ಕನ್ನಡಪ್ರಭ ವಾರ್ತೆ ನಂಜನಗೂಡು ಸುತ್ತೂರು ಶ್ರೀಮಠ ಕುಸ್ತಿ ಕಲೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದು, ಪ್ರತಿವರ್ಷ ಜಾತ್ರೆಯ ಸಂದರ್ಭದಲ್ಲಿ ನಡೆಸುವ ಕುಸ್ತಿ ಪಂದ್ಯಾವಳಿ ಜಿಲ್ಲೆಯಲ್ಲಿ ಹೆಸರುವಾಸಿಯಾಗಿದೆ ಎಂದು ಶಾಸಕ ರಿಜ್ವಾನ್ ಹರ್ಷದ್ ಹೇಳಿದರು.ತಾಲೂಕಿನ ಸುತ್ತೂರು ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದಲ್ಲಿ ಸೋಮವಾರ 80 ಜೊತೆ ಕುಸ್ತಿ ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಮೈಸೂರು ಮಹಾರಾಜರ ಕಾಲದಲ್ಲಿ ಕುಸ್ತಿ ಕಲೆಗೆ ಹೆಚ್ಚಿನ ಪ್ರೋತ್ಸಾಹ ಸಿಗುತ್ತಿತ್ತು, ಧರ್ಮ ,ಜಾತಿಗಳ ಬೇಧವಿಲ್ಲದೆ ಪೈನ್ವಾರುಗಳು ಉತ್ಸಾಹದಿಂದ ಸುತ್ತೂರಿನಲ್ಲಿ ನಡೆಯುವ ಕುಸ್ತಿ ಪಂದ್ಯದಲ್ಲಿ ಭಾಗವಹಿಸುತ್ತಾರೆ, ನಮ್ಮ ಶಿವಾಜಿನಗರ ಕ್ಷೇತ್ರದಲ್ಲಿ ಒಂದು ಕೋಟಿ ಅನುದಾನ ಪಡೆದು ಕುಸ್ತಿ ಮಾಡುವ ಪೈಲ್ವಾನರುಗಳಿಗೆ ಅಗತ್ಯ ಸೌಲಭ್ಯ ಒದಗಿಸಿಕೊಡುತ್ತಿದ್ದೇನೆ, ಯುವಕರು ಮಾದಕ ವಸ್ತುಗಳ ಚಟಕ್ಕೆ ಬಲಿಯಾಗುತ್ತಿದ್ದಾರೆ, ಪ್ರಾಚೀನ ಕಲೆಯಾದ ಕುಸ್ತಿ ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ಯುವಕರು ಉತ್ತಮ ದೇಹದಾಢ್ಯ, ಆರೋಗ್ಯ ಹೊಂದಬಹುದಾಗಿದೆ ಎಂದು ಹೇಳಿದರು.ಶಾಸಕ ತನ್ವೀರ್ ಸೇಠ್ ಮಾತನಾಡಿ, ಕುಸ್ತಿ ಕಲೆಯ ಮೈಸೂರು ಭಾಗದಲ್ಲಿ ರಾಜ ಮಹಾರಾಜರ ಕಾಲದಿಂದಾಗಿ ಹೆಸರುವಾಸಿಯಾಗಿ ಜನಮನ್ನಣೆ ಗಳಿಸಿದೆ, ಈ ಭಾಗದ ಕುಸ್ತಿ ಪೈಲ್ವಾನರು ದೇಶ ವಿದೇಶದಲ್ಲಿ ಪ್ರಖ್ಯಾತಿಯನ್ನು ಗಳಿಸಿದ್ದಾರೆ. ಕುಸ್ತಿ ಪಂದ್ಯಾವಳಿಯಿಂದಾಗಿ ಯುವಕರು ದುಶ್ಚಟಗಳಿಂದ ದೂರವಿದ್ದು, ಆರೋಗ್ಯಕರ ಸ್ವಾಸ್ಥ್ಯ ಸಮಾಜವನ್ನು ನಿರ್ಮಿಸಬಹುದಾಗಿದೆ ಎಂದರು.