ಕನ್ನಡಪ್ರಭ ವಾರ್ತೆ ಮೈಸೂರು
ಲಲಿತಾದ್ರಿಪುರದ ಸಿಲಿಕಾನ್ ಸಿಟಿ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ ಆಯೋಜಿಸಲಾಗಿತ್ತು.ಸಂಸ್ಥೆ ಕಾರ್ಯದರ್ಶಿ ಎಲ್. ರವಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ದೇಶದ ಸ್ವಾತಂತ್ರ್ಯ ಹೊರಾಟದಲ್ಲಿ ಯುವಕರು, ದಲಿತರು, ಮಹಿಳೆಯರು, ಆದಿವಾಸಿಗಳು, ರೈತರು ಸೇರಿದಂತೆ ಪ್ರತಿಯೊಬ್ಬರ ಕೊಡುಗೆ ಇದೆ. 1857ಕ್ಕೂ ಮುನ್ನವೇ ದೇಶದ ಬುಡಕಟ್ಟು ಪ್ರದೇಶಗಳಲ್ಲಿ ಸ್ವಾತಂತ್ರ್ಯ ಹೋರಾಟ ನಡೆದಿತ್ತು. ಆ ಎಲ್ಲಾ ಮಹಾಪುರುಷರ ಜೀವನ ಚರಿತ್ರೆಯನ್ನೂ ನಾವೆಲ್ಲರೂ ಓದಿ ತಿಳಿದು, ನಮ್ಮ ಜೀವನದಲ್ಲಿ ಆ ಮೌಲ್ಯಗಳನ್ನೂ ಅಳವಡಿಸಿ ಕೊಳ್ಳಬೇಕು ಎಂದರು.
ಇಂದು 145 ಕೋಟಿ ಜನರಿದ್ದೇವೆ. ನಾವೆಲ್ಲ ಸಂಕಲ್ಪ ಮಾಡಿ, ರಾಷ್ಟ್ರೀಯ ಶಿಕ್ಷಣ ನೀತಿ ಅಳವಡಿಸಿಕೊಂಡು ಶಿಕ್ಷಣ, ಸಾಹಿತ್ಯ, ಸಂಸ್ಕೃತಿ, ವಿಜ್ಞಾನ ಮತ್ತು ತಂತ್ರಜ್ಞಾನ, ಬಾಹ್ಯಾಕಾಶ, ಯೋಗ, ಕೃಷಿ, ಕೈಗಾರಿಕೆ, ಆರ್ಥಿಕತೆ, ವೈದ್ಯಕೀಯ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಒಂದೇ ದಿಕ್ಕಿನಲ್ಲಿ ಕೆಲಸ ಮಾಡುತ್ತಾ ಸಾಗಿದರೆ ನಾವೂ 2047ರ ವೇಳೆಗೆ ವಿಕಸಿತ ಭಾರತ ಆಗಬಹುದು ಎಂದರು.ಇದಕ್ಕೆ ವಿದ್ಯಾರ್ಥಿಗಳು, ಯುವಕರು ಮತ್ತು ಪೋಷಕರ ಪಾತ್ರ ಪ್ರಮುಖ. ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಪದ್ಧತಿಯಲ್ಲಿಯೇ ವಿದ್ಯಾಭ್ಯಾಸ ನೀಡುತ್ತೀದ್ದೇವೆ ಎಂದು ಅವರು ತಿಳಿಸಿದರು.
ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಪ್ರಗತಿ ಸಾಧಿಸಬೇಕಾದರೆ ವಿದ್ಯಾರ್ಥಿಗಳು ಓದಿನ ಜೊತೆಗೆ ಕ್ರೀಡಾ ಚಟುವಟಿಕೆಯಲ್ಲೂ ಭಾಗವಹಿಸಿ ದೇಶಕ್ಕೆ ಒಲಿಂಪಿಕ್ಸ್ ಅಂತಹ ಸ್ಪರ್ಧೆಗಳಲ್ಲಿ ವಿಶ್ವದಲ್ಲಿಯೇ ಅತಿಹೆಚ್ಚು ಪದಕ ತಂದು ಕೊಡಬೇಕು. ಹಾಗಾಗಿ ನಮ್ಮ ಸಿಲಿಕಾನ್ ಸಿಟಿ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಅತ್ಯುತ್ತಮ ಶಿಕ್ಷಣದ ಜೊತೆಗೆ ಕ್ರೀಡೆ, ಸಂಗೀತ, ಸಾಂಸ್ಕೃತಿಕ ಚಟುವಟಿಕೆಗೂ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತೀದ್ದೇವೆ ಎಂದು ಹೇಳಿದರು.ಶಾಲೆಯ ವಿದ್ಯಾರ್ಥಿಗಳು ದೇಶಭಕ್ತಿ ಗೀತೆ ಕಾರ್ಯಕ್ರಮ ನಡೆಸಿಕೊಟ್ಟರು. ಶಾಲೆಯ ಪ್ರಾಂಶುಪಾಲೆ ಡಾ. ದೀಪ್ತಿ ಚತುರ್ವೇದಿ, ಸಂಸ್ಥೆಯ ಎಲ್ಲಾ ಶಿಕ್ಷಕರು, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಇದ್ದರು.