- ಜಿಲ್ಲೆಯ ವಿವಿಧ ಠಾಣಾ ವ್ಯಾಪ್ತಿ ಪ್ರಕರಣಗಳ ಆರೋಪಿಗಳ ಬಂಧನ: ಎಸ್‌ಪಿ ಡಾ.ಶೇಖರ್ ಮಾಹಿತಿ - - -
ಸರಣಿ ಮನೆಗಳ್ಳತನ, ವೃದ್ಧೆ ಹತ್ಯೆ, ದರೋಡೆ ಹೀಗೆ ಜಿಲ್ಲೆಯ ವಿವಿಧ ತಾಲೂಕುಗಳ ಜನರ ನಿದ್ದೆಗೆಡಿಸಿದ್ದ 8 ವಿವಿಧ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 11 ಆರೋಪಿಗಳ ಹೆಡೆಮುರಿ ಕಟ್ಟಿ, ಸುಮಾರು ₹70 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತು, ಇತರೆ ಸ್ವತ್ತುಗಳನ್ನು ಜಿಲ್ಲೆಯ ಪೊಲೀಸರು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ನಗರದ ಎಸ್‌ಪಿ ಕಚೇರಿಯಲ್ಲಿ ಸೋಮವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೇಖರ್ ಎಚ್.ಟೇಕಣ್ಣನವರ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಜಿಲ್ಲೆಯ ನ್ಯಾಮತಿ, ಸಂತೇಬೆನ್ನೂರು, ದಾವಣಗೆರೆ ಕೆಟಿಜೆ ನಗರ ಪೊಲೀಸ್ ಠಾಣೆಗಳ ವ್ಯಾಪ್ತಿಯ ಒಟ್ಟು 8 ಗಂಭೀರ ಪ್ರಕರಣಗಳನ್ನು ಪೊಲೀಸರು ಬೇಧಿಸಿದ್ದಾರೆ. 534.76 ಗ್ರಾಂ ಚಿನ್ನಾಭರಣ, 639.56 ಗ್ರಾಂ ಬೆಳ್ಳಿ ಆಭರಣ, 1 ಅರ್ಮಾನಿ ವಾಚ್ ಜಪ್ತಿ ಮಾಡಿ, 1 ಜಾನುವಾರನ್ನು ವಶಕ್ಕೆ ಪಡೆದ ಬಗ್ಗೆ ಮಾಹಿತಿ ನೀಡಿದರು.ಆನ್ ಲೈನ್ ಗೇಮ್ ದಾಸನಿಂದ ಕೊಲೆ!:
ನ್ಯಾಮತಿ ತಾಲೂಕಿನ ಆರುಂಡಿ ಗ್ರಾಮದಲ್ಲಿ ಫೆ.2ರಂದು ವೃದ್ಧೆ ಕಮಲಮ್ಮ (60) ಅವರನ್ನು ಶಿಕಾರಿಪುರದ ಅಭಿಷೇಕ ಎಂಬಾತ ಹತ್ಯೆ ಮಾಡಿ, ಚಿನ್ನಾಭರಣ ದೋಚಿದ್ದ. ಕಮಲಮ್ಮನ ಕೊಲೆಯಾಗಿದೆ ಎಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದರಿಂದ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು. ಬಳಿಕ ಶಿವಮೊಗ್ಗ ಜಿಲ್ಲೆ ಶಿಕಾರಿಪುರದ ಅಭಿಷೇಕನನ್ನು