7ನೇ ಹೊಸಕೋಟೆ ಸಂತ ಸೆಬಾಸ್ಟೀನ್‌ ದೇವಾಲಯ ಲೋಕಾರ್ಪಣೆ

KannadaprabhaNewsNetwork | Published : May 1, 2024 1:17 AM

ಸಾರಾಂಶ

ಮಂಗಳವಾರ 7ನೇ ಹೊಸಕೋಟೆ ಸಂತ ಸೆಬಾಸ್ಟೀನ್‌ ನೂತನ ದೇವಾಲಯಕ್ಕೆ ಧಾರ್ಮಿಕ ವಿಧಿ ವಿಧಾನ ನೆರವೇರಿಸಲಾಯಿತು. ಧರ್ಮಾಧ್ಯಕ್ಷರು ತೈಲ ಲೇಪಿಸಿ ಆಶೀರ್ವದಿಸಿದರು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

7ನೇ ಹೊಸಕೋಟೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಸಂತ ಸೆಬಾಸ್ಟೀನ್‌ ಅವರ ರೋಮನ್ ಕ್ಯಾಥೋಲಿಕ್ ದೇವಾಲಯವು ಸತತವಾದ ಆರಾಧನೆ ಮತ್ತು ಪ್ರಾರ್ಥನೆಯಿಂದ ಪ್ರತಿಯೊಬ್ಬರೂ ದೇವರ ಅನುಗ್ರಹಕ್ಕೆ ಪಾತ್ರರಾಗಲಿದ್ದಾರೆ ಎಂದು ಬೆಳ್ತಂಗಡಿ ಧರ್ಮಾಕ್ಷೇತ್ರದ ಧರ್ಮಾಧ್ಯಕ್ಷ ಮಾರ್ ಲಾರೆನ್ಸ್ ಮುಕ್ಕಾಜಿ ಹೇಳಿದರು.

ಮಂಗಳವಾರ 7ನೇ ಹೊಸಕೋಟೆ ಸಂತ ಸೆಬಾಸ್ಟೀನ್‌ ನೂತನ ದೇವಾಲಯಕ್ಕೆ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿ ಆಶೀರ್ವಚನದ ಮೂಲಕ ದೇವಾಲಯವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಈ ದೇವಾಲಯವು ಅನೇಕ ಧರ್ಮಗುರುಗಳ ಕನ್ಯಾಸ್ತ್ರೀಯರ ಮತ್ತು ಭಕ್ತರ ಸತತ ಪರಿಶ್ರಮ ಮತ್ತು ಸೇವಾ ಮನೋಭಾವದಿಂದ ಅತ್ಯಂತ ಆಕರ್ಷಕವಾಗಿ ಮೂಡಿಬಂದಿದ್ದು ಇಲ್ಲಿ ಸತತ ಪ್ರಾರ್ಥನೆ ಮತ್ತು ಆರಾಧನೆಯಿಂದ ಈ ದೇವಾಲಯವನ್ನು ಒಂದು ಶಕ್ತಿ ಶ್ರದ್ಧಾ ಕೇಂದ್ರವನ್ನಾಗಿ ಹೊರಹೊಮ್ಮಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಅವರು ಹೇಳಿದರು.

ಈ ದೇವಾಲಯದ ಸಂತರ ಹೆಸರು ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಧರ್ಮಗುರುಗಳ ಹೆಸರು ಒಂದೇಯಾಗಿದ್ದು, ಅವರ ನಾಯಕತ್ವದಡಿಯಲ್ಲಿ ಕಳೆದ 9 ವರ್ಷಗಳಿಂದ ನಡೆದ ದೇವಾಯದ ಪುನರ್ ನಿರ್ಮಾಣ ಕಾರ್ಯವು ಇಂದು ಸಾಕಾರಗೊಂಡಿದೆ ಎಂದು ತಿಳಿಸಿದರು.

