ತುಂಗಭದ್ರಾ ಜಲಾಶಯದಿಂದ 7744 ಕ್ಯುಸೆಕ್ ನೀರು ನದಿಗೆ ಬಿಡುಗಡೆ : ಕಾಲುವೆಗಳಿಗೂ ನೀರು

KannadaprabhaNewsNetwork |  
Published : Jul 23, 2024, 12:45 AM ISTUpdated : Jul 23, 2024, 11:51 AM IST
22ಎಚ್‌ಪಿಟಿ6- ಹೊಸಪೇಟೆಯ ತುಂಗಭದ್ರಾ ಜಲಾಶಯದ ಒಳಹರಿವು 1ಲಕ್ಷ ದಾಟಿರುವ ಹಿನ್ನೆಲೆಯಲ್ಲಿ ಜಲಾಶಯದ ಮೂರು ಗೇಟ್‌ಗಳನ್ನು ಒಂದು ಅಡಿಯವರೆಗೆ ಎತ್ತರಿಸಿ ನದಿಗೆ ನೀರು ಹರಿಬಿಡಲಾಗಿದೆ. | Kannada Prabha

ಸಾರಾಂಶ

ಜಲಾಶಯದ ಕಾಲುವೆಗಳಿಗೂ ನೀರು ಹೊರಬಿಡಲಾಗುತ್ತಿದೆ. ಈಗ ನದಿಗೂ ನೀರು ಹರಿಬಿಡಲಾಗಿದೆ.

ಹೊಸಪೇಟೆ; ತುಂಗಭದ್ರಾ ಜಲಾಶಯದ ಒಳಹರಿವು 1 ಲಕ್ಷ ದಾಟಿದ ಹಿನ್ನೆಲೆಯಲ್ಲಿ ಸೋಮವಾರ ಮೂರು ಗೇಟ್‌ಗಳನ್ನು ಒಂದು ಅಡಿ ಎತ್ತರಿಸಿ ನದಿಗೆ 3987 ಕ್ಯುಸೆಕ್‌ ನೀರು ಹರಿಬಿಡಲಾಗುತ್ತಿದೆ. ಇನ್ನೂ ಪವರ್‌ ಕಾಲುವೆಯಿಂದ ನದಿಗೆ 3,757 ಕ್ಯುಸೆಕ್ ನೀರು ಹರಿಬಿಡಲಾಗಿದೆ. ಹಾಗಾಗಿ ನದಿಗೆ ಒಟ್ಟು 7,744 ಕ್ಯುಸೆಕ್ ನೀರು ಹರಿಬಿಡಲಾಗುತ್ತಿದೆ.

ತುಂಗಭದ್ರಾ ಜಲಾಶಯದ ಒಳ ಹರಿವು 1 ಲಕ್ಷ 4 ಸಾವಿರ 400 ಕ್ಯುಸೆಕ್‌ ದಾಟಿರುವ ಹಿನ್ನೆಲೆಯಲ್ಲಿ ಜಲಾಶಯದ 15, 16 ಮತ್ತು 17ನೇ ಗೇಟ್‌ಅನ್ನು ಎತ್ತರಿಸಿ ಮೂರು ಗೇಟ್‌ಗಳಿಂದ 3987 ಕ್ಯುಸೆಕ್‌ ನೀರು ನದಿಗೆ ಹರಿಬಿಡಲಾಯಿತು. ಈಗಾಗಲೇ ಜಲಾಶಯದ ಕಾಲುವೆಗಳಿಗೂ ನೀರು ಹೊರಬಿಡಲಾಗುತ್ತಿದೆ. ಈಗ ನದಿಗೂ ನೀರು ಹರಿಬಿಡಲಾಗಿದೆ.

ಜಲಾಶಯದಲ್ಲಿ 87.056 ಟಿಎಂಸಿ ನೀರು ಸಂಗ್ರಹವಾಗಿದೆ. 105.788 ಟಿಎಂಸಿ ಸಂಗ್ರಹ ಸಾಮರ್ಥ್ಯ ಹೊಂದಿರುವ ಜಲಾಶಯ ಒಳಹರಿವು ಒಂದು ಲಕ್ಷ ದಾಟಿರುವ ಹಿನ್ನೆಲೆ ಈಗ ನದಿಗೆ ನೀರು ಹರಿಸಲಾಗಿದೆ.

ತುಂಗಭದ್ರಾ ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ಹಾಗಾಗಿ ಜಲಾಶಯದ ಒಳಹರಿವು 1 ಲಕ್ಷ 4 ಸಾವಿರ 400 ಕ್ಯುಸೆಕ್‌ನಷ್ಟಿದೆ. ಜಲಾಶಯದ ಮಟ್ಟ 1633.00 ಅಡಿ ಇದ್ದು, ಈಗಾಗಲೇ 1628.09 ಅಡಿಯಷ್ಟು ನೀರು ಬಂದಿದೆ. ಜಲಾಶಯದಿಂದ ನದಿಗೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುವ ಸಾಧ್ಯತೆ ಇದೆ.

ಜಲಾಶಯದಿಂದ ನೀರು ಬಿಟ್ಟಿರುವುದರಿಂದ ಹಂಪಿಯ ಪುರಂದರದಾಸರ ಮಂಟಪದ ಬಳಿ ನೀರು ರಭಸವಾಗಿ ಹರಿಯುತ್ತಿದೆ. ಇನ್ನೂ ಕಂಪ್ಲಿ, ಸಿರುಗುಪ್ಪ ಭಾಗದಲ್ಲೂ ನದಿಪಾತ್ರದ ಮನೆಗಳು ಜಲಾವೃತವಾಗಲಿವೆ. ಜಲಾಶಯದಿಂದ ನೀರು ಬಿಟ್ಟಿರುವುದರಿಂದ ಹಂಪಿಯ ಕೆಲವು ಸ್ಮಾರಕಗಳು ಜಲಾವೃತವಾಗುವುದರಿಂದ ಪ್ರವಾಸಿಗರಿಗೂ ಸ್ಮಾರಕಗಳ ವೀಕ್ಷಣೆಗೆ ತೊಂದರೆಯಾಗಲಿದೆ. ಹಂಪಿಯಲ್ಲಿ ನದಿಪಾತ್ರದಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದ್ದು, ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ. ನದಿಪಾತ್ರದ ಹಳ್ಳಿಗಳಲ್ಲೂ ಈಗಾಗಲೇ ಸ್ಥಳೀಯಾಡಳಿತಗಳು ಡಂಗುರ ಸಾರಿವೆ. ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಟ್ಟರೆ ಜನರಿಗೆ ತೊಂದರೆ ಉಂಟಾದರೆ, ಆಯಾ ಜಿಲ್ಲಾಡಳಿತಗಳು ಕಾಳಜಿ ಕೇಂದ್ರಗಳನ್ನು ತೆರೆಯಲಿವೆ.

ತುಂಗಭದ್ರಾ ಜಲಾಶಯ ರಾಜ್ಯದ ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ ಜಿಲ್ಲೆಗಳ 3.5 ಲಕ್ಷ ಹೆಕ್ಟೇರ್‌ ಪ್ರದೇಶಕ್ಕೆ ನೀರು ಒದಗಿಸುತ್ತಿದೆ. ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಿಗೆ ನೀರು ಒದಗಿಸುತ್ತದೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