ಸಂಡೂರು: ಜನತೆಗೆ ಕಾಂಗ್ರೆಸ್ ಪಕ್ಷ ಅನೇಕ ಭರವಸೆ ನೀಡಿ ಅಧಿಕಾರಕ್ಕೆ ಬಂದಿದೆ. ಆದರೆ, ಅಧಿಕಾರಕ್ಕೆ ಬಂದ ೧೫ ತಿಂಗಳಲ್ಲೇ ಜನತೆ ಆ ಪಕ್ಷದ ಮೇಲಿನ ಭರವಸೆ ಕಳೆದುಕೊಂಡಿದ್ದಾರೆ. ಕಾಂಗ್ರೆಸ್‌ನದ್ದು ಭ್ರಷ್ಟ, ಬೇಜವಾಬ್ದಾರಿ ಸರ್ಕಾರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಟೀಕಿಸಿದರು.
ತಾಲೂಕಿನ ತಾರಾನಗರದ ಬಳಿಯ ವಂಡರ್ ವ್ಯಾಲಿ ರೆಸಾರ್ಟ್‌ನಲ್ಲಿ ಶನಿವಾರ ನಡೆದ ಬಿಜೆಪಿಯ ಬಳ್ಳಾರಿ ಜಿಲ್ಲಾ ವಿಶೇಷ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ವಿರುದ್ಧ ಬಿಜೆಪಿ ಎರಡು ತಿಂಗಳಿಂದ ಹೋರಾಟ ನಡೆಸಿದೆ. ನಿಗಮದಲ್ಲಿನ ₹೧೮೭ ಕೋಟಿಯನ್ನು ರಾಜ್ಯ ಹಾಗೂ ಪಕ್ಕದ ತೆಲಂಗಾಣ ರಾಜ್ಯದ ಚುನಾವಣೆಗಾಗಿ ದುರ್ಬಳಕೆ ಮಾಡಲಾಗಿದೆ. ಹಗರಣ ಹೊರಬಂದಾಗ ಸಿಎಂ ಸಿದ್ದರಾಮಯ್ಯ ಯಾವುದೇ ಭ್ರಷ್ಟಾಚಾರ ನಡೆದೇ ಇಲ್ಲ ಎಂದರು. ಭ್ರಷ್ಟಾಚಾರ ನಡೆದಿಲ್ಲವೆಂದಲ್ಲಿ ಸಚಿವ ನಾಗೇಂದ್ರ ಅವರಿಂದ ರಾಜೀನಾಮೆ ಏಕೆ ಪಡೆದರು? ವಾಲ್ಮೀಕಿ ನಿಗಮದಲ್ಲಿ ನಡೆದ ಭ್ರಷ್ಟಾಚಾರವನ್ನು ಎರಡು ತಿಂಗಳ ನಂತರ ಸಿಎಂ ಒಪ್ಪಿಕೊಂಡಿದ್ದು, ಅದನ್ನು ಅಧಿಕಾರಿಗಳು ಮಾಡಿದ್ದು ಎನ್ನುತ್ತಿದ್ದಾರೆ. ಸಿಎಂ, ಸಚಿವರ ಅನುಮತಿ ಇಲ್ಲದೇ ನಿಗಮದ ಹಣ ದುರ್ಬಳಕೆ ಸಾಧ್ಯವಿಲ್ಲ. ಅವರ ಅನುಮತಿ ಇಲ್ಲದೇ ಹಗರಣ ನಡೆದಿದ್ದರೆ, ಇದು ಸಿಎಂ ಬೇಜವಾಬ್ದಾರಿ ತೋರಿಸುತ್ತದೆ. ಸಿಎಂ ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅವರು ರಾಜೀನಾಮೆ ನೀಡುವ ದಿನ ದೂರವಿಲ್ಲ ಎಂದರು.
ಗೊಡ್ಡು ಬೆದರಿಕೆಗೆ ಬಗ್ಗಲ್ಲ:ವಾಲ್ಮೀಕಿ ನಿಗಮದಲ್ಲಿನ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ನಡೆಸುತ್ತಿರುವ ಹೋರಾಟದಿಂದ ಗಾಬರಿಗೊಂಡ ಸಿಎಂ ಬಿಜೆಪಿಗೆ ಗೊಡ್ಡು ಬೆದರಿ ಒಡ್ಡುತ್ತಿದ್ದಾರೆ. ಬಿಜೆಪಿ ಕಾಲದ ಹಗರಣಗಳನ್ನು ತನಿಖೆಗೆ ಒಪ್ಪಿಸುವುದಾಗಿ ಹೇಳಿಕೆ ನೀಡುವ ಮೂಲಕ ಬಿಜೆಪಿ ವಿರುದ್ಧ ಗದಾಪ್ರಹಾರ ನಡೆಸಲು ಮತ್ತು ದಮ್ಕಿ ಹಾಕಲು ಮುಂದಾಗಿದ್ದಾರೆ. ಸಿದ್ದರಾಮಯ್ಯ ಅವರ ಸವಾಲನ್ನು ಹಾಗೂ ಪಂಥಾಹ್ವಾನವನ್ನು ಸ್ವೀಕರಿಸಲು ಬಿಜೆಪಿ ಸಿದ್ಧವಿದೆ ಎಂದರು.
