ಭೂಕುಸಿತ, ಕಡಲುಕೊರೆತ ತಡೆಗೆ ₹ 800 ಕೋಟಿ ಅನುದಾನ

KannadaprabhaNewsNetwork |  
Published : Jul 23, 2025, 02:01 AM IST
ದೇವಿಮನೆ ಘಟ್ಟದಲ್ಲಿ ಭೂಕುಸಿತ ಪ್ರದೇಶವನ್ನು ಸಚಿವರು ವೀಕ್ಷಿಸಿದರು  | Kannada Prabha

ಸಾರಾಂಶ

ಈ ಭಾಗದಲ್ಲಿ ತಡೆಗೋಡೆ ನಿರ್ಮಿಸುವ ಕಾಮಗಾರಿಗಾಗಿ ₹500 ಕೋಟಿ ಮೀಸಲಿಡಲಾಗುತ್ತಿದೆ

ಕಾರವಾರ: ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಭೂಕುಸಿತ, ಕಡಲ ಕೊರೆತ ಸಮಸ್ಯೆ ಎದುರಿಸುತ್ತಿರುವ ಜಿಲ್ಲೆಗಳಲ್ಲಿ ತುರ್ತು ಕಾಮಗಾರಿ ಕೈಗೊಳ್ಳಲು ₹800 ಕೋಟಿ ಅನುದಾನಕ್ಕೆ ಶೀಘ್ರವೇ ಅನುಮೋದನೆ ನೀಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಮಂಗಳವಾರ ಉತ್ತರ ಕನ್ನಡ ಜಿಲ್ಲೆಯ ಭೂ ಕುಸಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕುಮಟಾದಲ್ಲಿ ಅವರು ಮಾತನಾಡಿದರು.

ರಾಜ್ಯದ 6 ಜಿಲ್ಲೆಗಳಲ್ಲಿ ಭೂಕುಸಿತ ಸಮಸ್ಯೆ ತೀವ್ರವಾಗಿದ್ದು, ಈ ಭಾಗದಲ್ಲಿ ತಡೆಗೋಡೆ ನಿರ್ಮಿಸುವ ಕಾಮಗಾರಿಗಾಗಿ ₹500 ಕೋಟಿ ಮೀಸಲಿಡಲಾಗುತ್ತಿದೆ ಎಂದರು.

ರಾಜ್ಯದ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಕಡಲು ಕೊರೆತ ಸಮಸ್ಯೆ ತಡೆಗೆ ಪ್ರತಿ ಜಿಲ್ಲೆಗೆ ನೂರು ಕೋಟಿಯಂತೆ ₹300 ಕೋಟಿ ಒದಗಿಸಲಾಗುವುದು, ತಡೆಗೋಡೆ ನಿರ್ಮಾಣ ಸೇರಿದಂತೆ ಪ್ರಕೃತಿ ವಿಕೋಪ ತಡೆಗೆ ಕೇಂದ್ರ ಸರ್ಕಾರದ ಹಣಕಾಸು ಇಲಾಖೆಯಿಂದ ಅನುದಾನ ಬಿಡುಗಡೆಗೆ ವಿಳಂಬವಾಗಿದೆ. ಈ ಕುರಿತಂತೆ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ. ಕೇಂದ್ರದ ಅನುದಾನ ಬಿಡುಗಡೆ ವಿಳಂಬವಾಗಿರುವುದರಿಂದ ತಡೆಗೋಡೆ ಹಾಗೂ ಪ್ರಕೃತಿ ವಿಕೋಪದ ಕಾಮಗಾರಿ ನಡೆಸಲು ವಿಳಂಬವಾಗಿದೆ ಎಂದರು.

