7ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಅಭಿಯಾನ

KannadaprabhaNewsNetwork | Published : Apr 18, 2025 12:36 AM

ಸಾರಾಂಶ

ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲಾದ್ಯಂತ ಏಪ್ರಿಲ್ 26 ರಿಂದ ಜೂನ್ 4ರವರೆಗೆ ಜಾನುವಾರುಗಳಿಗಾಗಿ ಹಮ್ಮಿಕೊಳ್ಳಲಾಗುವ 7ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಅಭಿಯಾನದಲ್ಲಿ ನಿಗಧಿತ ಗುರಿ ಸಾಧಿಸಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ, ತುಮಕೂರುರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲಾದ್ಯಂತ ಏಪ್ರಿಲ್ 26 ರಿಂದ ಜೂನ್ 4ರವರೆಗೆ ಜಾನುವಾರುಗಳಿಗಾಗಿ ಹಮ್ಮಿಕೊಳ್ಳಲಾಗುವ 7ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಅಭಿಯಾನದಲ್ಲಿ ನಿಗಧಿತ ಗುರಿ ಸಾಧಿಸಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿಗಳ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ಗುರುವಾರ ಜರುಗಿದ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದ ಅವರು, ಕಾಲುಬಾಯಿ ರೋಗದ ಲಸಿಕೆಯನ್ನು ಜಾನುವಾರುಗಳಿಗೆ ಕಡ್ಡಾಯವಾಗಿ ಹಾಕಿಸುವ ಹಾಗೂ ಲಸಿಕೆಯನ್ನು ಉಚಿತವಾಗಿ ನೀಡುವ ಬಗ್ಗೆ ಪಶುಪಾಲಕರಲ್ಲಿ ಅರಿವು ಮೂಡಿಸಬೇಕು ಎಂದರಲ್ಲದೆ, ನಿಗಧಿತ ಗುರಿ ಸಾಧಿಸುವ ಮೂಲಕ ಲಸಿಕಾ ಅಭಿಯಾನವನ್ನು ಯಶಸ್ವಿಗೊಳಿಸಬೇಕೆಂದು ನಿರ್ದೇಶನ ನೀಡಿದರು.ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕ(ತಾಂತ್ರಿಕ) ಡಾ. ನಾಗಮಣಿ ಮಾತನಾಡಿ, ಕಳೆದ ವರ್ಷ ಹಮ್ಮಿಕೊಂಡಿದ್ದ 6ನೇ ಸುತ್ತಿನ ಲಸಿಕಾ ಅಭಿಯಾನದಲ್ಲಿ 478624 ಜಾನುವಾರುಗಳಿಗೆ ಲಸಿಕೆ ನೀಡುವ ಮೂಲಕ ಶೇ. 96ರಷ್ಟು ಗುರಿ ಸಾಧಿಸಲಾಗಿತ್ತು.ಪ್ರಸಕ್ತ ವರ್ಷ ಜಿಲ್ಲೆಯಲ್ಲಿ 388209 ದನ ಹಾಗೂ 107969 ಎಮ್ಮೆ ಸೇರಿದಂತೆ ಒಟ್ಟು 496278 ಜಾನುವಾರುಗಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಜಿಲ್ಲೆಯ ಎಲ್ಲಾ ತಾಲೂಕು ಸೇರಿದಂತೆ ಒಟ್ಟು 5666 ಲಸಿಕೆ ಡೋಸ್ ದಾಸ್ತಾನು ಮಾಡಲಾಗಿದೆ. ಲಸಿಕೆಯನ್ನು 4 ತಿಂಗಳೊಳಗಿನ ಕರು ಹಾಗೂ ತುಂಬು ಗರ್ಭವಿರುವ ರಾಸುಗಳನ್ನು ಹೊರತುಪಡಿಸಿ ಉಳಿದ ಜಾನುವಾರುಗಳಿಗೆ ನೀಡಲಾಗುವುದು. ಅಭಿಯಾನದಲ್ಲಿ ಲಸಿಕೆ ನೀಡಲು 271 ಇಲಾಖೆ ಲಸಿಕೆದಾರರು ಹಾಗೂ 226 ಇಲಾಖೇತರ ಲಸಿಕೆದಾರರು ಸೇರಿದಂತೆ ಒಟ್ಟು 497 ಲಸಿಕೆದಾರರನ್ನು ಬಳಸಿಕೊಳ್ಳಲಾಗುವುದು ಎಂದು ಸಭೆಗೆ ಮಾಹಿತಿ ನೀಡಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಎಲ್ಲಾ ತಾಲೂಕಿನ ಸಹಾಯಕ ನಿರ್ದೇಶಕರು ಸೇರಿದಂತೆ ಮತ್ತಿತರರು ಹಾಜರಿದ್ದರು.

Share this article