ಹಣ್ಣಿಕೇರಿ ಕೊಲೆ ಪ್ರಕರಣದ 8 ಜನರ ಬಂಧನ

KannadaprabhaNewsNetwork |  
Published : Apr 06, 2026, 03:15 AM IST
ಬೆಳಗಾವಿ  | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿ ಬೈಲಹೊಂಗಲ ತಾಲೂಕಿನ ಹಣ್ಣಿಕೇರಿ ಸಿದ್ಧೇಶ್ವರ ಜಾತ್ರೆಯಲ್ಲಿ ಮೆರವಣಿಗೆ ವೇಳೆ ನಡೆದಿದ್ದ ಕೊಲೆ ಪ್ರಕರಣ ಬೇಧಿಸಿರುವ ಬೆಳಗಾವಿ ಪೊಲೀಸರ ತಂಡ ಒಟ್ಟು 8 ಜನರನ್ನು ಬಂಧಿಸಿದೆ. ಅಲ್ಲದೇ, ಪರಾರಿಯಾಗಿರುವ ಇತರ ಆರೋಪಿಗಳ ಪತ್ತೆ ಕಾರ್ಯ ಪ್ರಗತಿಯಲ್ಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬೈಲಹೊಂಗಲ ತಾಲೂಕಿನ ಹಣ್ಣಿಕೇರಿ ಸಿದ್ಧೇಶ್ವರ ಜಾತ್ರೆಯಲ್ಲಿ ಮೆರವಣಿಗೆ ವೇಳೆ ನಡೆದಿದ್ದ ಕೊಲೆ ಪ್ರಕರಣ ಬೇಧಿಸಿರುವ ಬೆಳಗಾವಿ ಪೊಲೀಸರ ತಂಡ ಒಟ್ಟು 8 ಜನರನ್ನು ಬಂಧಿಸಿದೆ. ಅಲ್ಲದೇ, ಪರಾರಿಯಾಗಿರುವ ಇತರ ಆರೋಪಿಗಳ ಪತ್ತೆ ಕಾರ್ಯ ಪ್ರಗತಿಯಲ್ಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮಾ.30ರ ರಾತ್ರಿ 11.30ರ ಸುಮಾರಿಗೆ ಸಂಗನಗೌಡ ಪಾಟೀಲ(50), ದೇಮಪ್ಪ ಅಲಿಯಾಸ್ ಮುದಕಪ್ಪ ಬಳಗನ್ನವರ ಮನೆ ಎದುರು ಜಾತ್ರೆಯ ಮೆರವಣಿಗೆ ಹಿಂದಿನಿಂದ ಕುಣಿಯುತ್ತಿದ್ದನು. ಇಲ್ಲಿ ಯಾಕೆ ಕುಣಿಯುತ್ತಿದ್ದಿಯಾ? ಎಂದು ಪ್ರಶ್ನೆ ಮಾಡಿದ ಮುದುಕಪ್ಪ ಹಳೇ ರಾಜಕೀಯ ದ್ವೇಷವನ್ನಿಟ್ಟುಕೊಂಡು ಜಗಳ ತೆಗೆದಿದ್ದ. ಇದೇ ವಿಷಯಕ್ಕೆ ಮಾತಿಗೆ ಮಾತು ಬೆಳೆದು ಬಳಗನ್ನವರ ಕಡೆಯವರು ಸಂಗನಗೌಡನನ್ನು ಹೊಡೆದು ಕೊಲೆ ಮಾಡಿದ್ದ ಬಗ್ಗೆ ನೇಸರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ತಿಳಿಸಿದರು.

ಈ ಪ್ರಕರಣದ ತನಿಖೆ ಕೈಗೊಂಡಿದ್ದ ಬೈಲಹೊಂಗಲ ಠಾಣೆ ಪೊಲೀಸರ ತಂಡವು ಬಳಗನ್ನವರ ಕುಟುಂಬದ ದೇಮಪ್ಪ (49), ಮಂಜುನಾಥ(27), ರುದ್ರಪ್ಪ(36), ವಿಜಯ (26), ಸೂರಪ್ಪ(56), ನಾಗರಾಜ(26), ಲಕ್ಷ್ಮಣ(45) ಹಾಗೂ ಸಿದ್ದಪ್ಪ ಸಿಂಗಾಡಿ(21) ಎಂಬುವರನ್ನು ಬಂಧಿಸಿದ್ದಾರೆ. ಈ ಹಿಂದೆ ಸಂಗನಗೌಡನ ಸೋದರ ಮತ್ತು ಮುದಕಪ್ಪನ ಪತ್ನಿ ಒಂದೊಂದು ಅವಧಿಗೆ ಗ್ರಾಪಂ ಅಧ್ಯಕ್ಷರಾಗಿದ್ದರು. ಈ ವಿಚಾರವಾಗಿ ಗ್ರಾಪಂ ರಾಜಕೀಯಕ್ಕೆ ಸಂಬಂಧಿಸಿ ಇಬ್ಬರ ಮಧ್ಯೆ ಹಳೇ ದ್ವೇಷ ಇತ್ತು. ಇದೇ ಕೊಲೆಗೆ ಕಾರಣವಾಗಿದೆ ಎಂದು ತಿಳಿಸಿದರು.ಅಂತಾರಾಜ್ಯ ಬೈಕ್ ಕಳ್ಳರ ಬಂಧನ

