ಕನ್ನಡಪ್ರಭ ವಾರ್ತೆ ಬೆಂಗಳೂರು
ಮಾಜಿ ಸಂಸದ ಡಿ.ಕೆ.ಸುರೇಶ್ ಅವರ ತಂಗಿ ಎಂದು ಚಿನ್ನದಂಗಡಿ ಮಾಲೀಕರಿಗೆ ನಂಬಿಸಿ ಬರೋಬ್ಬರಿ 8.41 ಕೋಟಿ ರು. ಮೌಲ್ಯದ 14.6 ಕೆಜಿ ಚಿನ್ನಾಭರಣ ಸಾಲ ಪಡೆದು ಬಳಿಕ ಹಣ ನೀಡಿದೆ ವಂಚಿಸಿದ ಆರೋಪದಡಿ ಮಹಿಳೆ, ಚಿತ್ರನಟ ಸೇರಿ ಮೂವರ ವಿರುದ್ಧ ಬೆಂಗಳೂರಿನ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಚಿನ್ನದಂಗಡಿ ಮಾಲೀಕರಾದ ವನಿತಾ ಎಸ್.ಐತಾಳ್ ನೀಡಿದ ದೂರಿನ ಮೇರೆಗೆ ಬಂಗಾರಿ ಗೌಡ (ಹೆಸರು ಬದಲಿಸಲಾಗಿದೆ), ಈಕೆಯ ಪತಿ ಹರೀಶ್, ಚಿತ್ರನಟ ಧರ್ಮೇದ್ರ ವಿರುದ್ಧ ವಂಚನೆ, ನಂಬಿಕೆ ದ್ರೋಹ, ಬೆದರಿಕೆ ಆರೋಪದಡಿ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ದೂರು?:ದೂರುದಾರೆ ವನಿತಾ ಎಸ್.ಐತಾಳ್ ನೀಡಿದ ದೂರಿನ ಅನ್ವಯ, ನಾನು ವರಾಹೀ ವರ್ಲ್ಡ್ ಆಫ್ ಗೋಲ್ಡ್ ಚಿನ್ನದಂಗಡಿ ಮಾಲೀಕಳಾಗಿದ್ದೇನೆ. ಆರ್.ಆರ್.ನಗರ ನಿವಾಸಿಗಳಾದ ಬಂಗಾರಿ ಗೌಡ ಮತ್ತು ಆಕೆಯ ಪತಿ ಹರೀಶ್ ಪರಿಚಿತರು. ಬಂಗಾರಿ ಗೌಡ ಅವರು ಸಂಸದ ಡಿ.ಕೆ.ಸುರೇಶ್ ಅವರ ತಂಗಿ ಎಂದು ನನಗೆ ನಂಬಿಸಿದ್ದರು. ನನಗೆ ಅನೇಕ ರಾಜಕೀಯ ವ್ಯಕ್ತಿಗಳ ಸಂಪರ್ಕವಿದೆ. ನಾನು ದೊಡ್ಡ ವ್ಯಾಪಾರಸ್ತೆ. ಮುಂದೆ ನಿಮಗೆ ಒಳ್ಳೇಯ ವ್ಯಾಪಾರ ವಹಿವಾಟು ನೀಡುತ್ತೇನೆ ಎಂದು ಸ್ನೇಹ ಸಂಪಾದಿಸಿದ್ದರು. ನನ್ನ ಚಿನ್ನದಂಗಡಿಯಲ್ಲಿ ಹಲವು ಬಾರಿ ಚಿನ್ನಾಭರಣಗಳನ್ನು ಸಾಲ ಪಡೆದು ಕೆಲ ದಿನಗಳ ಬಳಿಕ ಹಣವನ್ನು ನೀಡಿದ್ದಾರೆ. ಇದನ್ನು ನಂಬಿ ನಾನು ಅವರು ಕೇಳಿದಾಗಲೆಲ್ಲಾ ಚಿನ್ನಾಭರಣ ಸಾಲ ನೀಡುತ್ತಾ ಬಂದಿದ್ದೇನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಸಾಲವಾಗಿ 14 ಕೆಜಿ ಚಿನ್ನಾಭರಣ:ಬಂಗಾರಿ ಗೌಡ ಮತ್ತು ಆಕೆಯ ಪತಿ ಹರೀಶ್ 2023ರ ಅ.12ರಿಂದ 2024ರ ಜ.1ರವರೆಗೆ ಹಂತ ಹಂತವಾಗಿ 14.6 ಕೆಜಿ ಚಿನ್ನಾಭರಣಗಳನ್ನು ಸಾಲ ಪಡೆದಿದ್ದಾರೆ.