ಹಾವೇರಿ ಜಿಲ್ಲೆಯಲ್ಲಿ ನಿರಂತರ ಮಳೆಗೆ ಒಂದೇ ದಿನ 90 ಮನೆಗಳು ಧರೆಗೆ

KannadaprabhaNewsNetwork |  
Published : Jul 21, 2024, 01:20 AM IST
ಪೋಟೋ ಇಧೆ. | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಶನಿವಾರ ಮಳೆ ಇಳಿಮುಖವಾಗಿದೆ. ಆದರೆ, ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಬೀಳುತ್ತಿದ್ದ ಮಳೆಗೆ ಒಂದೇ ದಿನ 90 ಮನೆಗಳಿಗೆ ಹಾನಿಯಾಗಿದೆ. ಜಿಲ್ಲೆಯಲ್ಲಿ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, 10ಕ್ಕೂ ಹೆಚ್ಚು ಕಡೆ ಸೇತುವೆ ಮುಳುಗಿ ರಸ್ತೆ ಸಂಪರ್ಕ ಕಡಿತಗೊಂಡಿದೆ.

ಹಾವೇರಿ:ಜಿಲ್ಲೆಯಲ್ಲಿ ಶನಿವಾರ ಮಳೆ ಇಳಿಮುಖವಾಗಿದೆ. ಆದರೆ, ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಬೀಳುತ್ತಿದ್ದ ಮಳೆಗೆ ಒಂದೇ ದಿನ 90 ಮನೆಗಳಿಗೆ ಹಾನಿಯಾಗಿದೆ. ಜಿಲ್ಲೆಯಲ್ಲಿ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, 10ಕ್ಕೂ ಹೆಚ್ಚು ಕಡೆ ಸೇತುವೆ ಮುಳುಗಿ ರಸ್ತೆ ಸಂಪರ್ಕ ಕಡಿತಗೊಂಡಿದೆ.

ಸವಣೂರು ತಾಲೂಕು ಮಾದಾಪುರ ಗ್ರಾಮದಲ್ಲಿ ಮನೆ ಚಾವಣಿ ಕುಸಿದು ಶುಕ್ರವಾರ ಮೂವರು ಮೃತಪಟ್ಟಿರುವ ಘಟನೆ ನಡೆದಿರುವುದು ಜಿಲ್ಲೆಯ ಜನರನ್ನು ಕಂಗೆಡಿಸಿದೆ. ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಬೀಳುತ್ತಿರುವ ಮಳೆಯಿಂದ ಕಚ್ಚಾ ಮನೆಗಳು ಬೀಳತೊಡಗಿವೆ. ಶುಕ್ರವಾರ ಒಂದೇ ದಿನ ಜಿಲ್ಲೆಯಲ್ಲಿ 90 ಮನೆಗಳಿಗೆ ಹಾನಿಯಾಗಿದೆ. ಗುಡಿಸಲು, ಮಣ್ಣಿನ ಮನೆಗಳಲ್ಲಿ ವಾಸಿಸುತ್ತಿರುವ ಬಡ ಕುಟುಂಬಗಳು ಆತಂಕದಲ್ಲೇ ದಿನ ಕಳೆಯುತ್ತಿದ್ದಾರೆ.

