ಕುಂದರನಾಡಲ್ಲಿ 7ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ

KannadaprabhaNewsNetwork | Published : Jul 28, 2024 2:08 AM

ಸಾರಾಂಶ

ಅಡವಿಸಿದ್ಧೇಶ್ವರ ತಪೋ ಭೂಮಿ ಅಂಕಲಗಿಯಲ್ಲಿ 7ನೇ ಕನ್ನಡ ಸಾಹಿತ್ಯ ಸಮ್ಮೇಳನ ಜರುಗುತ್ತಿರುವುದು ಕುಂದರನಾಡು ಭಾಗದ ಸಾಹಿತ್ಯಾಸಕ್ತರ ಸಂತಸ ಇಮ್ಮಡಿಯಾಗಿದೆ.

ಭೀಮಶಿ ಭರಮಣ್ಣವರ

ಕನ್ನಡಪ್ರಭ ವಾರ್ತೆ ಗೋಕಾಕ

ಅಡವಿಸಿದ್ಧೇಶ್ವರ ತಪೋ ಭೂಮಿ ಅಂಕಲಗಿಯಲ್ಲಿ 7ನೇ ಕನ್ನಡ ಸಾಹಿತ್ಯ ಸಮ್ಮೇಳನ ಜರುಗುತ್ತಿರುವುದು ಕುಂದರನಾಡು ಭಾಗದ ಸಾಹಿತ್ಯಾಸಕ್ತರ ಸಂತಸ ಇಮ್ಮಡಿಯಾಗಿದೆ. ಹಿರಿಯ ಸಾಹಿತಿ ಪ್ರೊ.ಶಿವಲಿಂಗಪ್ಪ ಭಾವಿಕಟ್ಟಿ ಸಮ್ಮೇಳನದ ಸರ್ವಾಧ್ಯಕ್ಷರಾಗಿರುವುದು ಕುಂದರನಾಡಿನ ಹೆಮ್ಮೆ.

ಸ್ವಾತಂತ್ರ್ಯ ಹೋರಾಟದ ಕ್ಷಾತ್ರ ಭೂಮಿಯಲ್ಲಿ ಸ್ವಾತಂತ್ರ್ಯ ಯೋಧರ ಮನೆತನದಲ್ಲಿ ಗೋಕಾವಿಯ ಕುಂದರನಾಡಿನ ಗ್ರಾಮೀಣ ಪರಿಸರದಲ್ಲಿ ಪ್ರೊ.ಭಾವಿಕಟ್ಟಿ ಜನಿಸಿದ್ದು, ದೇಸಿ ಸಂಸ್ಕೃತಿಯ ಅಪ್ಪಟ ಜವಾರಿ ವ್ಯಕ್ತಿತ್ವದ ಶಿಕ್ಷಕ ಸಾಹಿತಿ. ತಮ್ಮ ಅಧ್ಯಯನ ಕ್ಷೇತ್ರಕಾರ್ಯ ಅನುಭವಗಳ ಇತಿಮಿತಿಯಲ್ಲಿ ಸಾಹಿತ್ಯವನ್ನು ಕೃಷಿಯಂತೆ ಶ್ರದ್ಧೆ, ಭಕ್ತಿಯೊಂದಿಗೆ ಮಾಡಿಕೊಂಡು ಬಂದಿದ್ದಾರೆ. ಭಾವಿಕಟ್ಟಿ ಅವರನ್ನು ತುಂಬಾ ಪ್ರಭಾವಿಸಿದ್ದು ಈ ಮಣ್ಣಿನ ಜನಪದ ಸ್ವತಂತ್ರ ಚಳವಳಿಗಳು ಹಾಗೂ ಕೆಲ ಘನ ವ್ಯಕ್ತಿತ್ವದ ವಿಶೇಷ ವ್ಯಕ್ತಿಗಳು. ಸುವ್ಯಕ್ತ ಸಾಹಿತ್ಯ ಜೊತೆಗೆ ಬಾಂವಿಕಟ್ಟಿ ಅವರಿಗೆ 4 ದಶಕಗಳ ನಂಟಿದೆ.

