ಶ್ರೀರಾಮ ನವಮಿ: ಎಲ್ಲೆಡೆ ರಾಮ ನಾಮ ಜಪ

KannadaprabhaNewsNetwork |  
Published : Apr 18, 2024, 02:15 AM IST
17ಕೆಪಿಆರ್‌ಸಿಆರ್03  | Kannada Prabha

ಸಾರಾಂಶ

ರಾಯಚೂರಿನ ರಾಮನ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಅಲಂಕಾರ, ತೊಟ್ಟಲೋತ್ಸವ, ತೀರ್ಥ ಪ್ರಸಾದ ವಿತರಣೆ ಸೇರಿ ಮೊದಲಾದ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ದಿನವಿಡಿ ನಡೆದವು.

ಕನ್ನಡಪ್ರಭ ವಾರ್ತೆ ರಾಯಚೂರು

ನಗರ ಸೇರಿ ಜಿಲ್ಲೆಯ ವಿವಿಧ ತಾಲೂಕು, ಹೋಬಳಿ ಮತ್ತು ಗ್ರಾಮೀಣ ಭಾಗದಲ್ಲಿ ಶ್ರೀರಾಮ ನವಮಿಯನ್ನು ಅತ್ಯಂತ ಸಂಭ್ರಮ ಸಡಗರದಿಂದ ಬುಧವಾರ ಆಚರಿಸಲಾಯಿತು.

ಜಿಲ್ಲೆಯಾದ್ಯಂತ ಇರುವ ಶ್ರೀರಾಮ ಹಾಗೂ ಆಂಜನೇಯ ಸ್ವಾಮಿ ದೇವಸ್ಥಾನಗಳಲ್ಲಿ ಬೆಳಗ್ಗೆಯಿಂದಲೆನೇ ಆದಿಪುರುಷ ಶ್ರೀರಾಮ ದೇವರಿಗೆ ಅಭಿಷೇಕ, ಅಲಂಕಾರ, ವಿಶೇಷ ಪೂಜೆ, ಮಹಾಮಂಗಳಾರತಿ, ತೊಟ್ಟಿಲೋತ್ಸವ, ತೀರ್ಥ ಪ್ರಸಾದದ ವಿತರಣೆ ಸೇರಿ ಮೊದಲಾದ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ದಿನವಿಡಿ ನಡೆದವು.

ರಾಯಚೂರು ನಗರದ ಅಯೋಧ್ಯೆ (ಸ್ಟೇಷನ್) ರಸ್ತೆಯಲ್ಲಿ ಶ್ರೀ ರಾಮ ಮಂದಿರದಲ್ಲಿ ದೇವರಿಗೆ ವಿಶೇಷ ವಸ್ತ್ರ, ಫಲ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಭಕ್ತರು ರಾಮನವಮಿ ನಿಮಿತ್ತ ದೇವಸ್ಥಾನಗಳಿಗೆ ಸಾಲುಗಟ್ಟಿದ್ದರು. ಮುತೈದೆಯರು ಶ್ರೀರಾಮನಿಗೆ ವಿಶೇಷ ಪೂಜೆ ನೆರವೇರಿಸಿ ತೊಟ್ಟಿಲು ಸೇವೆ ಮಾಡಿ ಆರತಿ ಬೆಳಗಿದರು. ಭಕ್ತರಿಗೆ ದೇವಸ್ಥಾನಗಳಲ್ಲಿ ಕೋಸಂಬರಿ, ಪಾನಕದ ವ್ಯವಸ್ಥೆ ಮಾಡಲಾಗಿತ್ತು.