ಬಿಜೆಪಿ ಆಡಳಿತಾವಧಿಯಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದಾಗ ಸಂಡೂರು ಕ್ಷೇತ್ರದಲ್ಲಿ ₹೧೧೦ ಕೋಟಿ ವೆಚ್ಚದಲ್ಲಿ ಸಂಡೂರು-ಹೊಸಪೇಟೆ-ತೋರಣಗಲ್ಲು-ಕೂಡ್ಲಿಗಿ ರಸ್ತೆ ಅಭಿವೃದ್ಧಿಪಡಿಸಲಾಗಿತ್ತು. ೬೦ ಗ್ರಾಮಗಳಿಗೆ ಕುಡಿಯುವ ನೀರನ್ನು ಒದಗಿಸಲು ₹೧೩೧ ಕೋಟಿ ವೆಚ್ಚಮಾಡಲಾಗಿತ್ತು. ₹೧೩೪೩ ಕೋಟಿ ವೆಚ್ಚದಲ್ಲಿ ತಾಲೂಕಿನ ೭೪ ಕೆರೆಗಳಿಗೆ ತುಂಗಭದ್ರಾ ನದಿ ನೀರು ತುಂಬಿಸಲು ಡಿಪಿಆರ್ ರೂಪಿಸಲಾಗಿತ್ತು. ಈ ಬಾರಿಯ ಸಂಡೂರು ಉಪ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಲು ಎಲ್ಲರೂ ಶಪಥ ಮಾಡೋಣ. ಇಲ್ಲಿ ಯಾರೇ ಸ್ಪರ್ಧಿಸಲಿ ಅವರದ್ದು ಕಮಲದ ಹೂವು, ಅವರು ನರೇಂದ್ರ ಮೋದಿ ಅಭ್ಯರ್ಥಿ ಎಂದು ತಿಳಿದು ಗೆಲ್ಲಿಸಬೇಕು. ಜಿಲ್ಲೆಯಲ್ಲಿನ ಎಲ್ಲ ಕ್ಷೇತ್ರಗಳಲ್ಲಿ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಜಿಲ್ಲೆಯನ್ನು ಮತ್ತೊಮ್ಮೆ ಭದ್ರಕೋಟೆಯನ್ನಾಗಿಸೋಣ ಎಂದರು.ಸಂಸದ ಗೋವಿಂದ ಕಾರಜೋಳ, ವಿಪ ಸದಸ್ಯರಾದ ಎನ್. ರವಿಕುಮಾರ್, ಕೆ.ಎಸ್. ನವೀನ್, ಮಾಜಿ ಸಂಸದ ವೈ. ದೇವೇಂದ್ರಪ್ಪ, ಮಾಜಿ ಶಾಸಕ ಜಿ.ಸೋಮಶೇಖರರೆಡ್ಡಿ, ಪರಿಶಿಷ್ಟ ಪಂಗಡ ಮೋರ್ಚಾದ ರಾಜ್ಯಾಧ್ಯಕ್ಷ ಬಂಗಾರು ಹನುಮಂತು, ಜಿಲ್ಲಾ ಅಧ್ಯಕ್ಷ ಅನಿಲ್‌ನಾಯ್ಡು ಮೋಕ, ರಾಜ್ಯ ಪ್ರಧಾನ ಕಾರ್ಯದರ್ಶಿ ಸುನಿಲ್‌ಕುಮಾರ್, ಸಂಡೂರು ಮಂಡಲ ಅಧ್ಯಕ್ಷ ನಾನಾಸಾಹೇಬ್ ನಿಕ್ಕಂ, ಮುಖಂಡರಾದ ಡಿ. ಕೃಷ್ಣಪ್ಪ, ಕೆ.ಎಸ್. ದಿವಾಕರ್, ಗುರುಲಿಂಗನಗೌಡ, ರಾಮಲಿಂಗಪ್ಪ, ವಿಜಯಲಕ್ಷ್ಮಿ, ರಾಮಕೃಷ್ಣ, ವೆಂಕಟೇಶ್, ದಮ್ಮೂರು ಶೇಖರ್, ದರೋಜಿ ರಮೇಶ್, ಆರ್.ಟಿ. ರಘುನಾಥ್, ಡಿ. ಪ್ರಹ್ಲಾದ್ ಉಪಸ್ಥಿತರಿದ್ದರು. ಜಿಲ್ಲಾ ಉಪಾಧ್ಯಕ್ಷ ಜಿ.ಟಿ. ಪಂಪಾಪತಿ ಸ್ವಾಗತಿಸಿದರು. ಉಡೇದ್ ಸುರೇಶ್ ನಿರೂಪಿಸಿದರು.