ಪುತ್ತೂರು ಶ್ರೀ ಮಹಾಲಿಂಗೇಶ್ವರ ಜಾತ್ರೆಯಲ್ಲಿ ದೇವರ ತೆಪ್ಪೋತ್ಸವ

KannadaprabhaNewsNetwork |  
Published : Apr 18, 2024, 02:15 AM IST
ಫೋಟೋ: ೧೭ಪಿಟಿಆರ್-ತೆಪ್ಪೋತ್ಸವಪುತ್ತೂರು ಶ್ರೀ ಮಹಾಲಿಂಗೇಶ್ವರ ಜಾತ್ರೋತ್ಸವದಲ್ಲಿ ದೇವರ ತೆಪ್ಪೊತ್ಸವ ನಡೆಯಿತು. | Kannada Prabha

ಸಾರಾಂಶ

ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ನಡೆದ ಬ್ರಹ್ಮರಥೋತ್ಸವದಲ್ಲಿ ಆರಂಭದಲ್ಲಿ ಬ್ರಹ್ಮರಥ ಸೇವೆ ನೀಡಿದ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಈ ಬಾರಿ ೮.೫೦ ಲಕ್ಷ ರು. ವೆಚ್ಚದ ಸುಡುಮದ್ದು ಪ್ರದರ್ಶನ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಪುತ್ತೂರು

ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ವರ್ಷಾವಧಿ ಜಾತ್ರೆಯಲ್ಲಿ ಬುಧವಾರ ಬ್ರಾಹ್ಮೀ ಮುಹೂರ್ತದಲ್ಲಿ ದೇವರ ತೆಪ್ಪೋತ್ಸವ ನಡೆಯಿತು.

ಅದಕ್ಕೆ ಮೊದಲು ನೂತನ ಶಿಲಾಮಯ ಮಂಟಪದಲ್ಲಿ ದೇವರಿಗೆ ಪೂಜೆ ಸಲ್ಲಿಸಲಾಯಿತು. ಉಳ್ಳಾಲ್ತಿ ಕಿರುವಾಳು ಮತ್ತು ಶ್ರೀ ಮಹಾಲಿಂಗೇಶ್ವರ ದೇವರ ಪಾಲಕಿ ಉತ್ಸವ ಉಡಿಕೆ, ಚೆಂಡೆ, ವಾದ್ಯ, ಕೊಂಬು ಶಂಖ, ಭಜನೆಯೊಂದಿಗೆ ನಡೆಯಿತು. ಬಳಿಕ ದೇವಳದ ಹೊರಾಂಗಣದಲ್ಲಿ ಹೂತೇರು ನಡೆಯಿತು. ಆ ಬಳಿಕ ದೇವರ ತೆಪ್ಪೋತ್ಸವ(ಕೆರೆ ಆಯನ) ನಡೆಯಿತು. ಪುಷ್ಕರಿಣಿಯ ನಡುವಲ್ಲಿರುವ ನೂತನ ಶಿಲಾಮಯ ಮಂಟಪದಲ್ಲಿ ದೇವರಿಗೆ ಪೂಜೆ ನಡೆಸಿ ಬಳಿಕ ದೇವಳದ ಒಳ ಹೋಗುವ ಕಾರ್ಯಕ್ರಮ ನಡೆಯಿತು.

ಮುಂಜಾನೆ ರಥ ಕಲಶ ಮತ್ತು ತೇರ ಬಲಿ ನಡೆಯಿತು. ವೇದಮೂರ್ತಿ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ಶ್ರೀಧರ ತಂತ್ರಿಗಳ ವೈದಿಕತ್ವದಲ್ಲಿ ರಥ ಕಲಶ ನಡೆಯಿತು. ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಎ. ವಸಂತ ಕುಮಾರ್ ಕೆದಿಲಾಯ, ವಾಸ್ತು ಎಂಜಿನಿಯರ್ ಪಿ.ಜಿ. ಜಗನ್ನಿವಾಸ್ ರಾವ್, ದೇವಳದ ಅರ್ಚಕ ಉದಯ ಭಟ್ ಮತ್ತಿತರರು ಉಪಸ್ಥಿತರಿದ್ದು ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.

