ಉಡುಪಿ: ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ಅಗ್ರಸ್ಥಾನದಲ್ಲಿರುವ ಉಡುಪಿ ಜಿಲ್ಲೆಯು ಪ್ರಸಕ್ತ ಸಾಲಿನ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಎಲ್ಲ ಶಾಲೆಗಳು ಶೇ 100 ರಷ್ಟು ಫಲಿತಾಂಶ ಪಡೆದು, ಜಿಲ್ಲೆಗೆ ಕೀರ್ತಿ ತರುವಂತಾಗಬೇಕು, ಇದರಲ್ಲಿ ಶಿಕ್ಷಕ ಪಾತ್ರ ಮುಖ್ಯವಾಗಿದೆ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಹೇಳಿದರು.
ಉಡುಪಿ ಜಿಲ್ಲೆಯಲ್ಲಿ 115 ಸರ್ಕಾರಿ, 68 ಅನುದಾನಿತ ಹಾಗೂ 91 ಅನುದಾನ ರಹಿತ ಸೇರಿದಂತೆ ಒಟ್ಟು 274 ಪ್ರೌಢಶಾಲೆಗಳಿದ್ದು, ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 6,880 ಬಾಲಕರು, 6,600 ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು 13,480 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಡಿಸಿ ಮಾಹಿತಿ ನೀಡಿದರು. ಈಗಾಗಲೇ ಎಸೆಸ್ಸೆಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ 2 ಬಾರಿ ಜಿಲ್ಲಾ ಮಟ್ಟದ ಪೂರ್ವ ಭಾವಿ ಪರೀಕ್ಷೆಗಳನ್ನು ನಡೆಸಲಾಗಿದ್ದು, ಶೇ. 77.77 ರಷ್ಟು ಫಲಿತಾಂಶ ಬಂದಿರುತ್ತದೆ. ರಾಜ್ಯಮಟ್ಟದ ಪೂರ್ವಭಾವಿ ಪರೀಕ್ಷೆಗೆ ಇನ್ನು 13 ದಿನಗಳಿದ್ದು, ಈ ಫಲಿತಾಂಶವನ್ನು ಹೆಚ್ಚಿಸಲು ಮರುಪಠಣ ತರಗತಿಗಳು ಹಾಗೂ ಪೋಷಕರ ಸಮನ್ವಯ ಸಭೆಗಳನ್ನು ನಡೆಸಬೇಕು ಎಂದವರು ಮುಖ್ಯ ಶಿಕ್ಷಕರಿಗೆ ಸಲಹೆ ಮಾಡಿದರು.
ಜಿಪಂ ಸಿಇಒ ಪ್ರತೀಕ್ ಬಾಯಲ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ವೃದ್ಧಿಪಡಿಸಿದರೇ ಪ್ರತಿಶತಃ ನೂರು ಫಲಿತಾಂಶ ಪಡೆಯಲು ಸಾಧ್ಯ. ಪ್ರತಿಯೊಬ್ಬ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂಬುದು ಮುಖ್ಯವಲ್ಲ. ವಿಶೇಷ ದರ್ಜೆಯಲ್ಲಿ ಉತ್ತೀರ್ಣರಾಗುವುದು ಅಷ್ಟೇ ಮುಖ್ಯವಾಗಿರುತ್ತದೆ ಎಂದರು.ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಲೋಕೇಶ್ ಸಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪಪೂ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಾರುತಿ, ಹಿಂ.ವ. ಕಲ್ಯಾಣ ಇಲಾಖೆಯ ಅಧಿಕಾರಿ ಹಾಕಪ್ಪ ಆರ್. ಲಮಾಣಿ, ಡಯಟ್ ಪ್ರಾಂಶುಪಾಲ ಡಾ. ಅಶೋಕ್ ಕಾಮತ್, ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಕಿರಣ್ ಹೆಗ್ಡೆ, ಐದು ವಲಯಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಎಸೆಸ್ಸೆಲ್ಸಿ ನೋಡೆಲ್ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಶಿಕ್ಷಕ ರಾಜೇಂದ್ರ ಭಟ್ ನಿರೂಪಿಸಿ, ಅಕ್ಷರ ದಾಸೋಹ ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಾ ನಾಯಕ್ ವಂದಿಸಿದರು.
5 ಟಾಪ್ ಗುಣಾತ್ಮಕ ಜಿಲ್ಲೆಗಳಲ್ಲಿ ಉಡುಪಿ ಪ್ರಥಮ: ರಾಜ್ಯದಲ್ಲಿ ಗುಣಾತ್ಮಕ ಶಿಕ್ಷಣದಲ್ಲಿ ಟಾಪ್ ಐದು ಎ ಗ್ರೇಡ್ ಜಿಲ್ಲೆಗಳಲ್ಲಿ ಉಡುಪಿ ಜಿಲ್ಲೆ ಪ್ರಥಮ ಸ್ಥಾನ ಪಡೆದಿದೆ. ಇದನ್ನು ಮುಂದುವರೆಸಿಕೊಂಡು ಹೋಗುವುದು ಶಿಕ್ಷಕರ ಹೊಣೆಗಾರಿಕೆಯಾಗಿದೆ, ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಿ, ಅವರುಗಳೊಂದಿಗೆ ಇದ್ದು, ಫಲಿತಾಂಶ ಹೆಚ್ಚಿಸಲು ಪ್ರಯತ್ನಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಲೋಕೇಶ್ ಸಿ. ಹೇಳಿದರು.