ಬೆಳ್ತಂಗಡಿ ಧರ್ಮಕ್ಷೇತ್ರದ ಅಧೀನದಲ್ಲಿ ಬರುವ ಸಿದ್ಧಾಪುರ ಕರಡಿಗೋಡುವಿನ ಸಂತ ಮೇರಿ ದೇವಾಲಯದ ನೇತೃತ್ವದಲ್ಲಿ ಸಂತ ಸೆಬಾಸ್ಟೀನ್ ರವರ ರೋಮನ್ ಕ್ಯಾಥೋಲಿಕ್ ದೇವಾಲಯವು 1982 ರಲ್ಲಿ ಆರಂಭಗೊಂಡು ಕಾರ್ಯಾಚರಣೆಯನ್ನು ಸ್ಮರಿಸಿದ ಅವರು ಅತ್ಯುತ್ತಮ ರೀತಿಯಲ್ಲಿ ದೇವಾಲಯದ ಪುನರ್ ನಿರ್ಮಾಣ ಕಾಮಗಾರಿ ನಡೆದಿರುವುದನ್ನು ಶ್ಲಾಘಿಸಿದರು.

ದೇವಾಲಯದ ಪ್ರತಿ ವಿಭಾಗಕ್ಕೂ ತಮ್ಮ ತಂಡದೊಂದಿಗೆ ತೆರಳಿದ ಧರ್ಮಾಧ್ಯಕ್ಷರು ಪ್ರಾರ್ಥನೆಯೊಂದಿಗೆ ತೀರ್ಥವನ್ನು ಪ್ರೋಕ್ಷಿಸಿ ವಿಶೇಷ ತೈಲ ಲೇಪಿಸಿ ಆಶೀರ್ವದಿಸಿದರು.

ಆಶೀರ್ವಚನ ಹಾಗೂ ಬಲಿಪೂಜೆಯಲ್ಲಿ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಬೆಳ್ತಂಗಡಿ ಧರ್ಮಕ್ಷೇತ್ರದ ಜೋಸೆಫ್ ವಲಿಯಪರಂಬಿಲ್, ಸಿದ್ದಾಪುರ ಸಂತ ಮೇರಿ ಚರ್ಚಿನ ವಲಯ ಧರ್ಮಗುರುಗಳಾದ ಜೋಜಿ ವಡಕ್ಕಿವೀಟಿ, ಮೈಸೂರಿನ ಸೆಂಟ್ ಪೌಲಸ್ ಪ್ರಾಂತ್ಯದ ಧರ್ಮಗುರು ಆಗಸ್ಟೀನ್ ಪಾಯಂಪಳ್ಳಿ ಸೇರಿದಂತೆ ಕೊಡಗು ಸೇರಿದಂತೆ ಬೆಳ್ತಂಗಡಿ ಧರ್ಮಕ್ಷೇತ್ರದ ಧರ್ಮಗುರು ಹಾಗೂ ಮೈಸೂರು ಧರ್ಮಕ್ಷೇತ್ರದ ಕೊಡಗು ಮಡಿಕೇರಿ ವಲಯದ ಧರ್ಮಗುರುಗಳಾದ ರೆ.ಫಾ.ದೀಪಕ್ ಸೇರಿದಂತೆ 40 ಕ್ಕೂ ಮಿಕ್ಕಿ ಧರ್ಮಗುರುಗಳು ಬಲಿ ಅರ್ಪಣೆಯಲ್ಲಿ ತೊಡಗಿಸಿಕೊಂಡಿದ್ದರು.

ವಿವಿಧ ಕನ್ಯಾಸ್ತ್ರೀ ಮಠಗಳಿಗೆ ಸೇರಿದ ಕನ್ಯಾಸ್ತ್ರೀಯರು ಹೊಸಕೋಟೆ, ಸುಂಟಿಕೊಪ್ಪ, ಕುಶಾಲನಗರ, ಮಡಿಕೇರಿ, ಸಿದ್ಧಾಪುರ ಸೇರಿದಂತೆ ವಿವಿಧ ಭಾಗಗಳಿಂದ ನೂರಾರು ಸಂಖ್ಯೆಯಲ್ಲಿ ಕ್ರೈಸ್ತಬಾಂಧವರು ಪಾಲ್ಗೊಂಡಿದ್ದರು.

Share this article