ಇದೇ ಸಾಲಿನಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮ ದೇವರ ಪ್ರತಿಷ್ಠಾಪನೆಗೊಂಡ ಹಿನ್ನೆಲೆಯಲ್ಲಿ ಕಳೆದ ವರ್ಷಗಳಿಗಿಂತ ಈ ಬಾರಿ ಶ್ರೀ ರಾಮನವಮಿಯ ಕಳೆ ಹೆಚ್ಚಾಗಿತ್ತು. ಭಕ್ತರು ತುಸು ಹೆಚ್ಚಿನ ಆಸ್ಥೆ ವಹಿಸಿ ಶ್ರೀರಾಮ ದೇವರಿಗೆ ವಿಶೇಷ ಪೂಜೆ, ಪುನಸ್ಕಾರ, ರಾಮ ನಾಮ ಜಪಗಳನ್ನು ಮಾಡುತ್ತಿದ್ದ ದೃಶ್ಯಗಳು ಕಂಡು ಬಂತು.

ಅಸ್ಕಿಹಾಳ ಹನುಮ ದೇವಸ್ಥಾನದಲ್ಲಿ ವಿಶೇಷ ಹೋಮ ನೆರವೇರಿಸಲಾಯಿತು. ನಗರದ ಕೋದಂಡರಾಮ ದೇವಸ್ಥಾನದಲ್ಲಿ 39ನೇ ವರ್ಷದ ಶ್ರೀರಾಮ ನವಮಿ ಉತ್ಸವ ಆಚರಿಸಲಾಯಿತು. ದೇವರಿಗೆ ಪಂಚಾಮೃತ ಅಭಿಷೇಕ, ರಥೋತ್ಸವದಂಥ ಧಾರ್ಮಿಕ ಕಾರ್ಯಕ್ರಮ ನೆರವೇರಿಸಲಾಯಿತು.

ಕಾಂಗ್ರೆಸ್ ಅಭ್ಯರ್ಥಿ ಜಿ.ಕುಮಾರ ನಾಯಕ, ಸಣ್ಣ ನೀರಾವರಿ ಸಚಿವ ಎನ್.ಎಸ್.ಭೋಸರಾಜು ಸೇರಿ ಅನೇಕರು ನಗರದ ಕೋದಂಡ ರಾಮ ದೇವಸ್ಥಾನದಲ್ಲಿ ಪೂಜೆ ನೆರವೇರಿಸುವ ಮೂಲಕ ರಾಮನವಮಿ ಆಚರಿಸಿದರು. ಇನ್ನೂ ಅನೇಕ ಮಹಿಳೆಯರು ಶ್ರೀರಾಮನ ದೇವಸ್ಥಾನಗಳಲ್ಲಿ ತೊಟ್ಟಿಲು ಕಟ್ಟಿ ರಾಮನನ್ನು ತೂಗುವ ಮೂಲಕ ನವಮಿಯನ್ನು ಸಂಭ್ರಮದಿಂದ ಆಚರಿಸಿದರು. ಶ್ರೀರಾಮ-ಹನುಮ ಮೂರ್ತಿ ಅದ್ಧೂರಿ ಮೆರವಣಿಗೆ

ರಾಯಚೂರು ನಗರದಲ್ಲಿ ಶ್ರೀರಾಮನವಮಿ ನಿಮಿತ್ತ ಶ್ರೀರಾಮ ಹಾಗೂ ಹನುಮ ದೇವರುಗಳ ಮೂರ್ತಿಯ ಅದ್ದೂರಿ ಮೆರವಣಿಗೆಯನ್ನು ಬುಧವಾರ ಸಂಜೆ ಮಾಡಲಾಯಿತು.

ಸ್ಥಳೀಯ ಸ್ವಾಮಿವಿವೇಕಾನಂದ ವೃತ್ತದಿಂದ ಆರಂಭಗೊಂಡ ಮೆರವಣಿಗೆ ಪ್ರಮುಖ ರಸ್ತೆ, ವೃತ್ತ ಹಾಗೂ ಬಡಾವಣೆಗಳಲ್ಲಿ ನಡೆಯಿತು. ಡಿಜೆ ಸದ್ದಿಗೆ ಯುವಕರು ಕುಣಿದು ಕುಪ್ಪಳಿಸಿದರು, ಬಾಣ ಬಿರುಸುಗಳನ್ನು ಹಾರಿಸಿ ಸಂಭ್ರಮಿಸಿದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