ದುಗ್ಗಳ ಸದಾನಂದ
ಕನ್ನಡಪ್ರಭ ವಾರ್ತೆ ನಾಪೋಕ್ಲುಐದು ವರ್ಷಗಳಿಗೊಮ್ಮೆ ಬೆಟ್ಟ, ಗುಡ್ಡ ಕಣಿವೆಗಳನ್ನೇರಿ ಮತದಾರರ ಪಾದ ಮುಟ್ಟಿ ನಮಸ್ಕರಿಸಿ, ಮತ ಯಾಚಿಸುವ ಸಂದರ್ಭ ಮಾತ್ರ ರಾಜಕಾರಣಿಗಳಿಗೆ ಇಷ್ಟವಾಗುವ ಕಾಲನಿಯೊಂದು ಕೊಡಗಿನಲ್ಲಿದೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷ ಕಳೆದರೂ ಇಲ್ಲಿನ ಮೂಲ ಸೌಕರ್ಯ ಸಮಸ್ಯೆಗಳಿಗೆ ಇನ್ನೂ ಸ್ವಾತಂತ್ರ್ಯ ದಕ್ಕಿಲ್ಲ.
ಪ್ರತೀ ಬಾರಿ ಜನಪ್ರತಿನಿಧಿಗಳು ಭರವಸೆ ನೀಡಿ ತಮ್ಮ ಓಟಿನ ಬೇಟೆಗೆ ಬರುವ ಸ್ಥಳ ಎಂದರೆ ಮಡಿಕೇರಿ ತಾಲೂಕಿನ ಬಲ್ಲಮಾವಟಿ ಪಂಚಾಯಿತಿಗೆ ಒಳಪಟ್ಟ ಮಂಜಾಟ್ ಕಾಲೋನಿ. ಇಲ್ಲಿನ ಸುಮಾರು 23 ಮನೆಗಳ 60ಕ್ಕೂ ಅಧಿಕ ನಿವಾಸಿಗಳು ಸೌಕರ್ಯಗಳಿಲ್ಲದೇ ಬದುಕುತ್ತಿದ್ದಾರೆ.ಹೌದು, ಇಲ್ಲಿನವರೆಗೂ ಭರವಸೆಗಳನ್ನೇ ಹಾಸಿಹೊದ್ದು ಮಲಗಿದ್ದ ಕಾಲನಿಯ ಮಂದಿ ಇದೀಗ ಎಚ್ಚೆತ್ತುಕೊಂಡಿದ್ದಾರೆ. ನಮ್ಮ ಕಾಲನಿಗೆ ಮತ ಕೇಳಲು ಯಾರೂ ಬರುವುದು ಬೇಡ ಎನ್ನುತ್ತಿದ್ದಾರೆ. ಕಾಲನಿ ರಸ್ತೆಯಲ್ಲಿ ಯೇ ಬಹಿಷ್ಕಾರದ ಬ್ಯಾನರ್ ಅಳವಡಿಸಲಾಗಿದ್ದು ಈ ಬಾರಿ ಮತದಾನವನ್ನೇ ಬಹಿಷ್ಕರಿಸಲು ನಿರ್ಧರಿಸಿದ್ದಾರೆ.
ಇಲ್ಲಗಳ ಸರಮಾಲೆ:ಮಂಜಾಟ್ ಕಾಲನಿಗೆ ಸೂಕ್ತ ಸಂಪರ್ಕ ವ್ಯವಸ್ಥೆಯಿಲ್ಲ. ಸೇತುವೆ ಕುಸಿದು ಬೀಳುವ ಹಂತದಲ್ಲಿದೆ. ರಸ್ತೆ ಡಾಂಬರು ಕಂಡಿಲ್ಲ. ಇರುವ ಕಲ್ಲುಮುಳ್ಳುಗಳ ಕಚ್ಛಾ ರಸ್ತೆ ಮಳೆಗಾಲದಲ್ಲಿ ಇಬ್ಭಾಗವಾಗುತ್ತದೆ. ಸುತ್ತಲೂ ಆನೆಗಳ ಹಾವಳಿ ಇದೆ.
ದೇಶದ ಎಲ್ಲಾ ಕಡೆ ಕರೆಂಟ್ ಬಂದಿದೆ ಎಂದು ಕಳಿದ್ದೇವೆ. ಆದರೆ, ನಮ್ಮ ಕಾಲೋನಿಗ್ಯಾಕೆ ಬಂದಿಲ್ಲ ಎಂದು ಇಲ್ಲಿನ ಜನರು ಮುಗ್ದತೆಯಿಂದ ಪ್ರಶ್ನಿಸುವಾಗ ಉತ್ತರವೇ ಇಲ್ಲವಾಗುತ್ತದೆ. ಕಾಲೋನಿಯಲ್ಲಿ ಎಸ್‌ಸಿ,ಎಸ್ಟಿ ,ಹಿಂದುಳಿದ ವರ್ಗದ ಜನರೇ ವಾಸವಾಗಿದ್ದಾರೆ. ಇಲ್ಲಿ ನಿವೃತ್ತರು ಮತ್ತು ಹಾಲಿ ಸೇವೆಯಲ್ಲಿರುವ ಸೈನಿಕರ ಮನೆಗಳೂ ಇವೆ. ದೇಶ ಸೇವೆ ಮಾಡುವ ಸೈನಿಕನ ಮನೆ ಸೇರಿದಂತೆ ಬಹುತೇಕ ನಿವಾಸಿಗಳ ಮನೆಗೆ ವಿದ್ಯುತ್ ಸಂಪರ್ಕವಿಲ್ಲ.ವಿದ್ಯುತ್ ಇಲ್ಲದ, ರಸ್ತೆಯಿಲ್ಲದ, ಮೂಲಭೂತ ಸೌಕರ್ಯಗಳೇ ಇಲ್ಲದ ಪ್ರದೇಶವೊಂದು ಇನ್ನೂ ಕೊಡಗಿನಲ್ಲಿದೆ ಎಂಬುದು ಆಳುವವರ ಗಮನಕ್ಕೇ ಬಾರದಿರುವುದು ವಿಶೇಷ.
ತಪ್ಪದೆ ಮತ ಚಲಾಯಿಸಿ ಎಂದು ಆಡಳಿತ ಯಂತ್ರವೇ ಕೂಗಿ ಹೇಳುತ್ತಿದೆ. ಮತದಾನ ನಮ್ಮ ಹಕ್ಕು ಎಂದು ಸಂವಿಧಾನವೇ ಹೇಳಿದೆ. ಆದರೆ, ಮೂಲಸೌಕರ್ಯ ಆಗ್ರಹಿಸಿ ಇಲ್ಲಿನ ನಿವಾಸಿಗಳು ಮತದಾನ ಬಹಿಷ್ಕಾರ ಮಾಡುವುದಾಗಿ ಎಚ್ಚರಿಸಿದ್ದಾರೆ.