ಹುಬ್ಬಳ್ಳಿ:
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ವರ್ಷಕ್ಕೆ 4 ಲಕ್ಷ ಟನ್ ಗೋಡಂಬಿ ಬೆಳೆಯಲಾಗುತ್ತಿದ್ದು, ಈ ಪೈಕಿ 1.50 ಲಕ್ಷ ಟನ್ ಮಾತ್ರ ಕೈ ಸೇರುತ್ತಿದೆ. ಆಫ್ರಿಕಾ ಸೇರಿದಂತೆ ವಿವಿಧ ದೇಶಗಳಿಂದ 13 ಲಕ್ಷ ಟನ್ ಆಮದು ಮಾಡಿಕೊಳ್ಳಲಾಗುತ್ತಿದೆ. ಭಾರತದಲ್ಲಿ ಒಟ್ಟಾರೆ 20 ಲಕ್ಷ ಟನ್ನನಷ್ಟು ಗೋಡಂಬಿ ಸಂಸ್ಕರಣೆಯಾಗುತ್ತಿದೆ ಎಂದರು.
ಗೋಡಂಬಿ ಉದ್ಯಮದಲ್ಲಿ ವಾರ್ಷಿಕ ಅಂದಾಜು ₹ 30,000 ಕೋಟಿ ವಹಿವಾಟು ನಡೆಯುತ್ತಿದ್ದು, ದೇಶದಲ್ಲೇ ಹೆಚ್ಚಾಗಿ ಗೋಡಂಬಿ ಬೆಳೆಯುವಂತಾದರೆ ವಾರ್ಷಿಕ ವಹಿವಾಟು ಇನ್ನಷ್ಟು ಹೆಚ್ಚಲಿದೆ. 1 ಕೋಟಿ ಗೋಡಂಬಿ ಸಸಿ ನೆಟ್ಟರೆ 8ರಿಂದ 10 ವರ್ಷದಲ್ಲಿ 1 ಲಕ್ಷ ಟನ್ ಇಳುವರಿ ಸಿಗುತ್ತದೆ. ಇದರಿಂದ ಕೋಟ್ಯಾಂತರ ರೂಪಾಯಿ ವರಮಾನ ಸಿಗುತ್ತದೆ. ಪೇಜಾವರ ಮಠ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ನೆರವಿನೊಂದಿಗೆ 26 ಜಿಲ್ಲೆಗಳಲ್ಲಿ ಗೋಡಂಬಿ ಉತ್ಪಾದನೆಯ ಜಾಗೃತಿ ಮೂಡಿಸಿ, 13 ಲಕ್ಷ ಸಸಿಗಳನ್ನು ರೈತರಿಗೆ ಉಚಿತವಾಗಿ ವಿತರಿಸಲಾಗಿದೆ. ಶೇ. 80ರಷ್ಟುಇಳುವರಿಯೂ ಬಂದಿದೆ ಎಂದು ವಿವರಿಸಿದರು.ಭಾರತದಲ್ಲಿ ಗೋಡಂಬಿಗೆ ಉತ್ತಮ ಬೇಡಿಕೆಯಿದ್ದು, ಇದನ್ನು ಪೂರೈಸಲು ವಿದೇಶದಿಂದ ಶೇ. 75ರಷ್ಟು ಕಚ್ಚಾ ಗೋಡಂಬಿ ಆಮದು ಮಾಡಿಕೊಳ್ಳಲಾಗುತ್ತಿದೆ. ದೇಶದಲ್ಲಿ ಶೇ. 50ರಷ್ಟಾದರೂ ಗೋಡಂಬಿ ಬೆಳೆಯಲು ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಗೋಡಂಬಿ ಸಂಸ್ಕರಣೆ ಉದ್ಯಮದಲ್ಲಿ 12 ಲಕ್ಷಕ್ಕೂ ಹೆಚ್ಚು ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಈ ಉದ್ಯಮದಿಂದ ಪರೋಕ್ಷವಾಗಿ ಹಲವರು ಜೀವನ ನಡೆಸುತ್ತಿದ್ದಾರೆ. ಗೋಡಂಬಿ ಬೆಳೆಯಿಂದ ಸುತ್ತಲಿನ ವಾತಾವರಣ ತಂಪಾಗಿರುತ್ತದೆ. ಕಲ್ಪವೃಕ್ಷದಂತಿರುವ ಗೋಡಂಬಿ ಉತ್ಪಾದನೆ ಹಾಗೂ ಉದ್ಯಮದ ಉತ್ತೇಜನಕ್ಕಾಗಿ ರೈತರು, ಮಾರಾಟಗಾರರ ಸಭೆಯನ್ನು ವಿವಿಧೆಡೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.