ಪ್ರೊ.ಬಾಂವಿಕಟ್ಟಿ ಸ್ನೇಹಮಯಿ, ಸಹೃದಯಿ, ವಿನಯ, ಸೌಜನ್ಯದ ಪ್ರತಿರೂಪ. ಪ್ರತಿಭಾವಂತ ಲೇಖಕ, ಕ್ರಿಯಾಶೀಲ ಶಿಕ್ಷಕ, ಸಾಕಷ್ಟು ಕ್ಷೇತ್ರ ಕಾರ್ಯ ತಿರುಗಾಡಿ ಅಪಾರ ಪರಿಶ್ರಮದಿಂದ ಜಾನಪದ ಹೋರಾಟ ಚರಿತ್ರಿ ಪ್ರಕಟಿಸಿ ಗೋಕಾವಿಯ ಕುಂದರನಾಡಿನ ಋಣ ತಿರಿಸಿದ್ದಾರೆ. ಭಾವಿಕಟ್ಟಿ ಅವರ ಬರಹಕ್ಕಿಂತ ಅವರು ಬದುಕು ವ್ಯಕ್ತಿತ್ವ ದೊಡ್ಡದು. ತುಂಬಾ ಸರಳ, ನಿರಾಡಂಬರ, ಮೃದು ಮಾತು, ಮುಗ್ಧ ಮನಸು, ಪ್ರಚಾರ, ಪುರಸ್ಕಾರಕ್ಕೆ ಆಶಿಸದೆ ಬಸಂತವನದ ಕೋಗಿಲೆಯಂತೆ ಬಾಳಿ ಬದುಕಿದ ಅವರಿಗೆ 75ರ ಹರೆಯ, ಅಮೃತ ಮಹೋತ್ಸವದ ಸಂಭ್ರಮ.

ಕುಂದರನಾಡಿನ ಕ್ರಾಂತಿ ಚೇತನ ಬಸವರಾಜ ಕಟ್ಟಿಮನಿ ಕುರಿತು ಪ್ರೊ.ಭಾವಿಕಟ್ಟಿಯವರ 5 ಅಪರೂಪದ ಲೇಖನಗಳಿವೆ. ಸ್ವಾತಂತ್ರ್ಯ ಮತ್ತು ಬದುಕಿನ ಹೋರಾಟ, ಪತ್ರಕರ್ತ, ಸಾಹಿತಿ ಜೀವನ ಕುರಿತಂತೆ ಬಸವರಾಜ ಕಟ್ಟಿಮನಿ ಒಡನಾಡಿಯಾಗಿ, ಸಹೃದಯಿಯಾಗಿ ಚಿತ್ರಕಾವ್ಯ ಬಿಡಿಸುತ್ತಾರೆ. ಸಾಮಾಜಿಕ ಅನ್ಯಾಯ, ಅಸಮತೆ, ಶೋಷಣೆ ವಿರುದ್ಧ ಲೇಖನಿಯನ್ನು ಅಸ್ತ್ರವಾಗಿ ಝಳಪಿಸಿದ್ದನ್ನು ಸಮರ್ಥವಾಗಿ ನಿರೂಪಿಸಿದ್ದಾರೆ.

ಗೋಕಾವಿ ನಾಡಿನ ಮಣ್ಣಿನ ಭಾಷೆ ಗೋಕಾವಿ ಸಿದ್ಧರ ಗದ್ದುಗೆ, ಶರಣರ ಸಂತರ ನೆಲವೀಡು, ಜಾಗೃತ ಕ್ಷೇತ್ರ, ಔದ್ಯೋಗಿಕ, ವಾಣಿಜ್ಯ ಕ್ಷೇತ್ರ. ಜಲಪಾತ ಪ್ರಕೃತಿ ಸೌಂದರ್ಯದ ಪ್ರವಾಸಿ ತಾಣ. ಬಣ್ಣಗಾರಿಕೆ, ಹೈನುಗಾರಿಕೆ, ಸುಣ್ಣಗಾರಿಕೆ, ಕರದಂಟು, ಕಲೆ ಸಾಹಿತ್ಯ, ಜಾನಪದ ಕಲೆಗಳು, ಜಾನಪದ ರಂಗಭೂಮಿ, ಸಣ್ಣಾಟ, ಪಾರಿಜಾತ ತವರಾದ ಗೋಕಾವಿ ನಾಡನ್ನು ಸಾಹಿತ್ಯ ಹಾಗೂ ಸಾಂಸ್ಕೃತಿಕವಾಗಿ ಚಿರಂತನವಾಗಿಟ್ಟುಕೊಡುತ್ತದೆ. ಜಾನಪದದ 8 ಬರಹಗಳ ಗೋಕಾವಿಯ ಹಿರಿಮೆ ಗರಿಮೆ ತುಂಬ ಮೌಲಿಕವಾಗಿ ಭಾವಿಕಟ್ಟಿ ಅಧ್ಯಾಪನಕ್ಕೆ ಸಾಕ್ಷಿಯಾಗಿದೆ.

