ಕನ್ನಡಪ್ರಭ ವಾರ್ತೆ ಹನೂರು ತಾಲೂಕಿನ ಕೌದಳ್ಳಿ ಗ್ರಾಮದ ನಾಯಕರ ಬಡಾವಣೆಯ ನಾಲ್ಕನೇ ವಾರ್ಡಿನಲ್ಲಿ ಮಂಗಳವಾರ ತಡರಾತ್ರಿ ಸರಣಿ ಚಿನ್ನಾಭರಣ ನಗದು ಕಳ್ಳತನವಾಗಿರುವ ಬಗ್ಗೆ ವರದಿಯಾಗಿದೆ. ಹನೂರು ತಾಲೂಕಿನ ರಾಮಪುರ ಪೊಲೀಸ್ ಠಾಣಾ ಸರಹದ್ದಿನ ಕೌದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 2ನೇ ವಾರ್ಡಿನ ನಿವಾಸಿಗಳಾದ ಕರಿಯಪ್ಪ, ಶಿವ ಮಲ್ಲಮ್ಮ ಶಿವಣ್ಣ ಎಂಬವರ ಮನೆಯಲ್ಲಿ ಕಳ್ಳತನವಾಗಿದ್ದು ಇನ್ನು ಮೂರು ಮನೆಗಳಲ್ಲಿ ಕಳ್ಳತನ ಯತ್ನ ವಿಫಲವಾಗಿದೆ ಎಂದು ತಿಳಿದು ಬಂದಿದೆ.
ಶಿವಮಲ್ಲಮ್ಮ ಆಸ್ಪತ್ರೆಗೆ ತೆರಳಿದ್ದಾಗ, ಕರಿಯಪ್ಪ ಅವರ ಮನೆಯಲ್ಲಿ ಯಾರು ಇಲ್ಲದ ವೇಳೆ ಲಕ್ಷಾಂತರ ರುಪಾಯಿ ಬೆಲೆ ಬಾಳುವ ಚಿನ್ನಾಭರಣ ನಗದು ಕಳ್ಳತನ ಮಾಡಿ ಕಿಡಿಗೇಡಿಗಳು ಪರಾರಿಯಾಗಿದ್ದಾರೆ. ಈ ಬಗ್ಗೆ ಪೊಲೀಸರು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಳ್ಳತನ ಮಾಡಿ ಪರಾರಿಯಾಗಿರುವ ಬಗ್ಗೆ ಪತ್ತೆಹಚ್ಚಲು ಮುಂದಾಗಿದ್ದಾರೆ.
ಕೌದಳ್ಳಿ ಗ್ರಾಮದಲ್ಲಿ ಕಳ್ಳತನವಾಗಿರುವ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ರಾಮಪುರ ಪೊಲೀಸರು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ, ಬೆರಳಚ್ಚು ತಜ್ಞರ ಭೇಟಿ:ಬೆರಳಚ್ಚು ತಜ್ಞರ ತಂಡ, ವಿಧಿ ಪ್ರಯೋಗಾಲಯದ ಸಿಬ್ಬಂದಿ, ಶ್ವಾನದಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೌದಳ್ಳಿ ಗ್ರಾಮದಲ್ಲಿ ಸರಣಿ ಕಳ್ಳತನ ವಾಗಿರುವ ಬಗ್ಗೆ ಸುತ್ತಮುತ್ತಲಿನ ಗ್ರಾಮ ಸೇರಿದಂತೆ ವಿವಿಧ ಗ್ರಾಮದ ಜನತೆ ಒಂದೇ ಗ್ರಾಮದ ಬಡಾವಣೆಯಲ್ಲಿ ಸರಣಿ ಕಳ್ಳತನ ಆಗಿರುವ ಬಗ್ಗೆ ವಿಚಾರ ತಿಳಿಯುತ್ತಿದ್ದಂತೆ ನಿವಾಸಿಗಳು ಭಯಭೀತರಾಗಿದ್ದು, ಕೂಡಲೇ ಪೊಲೀಸರು ಕಳ್ಳರನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳಬೇಕು. ಮುಂದೆ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮಗಳಲ್ಲಿ ಹೆಚ್ಚಿನ ಸಿಬ್ಬಂದಿ ನೇಮಕ ಮಾಡಿ ಇಂತಹ ಕಳ್ಳತನ ಪ್ರಕರಣಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಕೌದಳ್ಳಿ ಗ್ರಾಮಸ್ಥರು ಪೊಲೀಸರಿಗೆ ಒತ್ತಾಯಿಸಿದ್ದಾರೆ.