ಉತ್ತರ ಕನ್ನಡ ಜಿಲ್ಲೆಯಲ್ಲಿನ 136ಕ್ಕೂ ಹೆಚ್ಚು ಮಳೆಮಾಪನ ಯಂತ್ರಗಳು ಹಾಳಾಗಿದೆ. ರಾಜ್ಯದ ಸುಮಾರು 1,500 ಸ್ಥಳಗಳಲ್ಲಿ ಮಳೆ ಮಾಪನ ಕೇಂದ್ರಗಳು ದುಸ್ಥಿತಿಯಲ್ಲಿವೆ. ಅವುಗಳನ್ನು ದುರಸ್ತಿ ಮಾಡಿಸುವ ಕೆಲಸ ನಡೆಯಲಿದೆ. ಯಂತ್ರಗಳು ಸಂಪೂರ್ಣ ಹಾಳಾಗಿದ್ದರೆ ಹೊಸ ಯಂತ್ರಗಳ ಅಳವಡಿಕೆ ನಡೆಯಲಿದೆ ಎಂದರು.

ಕಂದಾಯ ದಾಖಲೆ ಗಣಕೀಕರಣ ಮಾಡಲಾಗುತ್ತಿದೆ. ಜನರಿಗೆ ದಾಖಲೆಗಳು ಸುಲಭವಾಗಿ ಸಿಗುವಂತೆ ಮಾಡಲಾಗುತ್ತಿದೆ. ಮುಂದಿನ 6 ತಿಂಗಳ ಒಳಗೆ ರಾಜ್ಯದ ಎಲ್ಲ ಕಂದಾಯ ದಾಖಲೆಗಳನ್ನು ಸಂಪೂರ್ಣ ಗಣಕೀಕರಣ ಮಾಡುವ ಗುರಿ ಹೊಂದಲಾಗಿದೆ ಎಂದ ಅವರು, ರಾಜ್ಯದಲ್ಲಿ ಪೌತಿ ಖಾತೆ ಆಂದೋಲನ ನಡೆಸಲಾಗುತ್ತಿದ್ದು ಮೃತರ ಅಧಿಕೃತ ವಾರಸುದಾರರಿಗೆ ಪಹಣಿ ದಾಖಲೆ ವರ್ಗಾವಣೆ ಮಾಡಲಾಗುವುದು ಎಂದರು.

ಕಂದಾಯ ಸಚಿವರು ಶಿರಸಿ ತಾಲೂಕಿನ ಬೆಣ್ಣೆಹೊಳೆ ಸೇತುವೆ, ಭೂಕುಸಿತ ಸಂಭವಿಸಿರುವ ಕುಮಟಾ ತಾಲೂಕಿನ ದೇವಿಮನೆ ಘಟ್ಟ ಪ್ರದೇಶದಲ್ಲಿ ಪರಿಶೀಲನೆ ನಡೆಸಿದರು. ದೇವಿಮನೆ ಘಟ್ಟದಲ್ಲಿ ತಡೆಗೋಡೆ ನಿರ್ಮಿಸದೆ ಹೆದ್ದಾರಿ ಕಾಮಗಾರಿ ಕೈಗೆತ್ತಿಕೊಂಡಿದ್ದಕ್ಕೆ ಆರ್.ಎನ್.ಎಸ್ ಇನ್‌ಫ್ರಾಸ್ಟ್ರಕ್ಟರ್ ಕಂಪನಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲ ಸಾರಿಗೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್.ವೈದ್ಯ, ಶಾಸಕರಾದ ಭೀಮಣ್ಣ ನಾಯ್ಕ, ದಿನಕರ ಶೆಟ್ಟಿ, ಜಿಲ್ಲಾಧಿಕಾರಿ ಕೆ.ಲಕ್ಷ್ಮಿ ಪ್ರೀಯಾ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳಿಗೆ ಪೋಲಿಯೋ ಬರದಂತೆ ಎಚ್ಚರಿಕೆ ವಹಿಸಿ: ಡೀಸಿ ಡಾ.ಕುಮಾರ್
ಜಗತ್ತಿಗೆ ಇಂದು ಶಾಂತಿ ಅಗತ್ಯ