ಗೋಕಾಕ ತಾಲೂಕು ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷತೆ ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಅಪ್ರತಿಮ ಸೇವೆಯು ಶಿವಲಿಂಗಪ್ಪ ಭಾವಿಕಟ್ಟಿ ಅವರಿಗೆ ದೊರೆತ ಗೌರವ ಆಗಿದೆ. ಕುಂದರನಾಡಿನ ಸಾಹಿತ್ಯ ಕ್ಷೇತ್ರದ ಎಲ್ಲೆಡೆ ಹರ್ಷ ವ್ಯಕ್ತವಾಗಿದೆ. ಭಾಂವಿಕಟ್ಟಿ ಅವರು ಕೆಜೆಎಸ್‌ನ ಎಸ್‌.ಎ.ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ 3 ದಶಕಗಳಿಗೂ ಹೆಚ್ಚು ಕಾಲ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದಾರೆ.

ಭಾವಿಕಟ್ಟಿ ಅವರು ಸಂಪಾದಿಸಿದ ಕವನ ಸಂಕಲನ, ಜಾನಪದದಲ್ಲಿ ಅಂಕಲಗಿ ಅಡವೇಶ, ಓದುಗರ ಮೈ ನವಿರೇಳಿಸುವಂತಹ ಕೃತಿಗಳಲ್ಲೊಂದಾಗಿದೆ. ಅವರ ಇನ್ನೂಂದು ಅತ್ತ್ಯುತ್ತಮ ಕೃತಿಗಳಲ್ಲಿಯ ಹೊರೆ ಅಪಾರ ಸಾಹಿತ್ಯಭಿಮಾನಿಗಳ ಬೇಡಿಕೆಯ ಕೃತಿಯಾಗಿದ್ದು, ಅನೇಕ ಕವನ ಸಂಕಲನಗಳು, ಕಥೆಗಳು, ನಾಟಕಗಳು, ಕಾದಂಬರಿಗಳು ಅವರ ಕಸುವಿನ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಸಮ್ಮೇಳನ ನಡೆಯುವ ಈ ಪುಣ್ಯ ಭೂಮಿಗೆ ಭವ್ಯ ಇತಿಹಾಸವಿದೆ. ಹಿಂದೆ ವಿದ್ಯಾ ಕೇಂದ್ರವಾಗಿರಬಹುದೆಂಬ ಸಂಶೋಧನೆಗಳು ನಡೆದಿವೆ. ಕುಂದರನಾಡು ಸಂಘಟನೆಯಲ್ಲಿ ಎತ್ತಿದ ಕೈ. ಹುದಲಿ ಮತ್ತು ಪಾಶ್ಚಾಪುರ ಬೇರೆ ಬೇರೆ ತಾಲೂಕಿನಲ್ಲಿ ಇದ್ದರೂ ಕುಂದರನಾಡಿನ ಅವಿಭಾಜ್ಯ ಅಂಗ. ಸ್ವಾತಂತ್ರ್ಯ ಸಂಗ್ರಾಮ ಕಿಡಿ ಹೊತ್ತಿದ್ದೆ ಹುದಲಿ ಮತ್ತು ಪಾಶ್ಚಾಪುರದಲ್ಲಿ. ಗಂಗಾಧರ ದೇಶಪಾಂಡೆ ಅವರ ಕುಮರಿ ಆಶ್ರಮ ಸ್ವಾತಂತ್ರ್ಯ ಸೇನಾನಿಗಳ ತರಬೇತಿ ಕೇಂದ್ರವಾಗಿತ್ತು. ಕುಮರಿ ಆಶ್ರಮದ ರಾಷ್ಟ್ರೀಯ ಶಾಲೆಗಳು ನಾಡಿನಲ್ಲಿ ಅಕ್ಷರ ಬೀಜ ಬಿತ್ತುವುದರ ಜೊತೆಗೆ ರಾಷ್ಟ್ರೀಯ ಪ್ರಜ್ಞೆ ಮೂಡಿಸಿದವು. ಸಾಹಿತಿ ಬೆಟಗೇರಿ ಕೃಷ್ಣಶರ್ಮ ಅವರು ಈ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ಬಸವರಾಜ ಕಟ್ಟೀಮನಿ ಮತ್ತು ರಾಮ ಜಾಧವ ಸಂಗಡಿಗರೊಂದಿಗೆ ಕೆಜೆಎಸ್ ಸಂಘ ಸ್ಥಾಪಿಸಿದರು. ಇಂದು ಹೆಮ್ಮರವಾಗಿ ಬೆಳೆದಿದೆ. ವಿದ್ಯಾರಣ್ಯ ಸಂಸ್ಥೆ, ನಾಯಕ ಸ್ಟುಡೆಂಟ್ ಫೆಡರೇಷನ್ , ಮಹಾತ್ಮ ಗಾಂಧಿ ಪಬ್ಲಿಕ್ ಶಾಲೆ ಪ್ರಾರಂಭಗೊಂಡು ಕುಂದರನಾಡಿನಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿವೆ.