ಪತ್ತೆಹಚ್ಚಿ ವಿಚಾರಣೆಗೆ ಒಳಪಡಿಸಿದ್ದರು. ಅಭಿಷೇಕ್ ಆನ್ ಲೈನ್ ಗೇಮ್‌ಗಳಿಗೆ ದಾಸನಾಗಿದ್ದು, ಲಕ್ಷಾಂತರ ರು. ಸಾಲ ಮಾಡಿದ್ದನು. ಸಾಲ ತೀರಿಸಲು ದಾರಿ ಕಾಣದೇ ಒಂಟಿ ಮಹಿಳೆ ಕಮಲಮ್ಮನ ಮನೆಗೆ ನುಗ್ಗಿ, ಕತ್ತು ಹಿಸುಕಿ ಕೊಲೆ ಮಾಡಿದ್ದನು. ಕಮಲಮ್ಮನ ಚಿನ್ನಾಭರಣಗಳನ್ನು ಶಿಕಾರಿಪುರದ ವಿವಿಧ ಬ್ಯಾಂಕ್‌ಗಳಲ್ಲಿ ಅಡವಿಟ್ಟು, ಹಣ ಪಡೆದಿದ್ದ. ₹8.44 ಲಕ್ಷ ಮೌಲ್ಯದ ಚಿನ್ನದ ಸರ, ಬಳೆ, ಕಿವಿಯೋಲೆಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ ಎಂದರು.ಗೌತಮ್/ಪೋತರಾಜ/ಹುಸೇನ್:
ದಾವಣಗೆರೆ ಕೆಟಿಜೆ ನಗರ ಠಾಣೆ ವ್ಯಾಪ್ತಿಯ ಅಸ್ಗರ್ ಅಲಿ ಅವರ ಮನೆ ಬೀಗ ಮುರಿದು, 293 ಗ್ರಾಂ ಚಿನ್ನಾಭರಣ ಕಳವು ಮಾಡಿದ್ದ ಶಿವಮೊಗ್ಗ ಮೂಲದ, ಹಾಲಿ ಗಂಗಾವತಿ ವಾಸಿಯಾದ ಆರೋಪಿ ಗೌತಮ್ ರಾಜ್ ಅಲಿಯಾಸ್ ಪೋತರಾಜ ಅಲಿಯಾಸ್ ಸದ್ದಾಂ ಹುಸೇನ್ (35)ನನ್ನು ಪೊಲೀಸರು ಬಂಧಿಸಿ, ₹29.29 ಲಕ್ಷ ಮೌಲ್ಯದ 261 ಗ್ರಾಂ 560 ಮಿಲಿ ಗ್ರಾಂ ಚಿನ್ನದ ಆಭರಣ, ₹65 ಸಾವಿರ ನಗದು, 439 ಗ್ರಾಂ 560 ಮಿಲಿ ಗ್ರಾಂ ಬೆಳ್ಳಿ ಆಭರಣ, ₹23 ಸಾವಿರ ಮೌಲ್ಯದ ಅರ್ಮಾನಿ ಎಕ್ಸ್‌ಚೇಂಜ್ ವಾಚ್ ಜಪ್ತಿ ಮಾಡಲಾಗಿದೆ.ಇದೇ ಸಂದರ್ಭದಲ್ಲಿ ಚನ್ನಗಿರಿ ತಾಲೂಕಿನ ಕಾಕನೂರು ಗ್ರಾಮದಲ್ಲಿ ನಡೆದಿದ್ದ ದರೋಡೆ, ನಲ್ಲೂರು ಗ್ರಾಮದ ಮನೆಯಲ್ಲಿ ಕಳವು ಕೃತ್ಯ ಪ್ರಕರಣಗಳ ಪತ್ತೆ ಹಚ್ಚಿದ ಬಗ್ಗೆಯೂ ಎಸ್‌ಪಿ ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಎಎಸ್‌ಪಿ ಪರಮೇಶ್ವರ ಹೆಗಡೆ ಇದ್ದರು.- - -
-23ಕೆಡಿವಿಜಿ7: ಎಸ್ಪಿ ಡಾ. ಎಚ್.ಟಿ. ಶೇಖರ್ ಸುದ್ದಿಗೋಷ್ಠಿಯಲ್ಲಿ ಮಾಧ್ಯಮದವರಿಗೆ ಪ್ರಕರಣಗಳ ಪತ್ತೆ ಮಾಹಿತಿ ವಿವರಿಸಿದರು. ಎಎಸ್‌ಪಿ ಪರಮೇಶ್ವರ ಹೆಗಡೆ ಇದ್ದರು.