243 ಮನೆ ಹಾನಿ: ಜಿಲ್ಲೆಯಲ್ಲಿ ಕಳೆದ ಏಪ್ರಿಲ್‌ನಿಂದ ಇಲ್ಲಿಯವರೆಗೆ 243 ಮನೆಗಳಿಗೆ ಹಾನಿಯಾಗಿದೆ. ಶುಕ್ರವಾರವೇ 90 ಮನೆಗಳಿಗೆ ಹಾನಿಯಾಗಿದ್ದರೆ, ಜು. 11ರಿಂದ ಜು. 20ರ ವರೆಗೆ 154 ಮನೆಗಳು ಬಿದ್ದಿವೆ. ಹಾವೇರಿ ತಾಲೂಕಿನಲ್ಲಿ 6, ಬ್ಯಾಡಗಿ 10, ರಾಣಿಬೆನ್ನೂರು 12, ಹಿರೇಕೆರೂರು ಮತ್ತು ರಟ್ಟೀಹಳ್ಳಿ ತಾಲೂಕಿನಲ್ಲಿ ತಲಾ 48 ಮನೆಗಳು ಹಾನಿಯಾಗಿವೆ. ಸವಣೂರು 14, ಶಿಗ್ಗಾಂವಿ 73 ಹಾಗೂ ಹಾನಗಲ್ಲ 32 ಮನೆಗಳು ಹಾನಿಯಾಗಿವೆ. ಇವುಗಳ ಪೈಕಿ ಒಂದು ಮನೆ ಸಂಪೂರ್ಣ ಹಾನಿಯಾಗಿದ್ದರೆ, ನಾಲ್ಕು ಮನೆಗಳಿಗೆ ತೀವ್ರ ಹಾನಿಯಾಗಿದ್ದು, ಉಳಿದವುಗಳಿಗೆ ಭಾಗಶಃ ಹಾನಿಯಾಗಿವೆ.

ಸಂಪರ್ಕ ಕಡಿತ: ಜಿಲ್ಲೆಯಲ್ಲಿ ಶನಿವಾರ ಒಂದೆರಡು ಸಲ ತುಂತುರು, ಸಾಧಾರಣ ಮಳೆಯಾಗಿದ್ದು ಬಿಟ್ಟರೆ ಉಳಿದ ಅವಧಿ ವಿರಾಮ ನೀಡಿದೆ. ಆದರೆ, ಜಿಲ್ಲೆಯಲ್ಲಿ ಹರಿದಿರುವ ತುಂಗಭದ್ರಾ, ವರದಾ, ಧರ್ಮಾ, ಕುಮದ್ವತಿ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ನದಿ ಪಾತ್ರದ ಜನರಿಗೆ ನೆರೆ ಭೀತಿ ಎದುರಾಗಿದೆ. ಸಮೀಪದ ದೇವಗಿರಿ ಬಳಿ ವರದಾ ನದಿ ತೀರದ ಈಶ್ವರ ದೇಗುಲ ಮುಳುಗಡೆಯಾಗಿದೆ. ವರದಾ ನದಿಯಿಂದ ಕೂಡಲ-ನಾಗನೂರು ಸೇತುವೆ ಮುಳುಗಡೆಯಾಗಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಕರ್ಜಗಿ ಚಿಕ್ಕಮುಗದೂರ ನಡುವಿನ ಸೇತುವೆ ಮುಳುಗಡೆಯಾಗಿದೆ. ಕಳಸೂರು-ಕೋಳೂರು, ಕೋಣನತಂಬಗಿ-ಹಿರೇಮರಳಿಹಳ್ಳಿ ಸೇತುವೆ ಮುಳುಗಡೆಯಾಗಿದೆ. ಹಾನಗಲ್ಲ ತಾಲೂಕಿನ ಆಡೂರು-ತುಮರಿಕೊಪ್ಪ ಮತ್ತು ಬಾಳಂಬೀಡ-ಲಕಮಾಪುರ ನಡುವೆ ರಸ್ತೆ ಮೇಲೆ ನದಿ ನೀರು ಹರಿಯುತ್ತಿದ್ದು ಸಂಪರ್ಕ ಕಡಿತಗೊಂಡಿದೆ.

