ ಜೊತೆ ನಡೆಸಿದ ಚಾಟಿಂಗ್, ಆನ್‌ಲೈನ್‌ನಲ್ಲಿ ಹಣ ವರ್ಗಾವಣೆ ಮಾಡಿದ ಸ್ಕ್ರೀನ್‌ಶಾಟ್‌ಗಳೊಂದಿಗೆ ನಗರದ ಸಿಇಎನ್ ಪೊಲೀಸ್ ಠಾಣೆಗೆ ಬಂದು ದೂರು ಕೊಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಎಂದು ಸಿಇಎನ್ ಪೊಲೀಸರು ತಿಳಿಸಿದ್ದಾರೆ.

Share this article