ಬಾಲ್ಯ ವಿವಾಹ ನಿಯಂತ್ರಣಕ್ಕೆ ‘ಭದ್ರ ಬಾಲ್ಯ’: ಜಿಪಂನ ಕೀರ್ತನಾ

KannadaprabhaNewsNetwork |  
Published : Jul 23, 2025, 02:00 AM IST
ಚಿಕ್ಕಮಗಳೂರಿನ ಜಿಪಂ ಸಭಾಂಗಣದಲ್ಲಿ ಜಿಪಂ ಸಿಇಓ ಕೀರ್ತನಾ ಅವರು ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಸುಜಾತ, ಹಿಂದುಳಿದ ವರ್ಗಗಳ ಇಲಾಖೆಯ ಜಿಲ್ಲಾ ಅಧಿಕಾರಿ ಮಂಜುನಾಥ್‌ ಉಪಸ್ಥಿತರಿದ್ದರು. | Kannada Prabha

ಸಾರಾಂಶ

ಜಿಲ್ಲೆಯಲ್ಲಿ ನಡೆಯುತ್ತಿರುವ ಬಾಲ್ಯ ವಿವಾಹ ನಿಯಂತ್ರಣ ಮಾಡಲು ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ಭದ್ರ ಬಾಲ್ಯ ಕಾರ್ಯಕ್ರಮವನ್ನು ಜಾರಿಗೆ ತಂದಿದೆ. ಇದು, ಇದು ರಾಜ್ಯದಲ್ಲೇ ಮೊದಲ ಪ್ರಯತ್ನವಾಗಿದೆ ಎಂದು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್‌.ಎಸ್‌.ಕೀರ್ತನಾ ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಜಿಲ್ಲೆಯಲ್ಲಿ ನಡೆಯುತ್ತಿರುವ ಬಾಲ್ಯ ವಿವಾಹ ನಿಯಂತ್ರಣ ಮಾಡಲು ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ಭದ್ರ ಬಾಲ್ಯ ಕಾರ್ಯಕ್ರಮವನ್ನು ಜಾರಿಗೆ ತಂದಿದೆ. ಇದು, ಇದು ರಾಜ್ಯದಲ್ಲೇ ಮೊದಲ ಪ್ರಯತ್ನವಾಗಿದೆ ಎಂದು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್‌.ಎಸ್‌.ಕೀರ್ತನಾ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರೌಢಶಾಲೆಯಲ್ಲಿನ ಹೆಣ್ಣು ಮಕ್ಕಳಲ್ಲಿ ಶೈಕ್ಷಣಿಕವಾಗಿ ಅರಿವು ಮೂಡಿಸುವ ಜತೆಗೆ ಅವರ ಪೋಷಕರು ಹಾಗೂ ಶಿಕ್ಷಕರಲ್ಲೂ ಜಾಗೃತಿ ಮೂಡಿಸುವುದು ‘ಭದ್ರ ಬಾಲ್ಯ’ದ ಮೂಲ ಉದ್ದೇಶವಾಗಿದೆ ಎಂದು ತಿಳಿಸಿದರು.

ಶಾಲೆಗೆ ಬರುತ್ತಿರುವ ಹೆಣ್ಣುಮಕ್ಕಳು ದಿಢೀರನೆ ಶಾಲೆಯಿಂದ ಹೊರಗೆ ಉಳಿದರೆ ಅಂತಹ ಮಕ್ಕಳ ಮನೆಗೆ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು ತೆರಳಬೇಕು. ಶಾಲೆಗೆ ಬರದೆ ಇರುವುದಕ್ಕೆ ಕಾರಣಗಳನ್ನು ಪತ್ತೆ ಹಚ್ಚಬೇಕು. ಅಪ್ರಪ್ತಾ ಬಾಲಕಿಯನ್ನು ವಿವಾಹ ಮಾಡಿದರೆ ಕಾನೂನಿನ ಪ್ರಕಾರ ಶಿಕ್ಷೆ ವಿಧಿಸುವ ಬಗ್ಗೆ ಮಾಹಿತಿಯನ್ನು ಪೋಷಕರಿಗೆ ನೀಡಲಾಗುವುದು ಎಂದರು.

ಗ್ರಾಮಗಳಲ್ಲಿ ಈಗಾಗಲೇ ಹಕ್ಕು ಕಾವಲು ಸಮಿತಿಗಳನ್ನು ರಚನೆ ಮಾಡಲಾಗಿದೆ. ಈ ಸಮಿತಿಗಳು ಸಕ್ರೀಯವಾಗಿ ಕಾರ್ಯನಿರ್ವಹಿಸಬೇಕು. ಶಾಲೆಯಿಂದ ಹೊರಗುಳಿಯುವ ಹೆಣ್ಣು ಮಕ್ಕಳ ಮನೆಗಳಿಗೆ ನಿರಂತರವಾಗಿ ಭೇಟಿ ನೀಡಬೇಕು. ಅದನ್ನು ತಡೆಯುವ ಸಹಕರಿಸಿದ ವ್ಯಕ್ತಿಗೆ ಪಂಚಾಯಿತಿ ಕಟ್ಟೆಯಲ್ಲಿ ಸನ್ಮಾನಿಸಲಾಗುವುದು. ಹೀಗೆ ಮಾಡುವುದರಿಂದ ಬೇರೆಯವರು ಸಹ ಸ್ವಪ್ರೇರಣೆಯಿಂದ ಇಂತಹ ಕಾರ್ಯಕ್ಕೆ ಕೈ ಜೋಡಿಸಲಿದ್ದಾರೆ ಎಂದು ಹೇಳಿದರು.