ಪುತ್ತೂರು ಶ್ರೀ ಮಹಾಲಿಂಗೇಶ್ವರನಿಗೆ ವೈಭವದ ಬ್ರಹ್ಮರಥೋತ್ಸವಕನ್ನಡಪ್ರಭ ವಾರ್ತೆ ಪುತ್ತೂರು

ಇತಿಹಾಸ ಪ್ರಸಿದ್ಧ ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಬ್ರಹ್ಮರಥೋತ್ಸವವು ಬುಧವಾರ ರಾತ್ರಿ ಭಕ್ತಿ ಸಂಭ್ರಮದೊಂದಿಗೆ ವೈಭವಯುತವಾಗಿ ನಡೆಯಿತು. ಲಕ್ಷಾಂತರ ಮಂದಿ ಭಕ್ತರು ಬ್ರಹ್ಮರಥೋತ್ಸವದಲ್ಲಿ ಪಾಲ್ಗೊಂಡರು. ಪುತ್ತೂರು ಬೆಡಿ ಎಂದೇ ಪ್ರಖ್ಯಾತಿ ಪಡೆದಿರುವ ಸುಡುಮದ್ದು ಪ್ರದರ್ಶನವು ಬಾನಂಗಳದಲ್ಲಿ ಚಿತ್ರ ಚಿತ್ತಾರ ಮೂಡಿಸಿತು.ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ನಡೆದ ಬ್ರಹ್ಮರಥೋತ್ಸವದಲ್ಲಿ ಆರಂಭದಲ್ಲಿ ಬ್ರಹ್ಮರಥ ಸೇವೆ ನೀಡಿದ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಈ ಬಾರಿ ೮.೫೦ ಲಕ್ಷ ರು. ವೆಚ್ಚದ ಸುಡುಮದ್ದು ಪ್ರದರ್ಶನ ನಡೆಸಲಾಯಿತು.ಬುಧವಾರ ಬೆಳಗ್ಗೆ ದೇವಸ್ಥಾನದಲ್ಲಿ ಉತ್ಸವ, ಕಟ್ಟೆಪೂಜೆ, ಮಧ್ಯಾಹ್ನ ದರ್ಶನ ಬಲಿ, ಬಟ್ಟಲು ಕಾಣಿಕೆ ನಡೆಯಿತು. ಸಂಜೆ ದೇವರ ಮತ್ತು ಉಳ್ಳಾಲ್ತಿ ಅಮ್ಮನವರ ಉತ್ಸವ ನಡೆಯಿತು. ಬಳಿಕ ಬ್ರಹ್ಮರಥದ ಬಳಿ ಕಾಜುಕುಜುಂಬ ದೈವದ ನುಡಿಗಟ್ಟು ನಡೆದು ದೇವರು ರಥಾರೂಢರಾದರು. ಬಳಿಕ ಪುತ್ತೂರು ಬೆಡಿ ಆರಂಭಗೊಂಡಿತು. ಸುಮಾರು ೧ ಗಂಟೆ ಕಾಲ ಸುಡುಮದ್ದು ಪ್ರದರ್ಶನ ನಡೆದು ಬ್ರಹ್ಮರಥೋತ್ಸವ ನಡೆಯಿತು. ಬಳಿಕ ಬ್ರಹ್ಮರಥದಿಂದ ಇಳಿದ ದೇವರು ಬಂಗಾರ್ ಕಾಯರ್‌ಕಟ್ಟೆ ಸವಾರಿಯ ಬಳಿಕ ಅಂಕೆತ್ತಿಮಾರ್ ಕಟ್ಟೆಯಲ್ಲಿ ಕಟ್ಟೆ ಪೂಜೆ ಸ್ವೀಕರಿಸಿ ದಂಡ ನಾಯಕ ಉಳ್ಳಾಲ್ತಿ ದೈವಗಳ ಬೀಳ್ಕೊಡುಗೆಯ ಬಳಿಕ ದೇವಳದ ಒಳಗೆ ಪ್ರವೇಶ, ಶಯನ ನಡೆಯಿತು.ಪೊಲೀಸ್ ಬಂದೋಬಸ್ತು: ಸಿಸಿ ಕಣ್ಗಾವಲು: ಜಾತ್ರೋತ್ಸವವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಡಿವೈಎಸ್‌ಪಿ ಅರುಣ್ ನಾಗೇಗೌಡ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ವಿವಿಧ ಜಿಲ್ಲೆಯಗಳ ಪೊಲೀಸರ ಜೊತೆಗೆ ಸಶಸ್ತ್ರ ಮೀಸಲು ಪಡೆ, ಗೃಹ ರಕ್ಷಕ ದಳ ಬಂದೋಬಸ್ತ್ ನಿರತರಾಗಿದ್ದರು. ಅದರೊಂದಿಗೆ ನೂರಾರು ಪೊಲೀಸ್ ಸಿಬ್ಬಂದಿ ಮಫ್ತಿಯಲ್ಲಿಯೂ ಕಾರ್ಯ ನಿರ್ವಹಿಸುತ್ತಿದ್ದರು. ಹಲವು ಕಡೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿ ಕಣ್ಗಾವಲು ನಡೆಸಲಾಗಿತ್ತು.

ಪುತ್ತೂರು ಕೆಎಸ್‌ಆರ್‌ಟಿಸಿ ವತಿಯಿಂದ ಬ್ರಹ್ಮರಥೋತ್ಸವದ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶಗಳಿಗೆ ಹೆಚ್ಚುವರಿ ಬಸ್‌ನ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