ಹರಪನಹಳ್ಳಿ: ತುಂಗಭದ್ರಾ ನದಿ ಉಕ್ಕಿ ಹರಿದ ಪರಿಣಾಮ ತಾಲೂಕಿನ ಹಲುವಾಗಲು -ಗರ್ಭಗುಡಿ ಗ್ರಾಮಗಳ ಮಧ್ಯೆ ರಸ್ತೆ ಬಂದ್ ಆಗಿದೆ.ನದಿ ತೀರದಲ್ಲಿ ಹಲುವಾಗಲು, ಗರ್ಭಗುಡಿ, ತಾವರಗೊಂದಿ, ನಿಟ್ಟೂರು, ನಿಟ್ಟೂರು-ಬಸ್ಸಾಪುರ, ವಟ್ಲಹಳ್ಳಿ, ಕಡತಿ, ನಂದ್ಯಾಲ ಹೀಗೆ ಎಂಟು ಗ್ರಾಮಗಳು ಪ್ರವಾಹದ ಭೀತಿಯಲ್ಲಿವೆ. ದಿನದಿಂದ ದಿನಕ್ಕೆ ನದಿಯಲ್ಲಿ ನೀರು ಹೆಚ್ಚುತ್ತಿದೆ. ಇದರಿಂದ ಈ ಭಾಗದ ಜನತೆ ಆತಂಕದ ಕ್ಷಣ ಎದುರಿಸುತ್ತಿದ್ದಾರೆ.
ಪ್ರವಾಹ ಪರಿಸ್ಥಿತಿ ಎದುರಿಸಲು ನದಿ ಪಾತ್ರದ ಜನರಿಗೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಗ್ರಾಮವಾರು ನೋಡಲ್ ಅಧಿಕಾರಿಗಳನ್ನು ವಿಜಯನಗರ ಜಿಲ್ಲಾಧಿಕಾರಿ ನೇಮಕ ಮಾಡಿದ್ದಾರೆ.
ವಟ್ಲಹಳ್ಳಿ- ಲೋಕೋಪಯೋಗಿ ಎಇಇ, ಕಡತಿ -ಪುರಸಭಾ ಮುಖ್ಯಾಧಿಕಾರಿ, ನಂದ್ಯಾಲ -ಶಿಶು ಅಭಿವೃದ್ದಿ ಯೋಜನಾಧಿಕಾರಿ, ನಿಟ್ಟೂರು -ಹಡಗಲಿಯ ನರೇಗಾದ ಸಹಾಯಕ ನಿರ್ದೆಶಕ, ನಿಟ್ಟೂರು ಬಸ್ಸಾಪುರ -ಪಶು ಇಲಾಖೆಯ ಸಹಾಯಕ ನಿರ್ದೇಶಕ, ತಾವರಗೊಂದಿ -ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೆಶಕ, ಹಲುವಾಗಲು ಹಾಗೂ ಗರ್ಭಗುಡಿ ಗ್ರಾಮಗಳಿಗೆ ಬಿಇಒ ಅವರನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ.ಹಲುವಾಗಲುದಲ್ಲಿ ಕಾಳಜಿ ಕೇಂದ್ರ:
ತಾಲೂಕಿನ ಎಂಟು ಗ್ರಾಮಗಳಲ್ಲಿ ಸಹ ಕಾಳಜಿ ಕೇಂದ್ರ ತೆರೆಯಲು ಎಲ್ಲ ಸಿದ್ಧತೆ ಮಾಡಿಕೊಂಡಿದ್ದು, ನದಿ ತೀರದಲ್ಲಿ ಹಗಲು-ರಾತ್ರಿ ನಿಗಾ ವಹಿಸಲಾಗಿದೆ ಎಂದು ತಹಶೀಲ್ದಾರ ಬಿ.ವಿ.ಗಿರೀಶಬಾಬು ತಿಳಿಸಿದ್ದಾರೆ.