ಗದಗ: ಮಾದಕ ವಸ್ತುಗಳ ನಿರ್ಮೂಲನೆಗೆ ಮತ್ತೊಂದು ಮಹತ್ವದ ಹೆಜ್ಜೆಯಾಗಿ, ಜಿಲ್ಲಾ ಪೊಲೀಸರು ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ 8.08 ಕೆಜಿ ಗಾಂಜಾವನ್ನು ನ್ಯಾಯಾಲಯದ ಅನುಮತಿ ಪಡೆದು ನಿಯಮಾನುಸಾರವಾಗಿ ಶುಕ್ರವಾರ ನಾಶಪಡಿಸಿದರು.
ತಾಲೂಕಿನ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ಜೈವಿಕ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಗಾಂಜಾವನ್ನು ಸಾಗಿಸಿ ವೈಜ್ಞಾನಿಕ ವಿಧಾನದಲ್ಲಿ ಸಂಪೂರ್ಣವಾಗಿ ನಾಶಪಡಿಸಲಾಯಿತು. ಮಾದಕ ವಸ್ತುಗಳು ಮತ್ತೊಮ್ಮೆ ದುಷ್ಕರ್ಮಿಗಳ ಕೈ ಸೇರದಂತೆ ತಡೆಯುವುದು, ಕಾನೂನುಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕುವುದು ಇದರ ಮೂಲ ಉದ್ದೇಶವಾಗಿದೆ.
ಜಿಲ್ಲಾ ಪೊಲೀಸರು ಕಳೆದ ಕೆಲವು ತಿಂಗಳುಗಳಿಂದ ಮಾದಕ ವಸ್ತುಗಳ ಮಾರಾಟ, ಸಾಗಾಟ ಹಾಗೂ ಅಕ್ರಮ ಸಂಗ್ರಹದ ವಿರುದ್ಧ ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದು, ಹಲವು ಪ್ರಕರಣಗಳನ್ನು ಪತ್ತೆಹಚ್ಚಿ ಆರೋಪಿಗಳನ್ನು ಬಂಧಿಸಿದ್ದಾರೆ. ಆ ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ ಗಾಂಜಾವನ್ನೇ ಶುಕ್ರವಾರ ನಾಶಪಡಿಸಲಾಯಿತು.ಕಾರ್ಯಾಚರಣೆಯಲ್ಲಿ ಎಸ್ಪಿ ರೋಹನ್ ಜಗದೀಶ್, ಡಿಎಎಸ್ಪಿ ಮುರ್ತುಜಾ ಖಾದ್ರಿ ಸೇರಿದಂತೆ ಜಿಲ್ಲಾ ಡ್ರಗ್ ಡಿಸ್ಪೋಸಲ್ ಸಮಿತಿ ಸದಸ್ಯರು, ವಿವಿಧ ಪೊಲೀಸ್ ಠಾಣೆಗಳ ತನಿಖಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದು ಪ್ರಕ್ರಿಯಿಯನ್ನು ಪೂರ್ಣಗೊಳಿಸಿದರು. ವಿಲೇವಾರಿ ಕಾರ್ಯ: ಯುವ ಸಮುದಾಯವನ್ನು ಮಾದಕ ವ್ಯಸನದಿಂದ ದೂರವಿಡುವುದು ಹಾಗೂ ಜಿಲ್ಲೆಯಲ್ಲಿ ಮಾದಕ ವಸ್ತುಗಳ ಜಾಲವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದು ಪೊಲೀಸ್ ಇಲಾಖೆಯ ಪ್ರಮುಖ ಆದ್ಯತೆಯಾಗಿದೆ. ಸಮಾಜವನ್ನು ಮಾದಕ ವ್ಯಸನದಿಂದ ರಕ್ಷಿಸುವ ಉದ್ದೇಶದಿಂದ ನ್ಯಾಯಾಲಯದ ಮಾರ್ಗಸೂಚಿ ಮತ್ತು ಎನ್ಡಿಪಿಎಸ್ ಕಾಯ್ದೆಯ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಈ ವಿಲೇವಾರಿ ಕಾರ್ಯ ಕೈಗೊಳ್ಳಲಾಯಿತು ಎಂದು ಎಸ್ಪಿ ರೋಹನ್ ಜಗದೀಶ್ ತಿಳಿಸಿದರು.