ಬಸವರಾಜ ಕಟ್ಟಿಮನಿ ಅವರು ಉಳುವವನೆ ಭೂ ಒಡೆಯ ಹೋರಾಟ ಸಂಘಟಿಲು ಸುಲಧಾಳದಲ್ಲಿ 1956ರಲ್ಲಿ ರೈತ ಸಭೆ ನಡೆಸಿದ್ದರು. ನಿಜಲಿಂಗಪ್ಪ, ದೇವರಾಜ ಅರಸು, ಪಾಟೀಲ ಪುಟ್ಟಪ್ಪ ಮೊದಲಾದವರು ಭಾಗವಹಿಸಿದ್ದರು. 1961ರಲ್ಲಿ ಗುಜನಾಳದಲ್ಲಿ ಬೇಡರ ಪರಿಷತ್‌ ಸಂಘಟಿಸಲು ಶಿವನಗೌಡ ಮಲಗೌಡ ಪಾಟೀಲ ಬೃಹತ್ ಸಭೆ ನಡೆಸಿದ್ದರು.

ಕುಂದರನಾಡು ಸಹ್ಯಾದ್ರಿ ಶ್ರೇಣಿಯ ಪವಡಿ ಇರುವ ಬೆಟ್ಟ ಗುಡ್ಡಗಳು, ಮಾರ್ಕಂಡೇಯ ನದಿ, ಬಳ್ಳಾರಿ ಹಳ್ಳ, ಖನಿಜ ಪ್ರದೇಶಗಳನ್ನು ತನ್ನ ಒಡಲಲ್ಲಿರಿಸಿಕೊಂಡು ಮರಳು ಮಿಶ್ರಿತ ಕಪ್ಪು ಮಣ್ಣಿನ ಸಿರಿನಾಡು. ಜನಪದರು ಹಂತಿಪದಗಳಲ್ಲಿ ಕಣದಾಗ ಕಂಕಿಯಿರಲಿ, ಒಲಿಯಾದ ಬೆಂಕಿಯಿರಲಿ ಎಂದು ಹಾಡುತ್ತಾರೆ. ಎಲ್ಲ ಕಾಲಕ್ಕೂ ಸಮೃದ್ಧ ಬೆಳೆ ಬೆಳೆದು, ಸತತ ಅನ್ನದಾನವಾಗಲಿ ಎಂಬ ಭಾವ. ಇದಕ್ಕೆ ಅಡವಿಸಿದ್ದೇಶ್ವರರ ಆಶೀರ್ವಾದ ಕಾರಣ. ಮಹಾತಪಸ್ವಿ ಶ್ರೀ ಅಡವಿಸಿದ್ದೇಶ್ವರರಿಗೆ 5 ಜನ ಶಿಷ್ಯಂದಿರು. ಕುಂದರನಾಡಿನಲ್ಲಿ ತವಗದ ಬಾಳಯ್ಯನವರು, ಕೈತನಾಳದ ನಿರುಪಾಧೀಶರು, ತುಮಕೂರಿನ ಚಿಕ್ಕತೊಟ್ಟಲಗೆರೆಯ ಅಟವಿಸ್ವಾಮಿಗಳು, ಬಿಳಗಿಯ ರುದ್ರಯ್ಯನವರು, ಮರೆಗುದ್ದಿಯ ನಿರುಪಾಧೀಶ್ವರರು, ಶ್ರೀ ಅಡವಿದ್ದೇಶ್ವರರ ದಾಸೋಹ ಪರಂಪರೆಯನ್ನು ಕುಂದರನಾಡಿನ ತುಂಬ ಪಸರಿಸಿದರು.

Share this article