ಸುತ್ತೂರು ಕುಮಾರ್ ಪ್ರಶಸ್ತಿಗಾಗಿ ಕ್ಯಾತನಹಳ್ಳಿಯ ಪೈ. ಪರಮೇಶ್ ಹಾಗೂ ಮೈಶುರಿನ ಇಸ್ಮಿಯಾನ್ ಗರಡಿಯ ಜೈದ್ ಖುರೈಸಿ ನಡುವೆ 3 ಗಂಟೆಗಳಿಗೂ ಹೆಚ್ಚು ಕಾಲ ನಡೆದ ಸೋಲು, ಗೆಲ್ಲುವ ತನಕ (ಮಾರ್ಫಿಟ್ ) ಕುಸ್ತಿಯಲ್ಲಿ ಮೊದಲಿನಿಂದಲೂ ಪಂದ್ಯದಲ್ಲಿ ಹಿಡಿತ ಸಾಧಿಸಿದ್ದ ಪೈ.ಪರಮೇಶ್ –ಜೈದ್ ಕುರೈಸಿಯನ್ನು ಮಣಿಸಿ ಸುತ್ತೂರು ಕುಮಾರ್ ಪ್ರಶಸ್ತಿ ಪಡೆದರು.ಸುತ್ತೂರು ಕಿಶೋರ್ ಪ್ರಶಸ್ತಿಗಾಗಿ ನಂಜನಗೂಡಿನ ಪೈ. ಶಿವರಾಜು- ಹೊಸಕೋಟೆಯ ಪೈ. ಕುಮಾರ ನಾಯಕ ನಡುವೆ ನಡೆದ ಹಣಾಹಣಿಯಲ್ಲಿ ಅಂತಿಮವಾಗಿ ಪೈ. ಶಿವರಾಜು , ಪೈ. ಕುಮಾರ ನಾಯಕರನ್ನು ಸೋಲಿಸಿ ಸುತ್ತೂರು ಕಿಶೋರ್ ಪ್ರಶಸ್ತಿ ಪಡೆದರು.ಸುತ್ತೂರು ಕೇಸರಿ ಪ್ರಶಸ್ತಿ ಪ್ರಶಸ್ತಿಗಾಗಿ ಮೈಸೂರಿನ ನಜರ್ ಬಾದ್ ಗರಡಿಯ ಚೇತನ್ ಗೌಡ- ಗಾಂಜಾಂ ನ ಪೈ. ಮಂಜು ನಡುವೆ ಪಂದ್ಯ ನಡೆಯಿತು.ಹರಿಯಾಣದ ಸೋನಾಪತ್ ಅಖಾಡದ ಪೈ. ಹರ್ಷಕುಮಾರ್ ಚಾದರಿ ಹಾಗೂ ಮಧ್ಯಪ್ರದೇಶದ ಪೈ. ಮುದಾಸಿರ್ ಖಾನ್ ನಡುವೆ ನಡೆದ ಪಂದ್ಯದಲ್ಲಿ ಪೈ. ಹರ್ಷಕುಮಾರ್ ಚಾದರಿ ಗೆಲುವಿನ ನಗೆ ಬೀರಿದರು.ಪುಣೆಯ ಪೈ. ಅವಿನಾಶ್ ಲಕ್ಷಣ್ ಗವಾಡೇ- ಮಹಾರಾಷ್ಟ್ರದ ಸಾಂಗ್ಲಿಯ ಪೈ. ನಾಥ ಲಾವ ಪವಾರ್ ನಡುವೆ ನಡೆದ ಪಂದ್ಯದಲ್ಲಿ ಮಹಾರಾಷ್ಟ್ರದ ಸಾಂಗ್ಲಿಯ ಪೈ. ನಾಥಲಾವ ಪವಾರ್ ಜಯಶಾಲಿಯಾದರು. ಸಮಾರಂಭದಲ್ಲಿ ಶಾಸಕ ದರ್ಶನ್ ಧ್ರುವನಾರಾಯಣ ಇದ್ದರು.