ಶಾಲಾ ಹಂತದಲ್ಲೇ ವಿವಿಧ ಕಾರ್ಯಕ್ರಮಗಳನ್ನು ನಡೆಸಲು ಉದ್ದೇಶಿಸಲಾಗಿದೆ. ಶಾಲೆಗಳಲ್ಲಿ ವಿಶ್ವಾಸ ಪೆಟ್ಟಿಗೆ ಹಾಕಲಾಗುವುದು. ಹೆಣ್ಣುಮಕ್ಕಳು ತಮಗೆ ಯಾವುದಾದರೂ ರೀತಿಯಲ್ಲಿ ತೊಂದರೆಯಾದಲ್ಲಿ ಅದನ್ನು ಲಿಖಿತವಾಗಿ ಬರೆದು ಆ ಪೆಟ್ಟಿಗೆಯಲ್ಲಿ ಹಾಕಬೇಕು. ಪೋಷಕರ ಸಭೆಗೆ ತಂದೆ ತಾಯಿ ಕಡ್ಡಾಯವಾಗಿ ಹಾಜರಾಗಬೇಕು ಎಂದರು.

ಬದುಕಿನ ಬಗ್ಗೆ ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಲು ತಿಂಗಳಿಗೊಮ್ಮೆ ಅವರಿಗೆ ಹಳೆಯ ಸಿನಿಮಾವನ್ನು ತೋರಿಸಲು ಪಟ್ಟಿಯನ್ನು ಸಹ ಸಿದ್ಧಪಡಿಸುವ ಸಂಬಂಧ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆಯನ್ನು ನಡೆಸಿ ಚರ್ಚಿಸಲಾಗುವುದು ಎಂದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಸುಜಾತ, ಹಿಂದುಳಿದ ವರ್ಗಗಳ ಇಲಾಖೆಯ ಜಿಲ್ಲಾ ಅಧಿಕಾರಿ ಮಂಜುನಾಥ್‌ ಇತರರು ಹಾಜರಿದ್ದರು.

ರೈತ ಚೈತನ್ಯ ಕಾರ್ಯಕ್ರಮ ಜಾರಿ

ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ತಡೆಯುವ ಉದ್ದೇಶದಿಂದ ಕೃಷಿ ಇಲಾಖೆ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಸುಜಾತ ತಿಳಿಸಿದರು.

ಜಿಲ್ಲೆಯಾದ್ಯಂತ ಈ ಯೋಜನೆಯನ್ನು ಪ್ರಚುರ ಪಡಿಸುವ ಉದ್ದೇಶವನ್ನು ಹೊಂದಲಾಗಿದೆ. ಇದರ ಜತೆಗೆ ಸಕಾಲದಲ್ಲಿ ರೈತರಿಗೆ ಬೆಂಬಲ ಬೆಲೆ ನೀಡುವುದು. ಬ್ಯಾಂಕ್‌ಗಳ ಸಹಕಾರದೊಂದಿಗೆ ರೈತರಿಗೆ ಸಾಲ ಸೌಲಭ್ಯದ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಹೇಳಿದರು.

ಜಿಲ್ಲೆಯಲ್ಲಿ 2.28 ಲಕ್ಷ ಮಂದಿ ರೈತರು ಇದ್ದಾರೆ. ಆದರೆ, ಈವರೆಗೆ 1.32 ಲಕ್ಷ ಮಂದಿ ಕಿಸಾನ್‌ ಕಾರ್ಡ್ ಪಡೆದುಕೊಂಡಿದ್ದಾರೆ. ಒಂದೇ ಬೆಳೆ ಬೆಳೆಯುವುದರಿಂದ ಹವಮಾನ ವೈಪರಿತ್ಯದಿಂದಾಗಿ ನಷ್ಟವಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆ ಇರುವುದರಿಂದ ಇದನ್ನು ತಪ್ಪಿಸಲು ಸಮಗ್ರ ಕೃಷಿ ಬಗ್ಗೆ ಅರಿವು ಮೂಡಿಸಲಾಗುವುದು. ಕಡೂರು ಮತ್ತು ಅಜ್ಜಂಪುರ ತಾಲೂಕುಗಳಲ್ಲಿ ಅಂತರ್ಜಲ ಕುಸಿಯುತ್ತಿದೆ. ಇದರ ಮಹತ್ವ ಹಾಗೂ ಜಲ ಮರುಪೂರಣದ ಬಗ್ಗೆ ರೈತರಿಗೆ ಮಾಹಿತಿ ನೀಡಲಾಗುವುದು ಎಂದರು.

PREV

Recommended Stories

ಮಹಾಜನ ವರದಿ ಒಪ್ಪಿ, ಇಲ್ಲದಿದ್ರೆ ಯಥಾಸ್ಥಿತಿ ಇರಲಿ
ಸೂರಿಲ್ಲದವರಿಗೆ ಸೂರು ಒದಗಿಸುವ ಸಂಕಲ್ಪ: ವಿಜಯಾನಂದ ಕಾಶಪ್ಪನವರ