ಬೆಳಗಾವಿ ಸಮರ್ಥ ನಗರದ ಲಕ್ಷ್ಮಣ ಕಣಬರಗಿ ಹಾಗೂ ಗೋಕಾಕ ತಾಲೂಕಿನ ಹಿರೇಹಟ್ಟಿಯ ಫಕೀರಪ್ಪ ಕರಿಗಾರ(25) ಎಂಬ ಇಬ್ಬರು ಅಂತಾರಾಜ್ಯ ಬೈಕ್ ಕಳ್ಳರನ್ನು ಬಂಧಿಸಿರುವ ಸಂಕೇಶ್ವರ ಠಾಣೆ ಪೊಲೀಸರು 27 ಬೈಕ್ ವಶಪಡಿಸಿಕೊಂಡಿದ್ದಾರೆ. ಕಾಗವಾಡ ತಾಲೂಕಿನ ಜುಗೂಳ ಗ್ರಾಮದ ಅಜೀತ ಅರಬೋಳೆ ಮಾ.31ರಂದು ಸಂಕೇಶ್ವರ ಪಟ್ಟಣದಲ್ಲಿ ಬೈಕ್ ಕಳ್ಳತನವಾದ ಬಗ್ಗೆ ದೂರು ನೀಡಿದ್ದರು. ತನಿಖೆಯಲ್ಲಿ ಇದೇ ಕಳ್ಳರು ಬೆಳಗಾವಿ ಮತ್ತು ಬೈಲಹೊಂಗಲ ನಗರದ ವಿವಿಧ ಠಾಣೆ, ಮಹಾರಾಷ್ಟ್ರದ ಚಂದಗಡ ವ್ಯಾಪ್ತಿಯಲ್ಲೂ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದು, ಒಟ್ಟು ₹ 18.30 ಲಕ್ಷ ಮೌಲ್ಯದ ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.ಕಳ್ಳನ ಬಂಧನ:ಗೋಕಾಕ ತಾಲೂಕಿನ ಮಮದಾಪುರ ಗ್ರಾಮದಲ್ಲಿ ಸಿದ್ಧಲಿಂಗಪ್ಪ ತಪಸಿ ಎಂಬುವವರ ರಿಪೇರಿ ನಡೆಯುತ್ತಿದ್ದ ಹಳೇ ಮನೆಯಿಂದ ₹ 7.10 ಲಕ್ಷ ಕಳ್ಳತನವಾದ ಬಗ್ಗೆ ಗೋಕಾಕ ಗ್ರಾಮೀಣ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ ಮನೆಯ ಕೆಲಸ ಮಾಡುತ್ತಿದ್ದ ಬಸವರಾಜ ಬಡಿಗೇರ(42) ಎಂಬಾತನನ್ನು ಬಂಧಿಸಲಾಗಿದೆ. ಸಿದ್ಧಲಿಂಗಪ್ಪ ತಮ್ಮ ಹಳೇ ಮನೆಯ ರಿಪೇರಿ ಹಿನ್ನೆಲೆ ಪಕ್ಕದ ಶೆಡ್‌ನಲ್ಲಿ ಮಲಗಿದ್ದರು. ಈ ವೇಳೆ ಹಳೇ ಮನೆಗೆ ನುಗ್ಗಿ ಟ್ರಂಕ್‌ನಲ್ಲಿಟ್ಟಿದ್ದ ಹಣವನ್ನು ಕಳವು ಮಾಡಿಕೊಂಡು ಹೋಗಿದ್ದಾಗಿ ಬಸವರಾಜ ಒಪ್ಪಿಕೊಂಡಿದ್ದಾನೆ. ಇದರಲ್ಲಿ ₹ 20 ಸಾವಿರ ಆತ ಖರ್ಚು ಮಾಡಿದ್ದು, ಉಳಿದ ₹ 6.90 ಲಕ್ಷ ವಶಪಡಿಕೊಳ್ಳಲಾಗಿದೆ ಎಂದು ತಿಳಿಸಿದರು.

---

ಬಾಕ್ಸ್....

ಗಡಿಪಾರು ಎಚ್ಚರಿಕೆ

ಹಣ್ಣಿಕೇರಿಯ ಅಪರಾಧ ಇತಿಹಾಸದ ಬಗ್ಗೆ ತಿಳಿದುಕೊಳ್ಳಲಾಗಿದೆ. ಇನ್ನು ಮುಂದೆ ಈ ಗ್ರಾಮದ ಮೇಲೆ ನಾನೇ ಖುದ್ದಾಗಿ ವಿಶೇಷ ನಿಗಾ ಇಡುತ್ತೇನೆ. ಇಲ್ಲಿ ಯಾವುದೇ ಸಣ್ಣ ಪುಟ್ಟ ಜಗಳವಾದರೂ ಇನ್ನು ಮುಂದೆ ಪ್ರಕರಣ ದಾಖಲಾಗುತ್ತದೆ. ಗ್ರಾಮದಲ್ಲಿ ಪದೇ ಪದೇ ಅಪರಾಧ ಚಟುವಟಿಕೆ ಮಾಡುವವರನ್ನು ಗಡಿಪಾರು ಸಹ ಮಾಡುತ್ತೇವೆ ಎಂದು ಎಸ್ಪಿ ರಾಮರಾಜನ್ ಎಚ್ಚರಿಕೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂಪ್ರದಾಯ ತಿರಸ್ಕರಿಸದಿದ್ರೆ ಪ್ರಗತಿಶೀಲತೆ ಪ್ರಬಲವಾಗದು
ಸೋಮಾರಿಗಳಾಗದೆ ಕ್ರಿಯಾಶೀಲರಾಗಲಿ