ರಾಣಿಬೆನ್ನೂರು ತಾಲೂಕಿನ ಮುಷ್ಟೂರು-ಹೊಳೆಅನ್ವೇರಿ ಸೇತುವೆ, ಅಂತರವಳ್ಳಿ-ಲಿಂಗದಹಳ್ಳಿ ಸೇತುವೆ, ಹಿರೇಮಾಗನೂರು-ಕೋಣನತಲಿ ನಡುವಿನ ಸೇತುವೆ ಮುಳುಗಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ರಟ್ಟೀಹಳ್ಳಿ ಯಲಿವಾಳ ನಡುವೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಮುಳುಗಡೆಯಾದ ಸೇತುವೆಗಳಲ್ಲಿ ಸಾರ್ವಜನಿಕ ಸಂಚಾರ ಸಂಪೂರ್ಣ ನಿಷೇಧಿಸಲಾಗಿದ್ದು, ಪೊಲೀಸರು ಬ್ಯಾರಿಕೇಡ್‌ ಹಾಕಿದ್ದಾರೆ. ಆದರೂ ಕೆಲವರು ಅಪಾಯ ಲೆಕ್ಕಿಸದೇ ಮುಳುಗಡೆಯಾಗಿರುವ ಸೇತುವೆ ಮೇಲೆಯೇ ಬೈಕ್‌ ಓಡಿಸುವುದು, ಸೇತುವೆ ಮೇಲಿಂದ ಜಿಗಿದು ಈಜುವ ಹುಚ್ಚಾಟ ನಡೆಸಿರುವುದು ನಡೆದಿದೆ.

ಬೆಳೆಗಳಿಗೆ ಕಂಟಕ:ಕಳೆದ ತಿಂಗಳಷ್ಟೇ ಜಿಲ್ಲೆಯಲ್ಲಿ ಮುಂಗಾರು ಬಿತ್ತನೆಯಾಗಿದ್ದು, ಕೆಲವು ಕಡೆ ವಿಳಂಬವಾಗಿ ಬಿತ್ತನೆಯಾಗಿದೆ. ಮೇ ತಿಂಗಳ ಅಂತ್ಯ, ಜೂನ್ ಆರಂಭದಲ್ಲಿ ಬಿತ್ತಿದ್ದ ಬೆಳೆಗಳು ಬೆಳೆದಿದ್ದು, ಈಗ ಬಿದ್ದ ಮಳೆಯಿಂದ ಅನುಕೂಲವಾಗಿದೆ. ಆದರೆ, ಕೆಲ ದಿನಗಳ ಹಿಂದೆ ಬಿತ್ತನೆ ಮಾಡಿದ್ದ ಕಡೆಗಳಲ್ಲಿ ನಿರಂತರ ಮಳೆಯಿಂದ ಸಸಿಗಳು ಕೊಳೆಯತೊಡಗಿವೆ. ಅದರಲ್ಲೂ ಹತ್ತಿ ಗಿಡಗಳ ಬೆಳವಣಿಗೆ ಕುಂಠಿತವಾಗುತ್ತಿದೆ. ಜತೆಗೆ, ಕೀಟ ಮತ್ತು ರೋಗ ಬಾಧೆಗಳೂ ಕಾಣಿಸಿಕೊಳ್ಳುತ್ತಿವೆ ಎಂದು ರೈತರು ಹೇಳುತ್ತಿದ್ದಾರೆ.

ನಿರಂತರವಾಗಿ ಬೀಳುತ್ತಿರುವ ಮಳೆಯಿಂದ ಕಚ್ಚಾ ಮನೆಗಳು ತೇವಗೊಂಡು ಬೀಳುವ ಅಪಾಯವಿರುತ್ತದೆ. ಆದ್ದರಿಂದ ಜನರು ಮುನ್ನೆಚ್ಚರಿಕೆ ವಹಿಸಬೇಕು. ಅಂತಹ ಮನೆಗಳಲ್ಲಿ ವಾಸಿಸಬಾರದು. ಶಾಲೆಗಳಲ್ಲೂ ಮಕ್ಕಳ ಸುರಕ್ಷತೆಗೆ ಗಮನ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಹೇಳಿದರು.

PREV

Recommended Stories

ಶಾಸಕರ ಭರವಸೆಗೆ ಧರಣಿ ಹಿಂಪಡೆದ ಚಲವಾದಿ ಸಮಾಜ
ರಾಜ್ಯಾದ್ಯಂತ ಏಕರೂಪ ಬೆಲೆ ನಿಗದಿಗೊಳಿಸಲು ಒತ್ತಾಯ